
ಬೆಂಗಳೂರು, ನವೆಂಬರ್ 19: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ತಮ್ಮ ಮಕ್ಕಳ ಜೊತೆ ಇಡೀ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಆಶಾ ಕಾರ್ಯಕರ್ತೆಯರ ಅಹವಾಲು ಈ ಕುರುಡು-ಕಿವುಡು ಕಾಂಗ್ರೆಸ್ ಸರ್ಕಾರಕ್ಕೆ ಕಾಣುತ್ತಲೂ ಇಲ್ಲ, ಕೇಳುತ್ತಲೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ತೀವ್ರ ಚಳಿ, ಸಮರ್ಪಕ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ತಾಯಂದಿರಿಗೆ, ಸೋದರಿಯರಿಗೆ ಅನುಕೂಲಗಳಿಲ್ಲದ ಪರಿಸ್ಥಿತಿಯಲ್ಲಿ ಹೋರಾಟ ಮುಂದುವರಿಸುತ್ತಿದ್ದರೂ, ರಾಜ್ಯ ಸರ್ಕಾರ ಸ್ಪಂದಿಸದೇ ಇರುವುದು ಕಳವಳಕಾರಿಯಾಗಿದೆ. ಹಲವಾರು ಸಂಕಷ್ಟಗಳ ನಡುವೆಯೂ, ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರ ಹಿತರಕ್ಷಣೆ ರಾಜ್ಯ ಸರ್ಕಾರದ ಕರ್ತವ್ಯ. ಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ತಾಯಿ-ಮಗುವಿನ ಆರೋಗ್ಯ, ಲಸಿಕೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸೇರಿದಂತೆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಸೇವೆ ಅಪಾರ ಎಂಬುದನ್ನು ವಿಜಯೇಂದ್ರ ಸರ್ಕಾರಕ್ಕೆ ನೆನಪಿಸಿದ್ದಾರೆ.
2023ರ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರ ನಿಗದಿತ ಮಾಸಿಕ ಗೌರವಧನವನ್ನು 5,000 ರೂ.ಗಳಿಂದ 8,000 ರೂ.ಗಳಿಗೆ ಹೆಚ್ಚಿಸುವ ಭರವಸೆಯನ್ನು ನೀಡಿದ್ದ ಕಾಂಗ್ರೆಸ್, ಮೊದಲು ನುಡಿದಂತೆ ನಡೆಯಲಿ. ಅಲ್ಲದೆ, ಕಳೆದ ವರ್ಷ, ಅಂದರೆ 2025ರ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರೇ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10,000 ರೂ. ನಿಗದಿತ ಗೌರವಧನ ನೀಡುವುದಾಗಿ, ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಘೋಷಿಸಿದ್ದರು. ಈಗ ಇದೇ ಕಾಂಗ್ರೆಸ್ ಪಕ್ಷದ ಸಚಿವರಾದ ಯು.ಟಿ.ಖಾದರ್ ಅವರು, ಕೇಂದ್ರ ಸರ್ಕಾರ 2,000 ರೂ. ನೀಡುತ್ತಿದೆ ಎಂದು ವಾಸ್ತವಕ್ಕೆ ವಿರುದ್ಧವಾದ ಹೇಳಿಕೆ ನೀಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ 2025ರ ಮಾರ್ಚ್‌ನಲ್ಲಿಯೇ ನಿಗದಿತ ಮಾಸಿಕ ಪ್ರೋತ್ಸಾಹ ಧನವನ್ನು 2,000 ರೂ.ಗಳಿಂದ 3,500 ರೂ.ಗಳಿಗೆ ಹೆಚ್ಚಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ಮೊದಲು ಈ ಕಾಂಗ್ರೆಸ್ ಸರ್ಕಾರ, ತಮ್ಮದೇ ಪ್ರಣಾಳಿಕೆಯ ಭರವಸೆ ಮತ್ತು ತಮ್ಮ ಹಿಂದಿನ ಮುಖ್ಯಮಂತ್ರಿಗಳ ಘೋಷಣೆಯನ್ನು ಈಡೇರಿಸುವ ನೈತಿಕ ಜವಾಬ್ದಾರಿಯನ್ನು ಈಡೇರಿಸಲಿ. ಮೊದಲು ತನ್ನ ಪಾಲಿನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ, ನಂತರ ಕೇಂದ್ರ ಸರ್ಕಾರದ ನೆರವು ಹೆಚ್ಚಳದ ಬಗ್ಗೆ ಚರ್ಚಿಸಲಿ. ಈ ವಿಷಯದಲ್ಲಿ ರಾಜಕೀಯ ಮಾಡದೆ, ಕೂಡಲೇ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು, ಅವರಿಗೆ ಆರ್ಥಿಕ ಭದ್ರತೆ ಮತ್ತು ಗೌರವಯುತ ಬದುಕು ಕಲ್ಪಿಸಲು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.