ವಿಧಾನ ಪರಿಷತ್: ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ, ಅದರಲ್ಲಿ ಔಷಧ ಗುಣ ಇದೆ ಎಂದು ಎಂ.ಎಸ್.ರಾಮಯ್ಯ ತಾಂತ್ರಿಕ ವಿವಿ (M.S. Ramaiah Technical University) ಸಂಶೋಧನಾ ವರದಿ ಹೇಳಿರುವುದಾಗಿ ವಿಧಾನಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. 1 ವರ್ಷದ ಹಿಂದೆ ಅಡಕೆಯಲ್ಲಿ (Arecanut) ಕ್ಯಾನ್ಸರ್ ಕಾರಕ ಅಂಶಗಳು ಇವೆಯೇ ಇಲ್ಲವೇ ಎಂಬುದನ್ನು ಸಂಶೋಧನೆ ನಡೆಸಲು ಹೇಳಿದ್ದೆವು ಎಂ.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದೆವು. ಅದರಂತೆ ನಡೆದ ಸಂಶೋಧನೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರಲ್ಲ, ಔಷಧ ಗುಣ ಇರುತ್ತದೆ ಎಂದು ವರದಿ ಸಲ್ಲಿಕೆಯಾಗಿದೆ ಎಂದರು.
ಹಿಂದಿನ ಸರ್ಕಾರ ಅಡಕೆಯಲ್ಲಿ ಕ್ಯಾನ್ಸರ್ ಗುಣ ಇರುತ್ತೆಂದು ಹೇಳಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ಸುಪ್ರೀಂಕೋರ್ಟ್‌ಗೆ ಹೋಗುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಪ್ರತಾಪ್ ಸಿಂಹ ನಾಯಕ್ ಅವರು ನಿಯಮ 330ರಡಿ ಅಡಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಅಡಕೆ ಬೆಳೆಗೆ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿದೆ. ನಿಯಂತ್ರಣ ಮಾಡುವ ಪ್ರಯತ್ನ ನಡೆದಿದೆ ಎಂದರು.
ಇದನ್ನೂ ಓದಿ: Marburg Disease: ಮಾರ್ಬರ್ಗ್ ರೋಗ ಅದರ ಲಕ್ಷಣ, ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ
ಅಡಕೆ ರೋಗದ ಬಗ್ಗೆ ಕೇಂದ್ರಕ್ಕೆ ರಾಜ್ಯ ನಿಯೋಗ ಭೇಟಿ ಕೊಟ್ಟಿತ್ತು. ಕೇಂದ್ರದಿಂದ ವೈಜ್ಞಾನಿಕ ತಂಡ ರಾಜ್ಯಕ್ಕೆ ಆಗಮಿಸಿದೆ. ಎಲೆಚುಕ್ಕಿ ರೋಗ ನಿಯಂತ್ರಣದ ಬಗ್ಗೆ ರೈತರಿಗೆ ತರಬೇತಿ ನೀಡಲಾಗಿದೆ. ಔಷಧ ಖರೀದಿಸಲು ಪ್ರತಿ ಹೆಕ್ಟೇರ್‌ಗೆ 4000 ರೂ. ನೀಡಲಾಗುತ್ತಿದೆ. ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ. ಹೇಗೆ ಕೊವಿಡ್‌ಗೆ ಔಷಧ ಕಂಡುಹಿಡಿಯಲಾಗಿದೆಯೋ ಅದೇ ರೀತಿ ಎಲೆಚುಕ್ಕಿ ರೋಗಕ್ಕೂ ಔಷಧ ಕಂಡುಹಿಡಿಯಲಾಗುತ್ತದೆ ಎಂದರು.
ಗುಟ್ಕಾ ನಿಷೇಧಿಸಿದ್ರೆ ಅಡಕೆ ಬೆಲೆ ವ್ಯಾಪಕವಾಗಿ ಕುಸಿಯುತ್ತದೆ. ಈಗ ಸದ್ಯ ಅಡಿಕೆ ಬೆಲೆ ಇದೆ. ಇಳುವರಿಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ನಡೆಯುತ್ತಿದೆ. ಅಡಿಕೆ ಉತ್ಪನ್ನ ಆರೋಗ್ಯಕ್ಕೆ ಪೂರಕ ಎಂದು ಸಾಬೀತು ಪಡಿಸಲು ಕೆಲವು ಸಂಶೋಧನೆಗಳು ನಡೆಯುತ್ತಿವೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಅಡಕೆ ಕೃಷಿಯನ್ನು 50 ಲಕ್ಷ ಜನ ಅವಲಂಬಿತರಾಗಿದ್ದಾರೆ. ಹೀಗಾಗಿ ಸರ್ಕಾರ ಕ್ರಮವಹಿಸಿದೆ, ಮತ್ತಷ್ಟು ವಹಿಸಬೇಕು ಎಂದು ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ