ಬಕ್ರೀದ್: ಚಾಮರಾಜಪೇಟೆ ಮೈದಾನದಲ್ಲಿ ಕುರಿ ಮಾರಾಟ ಜೋರು; ಪಂಜಾಬಿ, ಮಧುರೈ ತಳಿಗಳಿಗೆ ಹೆಚ್ಚಿದ ಬೇಡಿಕೆ

ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್​ಗೆ ಕ್ಷಣಗಣನೆ ಶುರುವಾಗಿದೆ. ಇತ್ತ ಬಕ್ರೀದ್​​ಗೆ ಇನ್ನೂ ಐದು ದಿನಗಳು ಇರುವಾಗಲೇ ಬೆಂಗಳೂರಿನಲ್ಲಿ ಮೇಕೆ, ಕುರಿಗಳ ವ್ಯಾಪಾರ ಗರಿಗೆದರಿದೆ. ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ವ್ಯಾಪಾರಿಗಳು ಕುರಿ, ಮೇಕೆ ವ್ಯಾಪಾರದಲ್ಲಿ ವ್ಯಸ್ತರಾಗಿದ್ದರೆ, ಇತ್ತ ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್​ಗೂ ಬೇಡಿಕೆ ಹೆಚ್ಚಾಗಿದೆ.

ಬಕ್ರೀದ್: ಚಾಮರಾಜಪೇಟೆ ಮೈದಾನದಲ್ಲಿ ಕುರಿ ಮಾರಾಟ ಜೋರು; ಪಂಜಾಬಿ, ಮಧುರೈ ತಳಿಗಳಿಗೆ ಹೆಚ್ಚಿದ ಬೇಡಿಕೆ
ಚಾಮರಾಜಪೇಟೆ ಮೈದಾನದಲ್ಲಿ ಕುರಿ ಮಾರಾಟ ಜೋರು
Edited By:

Updated on: Jun 03, 2025 | 9:48 AM

ಬೆಂಗಳೂರು, ಜೂನ್ 3: ಮುಸಲ್ಮಾನರ ಪವಿತ್ರ ಬಕ್ರೀದ್ (Bakrid) ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳ 7ನೇ ತಾರೀಕು ಬಕ್ರೀದ್ ಆಚರಿಸಲಾಗುತ್ತಿದ್ದು, ಹಬ್ಬಕ್ಕೆ ಐದು ದಿನಗಳು ಬಾಕಿ ಇರುವಾಗಲೇ ಮೇಕೆ ಹಾಗೂ ಕುರಿಗಳ ಮಾರಾಟ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ಸಲ ಕೂಡ ಚಾಮರಾಜಪೇಟೆ ಮೈದಾನದಲ್ಲಿ ಕುರಿ, ಮೇಕೆಗಳ ಮಾರಾಟ ಭರದಿಂದ ಸಾಗಿದೆ. ವಿವಿಧ ಜಿಲ್ಲೆಗಳಿಂದ ಮೇಕೆ, ಕುರಿಗಳ ಸಮೇತ ಬಂದಿರುವ ವ್ಯಾಪಾರಸ್ಥರು ಬೆಂಗಳೂರಿನ ಚಾಮರಾಜಪೇಟೆಯ (Chamarajpet) ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. 20 ಸಾವಿರ ರೂಪಾಯಿಯಿಂದ ಹಿಡಿದು 1 ಲಕ್ಷ ರೂಪಾಯಿ ತನಕ ಬೆಲೆಬಾಳುವ ಕುರಿಗಳು ಹಾಗೂ ಮೇಕೆಗಳ ತಳಿಗಳು ಮೈದಾನದಲ್ಲಿ ಲಭ್ಯವಾಗುತ್ತಿದ್ದು, ಇತ್ತ ಕುರಿ, ಮೇಕೆಗಳ ತೂಕಕ್ಕೆ ತಕ್ಕಂತೆ ವ್ಯಾಪಾರದ ಭರಾಟೆ ಕೂಡ ಜೋರಾಗಿದೆ.

ಈ ಸಹ ಬಕ್ರೀದ್ ಹಬ್ಬದ ಸಡಗರಕ್ಕೆ ಮೇಕೆ,ಕುರಿಗಳನ್ನು ಖರೀದಿಸಲು ಬರುವವರಿಗೆ ಸ್ಥಳೀಯ ತಳಿಗಳ ಜೊತೆಗೆ ಮಧುರೈ, ಅಮೀನ್ ಗಡ್, ಜವಾರಿ, ಪಂಜಾಬಿ ತಳಿಗಳ ಕುರಿಗಳು ಹಾಗೂ ಮೇಕೆಗಳು ಕೂಡ ಲಭ್ಯವಿವೆ. ಇತ್ತ ಹಬ್ಬಕ್ಕೆ ಇನ್ನೂ ಸಮಯ ಇರುವಾಗಲೇ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ವ್ಯಾಪಾರಸ್ಥರು ಕೂಡ ಖುಷಿ ಆಗಿದ್ದಾರೆ. ಒಂದೆರಡು ದಿನಗಳಲ್ಲೇ ಕುರಿಗಳು ಮಾರಾಟ ಆಗುತ್ತಿರುವುದು ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ರೈತರು ಹಾಗೂ ವ್ಯಾಪಾರಸ್ಥರಿಗೆ ಸಂತಸ ತಂದಿದೆ.

ಇತ್ತ ಕುರಿ-ಮೇಕೆಗಳ ಜೊತೆಗೆ ಡ್ರೈ ಫ್ರೂಟ್ಸ್​​ಗೂ ಬೇಡಿಕೆ ಹೆಚ್ಚಾಗಿದ್ದು, ರಸೆಲ್ ಮಾರ್ಕೆಟ್, ಕೆಆರ್ ಮಾರ್ಕೆಟ್ ಸೇರಿ ಹಲವೆಡೆ ಡ್ರೈಫ್ರೂಟ್ಸ್ ಮಾರಾಟ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಒಣದ್ರಾಕ್ಷಿ, ಖರ್ಜೂರ, ಬಾದಾಮಿ, ಗೋಡಂಬಿ ಜೊತೆಗೆ ಬಗೆ ಬಗೆಯ ಡ್ರೈ ಫ್ರೂಟ್ಸ್ ಹಾಗೂ ಸಿಹಿತಿಂಡಿಗಳೂ ಭರ್ಜರಿ ವ್ಯಾಪಾರ ಆಗುತ್ತಿವೆ.

ಇದನ್ನೂ ಓದಿ
ಆರ್​ಸಿಬಿ ಗೆದ್ರೆ ಅತಿರೇಕದ ವರ್ತನೆ ಬೇಡ; ಕಟ್ಟೆಚ್ಚರಕ್ಕೆ ಪೊಲೀಸರಿಗೆ ಸೂಚನೆ
ಬಿಬಿಎಂಪಿ ಶುಭ ಸುದ್ದಿ: ಬಿ ಖಾತಾ ಬದಲಿಗೆ ಎ ಖಾತಾ ನೀಡುವ ಸುಳಿವು!
ಐತಿಹಾಸಿಕ ಸದಾಶಿವಗಡ ಕೊಟೆಯ ಮೇಲೆ ಜಂಗಲ್ ಲಾಡ್ಜ್ ಕಣ್ಣು: ಸ್ಥಳೀಯರ ವಿರೋಧ
ಗರ್ಭಿಣಿ ಪ್ರೇಯಸಿ ಜತೆ ಸೇರಿ ಪ್ರಿಯಕರನಿಂದ ಕಳ್ಳತನ, ಪೊಲೀಸ್ ಬಲೆಗೆ ಲವರ್ಸ್

ಇದನ್ನೂ ಓದಿ: ಆರ್​ಸಿಬಿ ಗೆದ್ರೆ ಅತಿರೇಕದ ವರ್ತನೆ ಬೇಡ; ಬೆಂಗಳೂರಿನಲ್ಲಿ ಕಟ್ಟೆಚ್ಚರಕ್ಕೆ ಪೊಲೀಸ್ ಕಮಿಷನರ್ ಸೂಚನೆ

ಸದ್ಯ ಪಹಲ್ಗಾಮ್ ದಾಳಿ ಬಳಿಕ ಡ್ರೈ ಫ್ರೂಟ್ಸ್ ಆಮದಿನಲ್ಲಿ ಸಮಸ್ಯೆ ಎದುರಿಸಿದ್ದ ವ್ಯಾಪಾರಿಗಳು ಇದೀಗ ಬಕ್ರೀದ್ ಬರುತ್ತಿದ್ದಂತೆ ಎಂದಿನಂತೆ ವ್ಯಾಪಾರ ಚಟುವಟಿಕೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ರಾಜಧಾನಿಯಲ್ಲೂ ಬಕ್ರೀದ್ ಹಬ್ಬದ ಸಡಗರಕ್ಕೆ ಸಿದ್ಧತೆಗಳು ಜೋರಾಗಿದ್ದು ಸದ್ಯ ಶಾಂತಿಯುತವಾಗಿ ಹಬ್ಬ ಆಚರಣೆಗೆ ತಯಾರಿ ಕೂಡ ಭರದಿಂದ ಸಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ