ಬೆಂಗಳೂರು, ಡಿಸೆಂಬರ್ 31: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ನಿಕಿತಾ ಸಿಂಘಾನಿಯಾ ಜಾಮೀನು ಪಡೆಯಲು ದಾಳವಾಗಿ ತಮ್ಮ ಮಗುವನ್ನು ಬಳಸಿಕೊಳ್ಳಲು ಬಿಡಬಾರದು ಎಂದು ವಕೀಲ ಆಕಾಶ್ ಜಿಂದಾಲ್ ಹೇಳಿದ್ದಾರೆ. ಪ್ರಕರಣದ ವಿಚಾರಣೆ ಇಂದು ಬೆಂಗಳೂರಿನ ಕೋರ್ಟ್ನಲ್ಲಿ ಲಿಸ್ಟ್ ಆಗಿದ್ದು, ಈ ಬಗ್ಗೆ ಟೆಕ್ಕಿ ಅತುಲ್ ಸುಭಾಷ್ ಪರ ವಕೀಲ ಆಕಾಶ್ ಜಿಂದಾಲ್ ಪ್ರತಿಕ್ರಿಯಿಸಿದ್ದಾರೆ.
ನಿಕಿತಾ ಮತ್ತು ಅವರ ಕುಟುಂಬದ ಜಾಮೀನು ಅರ್ಜಿಯನ್ನು ಇಂದು ಲಿಸ್ಟ್ ಮಾಡಲಾಗಿದೆ. ಅತುಲ್ ತಮ್ಮ ಆತ್ಮಹತ್ಯೆ ವೀಡಿಯೊದಲ್ಲಿ, ಮಗುವನ್ನು ನ್ಯಾಯಾಂಗ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಸಾಧನವಾಗಿ ಬಳಸಬಾರದು ಎಂದು ಉಲ್ಲೇಖಿಸಿದ್ದಾರೆ. ಮತ್ತು ಈಗ ಅದನ್ನೇ ಮಾಡಲಾಗುತ್ತಿದೆ. ಅವರ ಪರ ವಕೀಲರು ಇಂದು ಆ ರೀತಿ ವಾದಿಸಿದ್ದಾರೆ. ನಾವು ಆಕೆಯನ್ನು ಕಸ್ಟಡಿಗೆ ನೀಡಬೇಕೆಂದು ಕೋರುತ್ತಿದ್ದೇವೆ ಎಂದು ಜಿಂದಾಲ್ ಹೇಳಿದ್ದಾರೆ.
‘ತಾಯಿ ಮತ್ತು ಇಡೀ ಕುಟುಂಬವನ್ನು ಬಂಧಿಸಿರುವ ಕಾರಣ, ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ತಲೆಮರೆಸಿಕೊಂಡಿರುವಾಗ ಆಕೆಯನ್ನು ಬಂಧಿಸಲಾಗಿತ್ತು ಮತ್ತು ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಆಕೆ ಮತ್ತೆ ಮಗುವಿನೊಂದಿಗೆ ಪರಾರಿಯಾಗಲು ಪ್ರಯತ್ನಿಸಬಹುದು. ಆದ್ದರಿಂದ, ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಮತ್ತು ಜಾಮೀನು ಪಡೆಯಲು ಮಗುವನ್ನು ಸಾಧನವಾಗಿ ತೆಗೆದುಕೊಳ್ಳಲು ಆಕೆಗೆ ಅವಕಾಶ ನೀಡಬಾರದು’ ಎಂದು ಜಿಂದಾಲ್ ಹೇಳಿದ್ದಾರೆ.
ಬೆಂಗಳೂರು ನ್ಯಾಯಾಲಯ ನಿಕಿತಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿ 4 ರಂದು ನಡೆಸಲಿದೆ. ಸೋಮವಾರದಂದು ಅರ್ಜಿ ಸಲ್ಲಿಕೆಯಾಗಿತ್ತು. ಪ್ರತಿವಾದಿಯು ಜಾಮೀನು ಏಕೆ ನೀಡಬೇಕು ಎಂದು ಪ್ರಶ್ನಿಸಿ ವಾದ ಮಂಡಿಸಿದ್ದರು.
ವಿವಾಹ ವಿಚ್ಛೇದನಕ್ಕೆ 3 ಕೋಟಿ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದರಿಂದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಡಿಸೆಂಬರ್ 9 ರಂದು, ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, 90 ನಿಮಿಷಗಳ ವೀಡಿಯೊ ರೆಕಾರ್ಡ್ ಮಾಡಿ ಇಟ್ಟಿದ್ದರು ಮತ್ತು 40 ಪುಟಗಳ ಡೆತ್ ನೋಟ್ ಅನ್ನೂ ಬರೆದಿಟ್ಟಿದ್ದರು. ಅದರಲ್ಲಿ, ಪತ್ನಿ ಮತ್ತು ಅತ್ತೆಯರಿಂದ ಕಿರುಕುಳವಾದ ಬಗ್ಗೆ ವಿವರಿಸಿದ್ದರು.
ಇದನ್ನೂ ಓದಿ: ಅತುಲ್ ಸುಭಾಷ್ ಪ್ರಕರಣದ ಬಳಿಕ ಗುರುಗ್ರಾಮದ ವ್ಯಕ್ತಿಯಿಂದಲೂ ಪತ್ನಿ ವಿರುದ್ಧ ಮಾನಸಿಕ ಕಿರುಕುಳದ ಆರೋಪ
ಪ್ರಕರಣ ಸಂಬಂಧ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ಮತ್ತು ಸಹೋದರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಿಕಾಸ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 108 ಮತ್ತು 3 (5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Tue, 31 December 24