Bengaluru Air Quality: ದಿನೇ ದಿನೇ ಹದಗೆಡುತ್ತಿರುವ ಗಾಳಿಯ ಗುಣಮಟ್ಟ, ದೆಹಲಿಯನ್ನು ನೆನಪಿಸುತ್ತಿದೆ ಬೆಂಗಳೂರಿನ ಏರ್ ಕ್ವಾಲಿಟಿ

ಬೆಂಗಳೂರಿನ ವಾಯು ಗುಣಮಟ್ಟ (AQI) 170ಕ್ಕೆ ಕುಸಿದಿದ್ದು, ಕಳೆದ ಐದು ವರ್ಷಗಳಲ್ಲಿ 20-25% ಹೆಚ್ಚಳ ಕಂಡಿದೆ. PM2.5 ಮಟ್ಟವು WHO ಮಿತಿಗಿಂತ 4 ಪಟ್ಟು ಹೆಚ್ಚಾಗಿದ್ದು, ಮುಂಬೈ, ಕೋಲ್ಕತ್ತಾಗೆ ಸವಾಲು ಹಾಕುವ ಮಟ್ಟಕ್ಕೆ ಮಾಲಿನ್ಯ ತಲುಪಿದೆ. ಇದು ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ಹೇಳುತ್ತಾರೆ.

Bengaluru Air Quality: ದಿನೇ ದಿನೇ ಹದಗೆಡುತ್ತಿರುವ ಗಾಳಿಯ ಗುಣಮಟ್ಟ, ದೆಹಲಿಯನ್ನು ನೆನಪಿಸುತ್ತಿದೆ ಬೆಂಗಳೂರಿನ ಏರ್ ಕ್ವಾಲಿಟಿ
ದೆಹಲಿಯನ್ನು ನೆನಪಿಸುತ್ತಿದೆ ಬೆಂಗಳೂರಿನ ಏರ್ ಕ್ವಾಲಿಟಿ

Updated on: Dec 23, 2025 | 8:28 AM

ಬೆಂಗಳೂರು, ಡಿಸೆಂಬರ್ 23: ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ (Bengaluru Air Quality) ದಿನೇ ದಿನೇ ಕುಸಿಯುತ್ತಿದೆ. ಏರ್ ಕ್ವಾಲಿಟಿಯಲ್ಲಿ ಬಳ್ಳಾರಿ, ಬೆಂಗಳೂರನ್ನೇ ಮೀರಿಸಿದರೂ ಬೆಂಗಳೂರಿನ ವಾತಾವರಣ ದೆಹಲಿಗಿಂತ ಭಿನ್ನವಾಗಿಲ್ಲವೆನ್ನುತ್ತಾರೆ ತಜ್ಞರು. ಕಳೆದ 5 ವರ್ಷಗಳಿಂದ ಇಲ್ಲಿನ ಗಾಳಿಯ ಗುಣಮಟ್ಟ ಹದಗೆಡುತ್ತಲೇ ಇದ್ದು, ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ.

ಮುಂಬೈ, ಕಲ್ಕತ್ತಾಗೆ ಪೈಪೋಟಿ ನೀಡುತ್ತಿದೆ ಬೆಂಗಳೂರು

ಬೆಂಗಳೂರಿನ ವಾಯು ಗುಣಮಟ್ಟವು (AQI) ಹಿಂದೆಂದಿಗಿಂತಲೂ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ನಗರದಲ್ಲಿ AQI 170 ದಾಖಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಮಾಲಿನ್ಯ ಮಟ್ಟದಲ್ಲಿ ಸರಾಸರಿ 20-25% ಏರಿಕೆ ಕಂಡುಬಂದಿದೆ. ವಾಯು ಮಾಲಿನ್ಯದ ರಾಜಧಾನಿ ಎನಿಸಿಕೊಂಡಿರುವ ದೆಹಲಿಯ AQI ಇಂದು 584 ದಾಟಿ ‘ಅತ್ಯಂತ ಅಪಾಯಕಾರಿ’ ಹಂತದಲ್ಲಿದೆ.

ಇದಕ್ಕೆ ಹೋಲಿಸಿದರೆ ಬೆಂಗಳೂರು ಉತ್ತಮ ಸ್ಥಿತಿಯಲ್ಲಿದ್ದರೂ, ಇಲ್ಲಿನ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಮುಂಬೈ (169) ಮತ್ತು ಕೋಲ್ಕತ್ತಾ (182) ನಗರಗಳಿಗೆ ಹೋಲಿಸಿದರೆ ಬೆಂಗಳೂರು ಅವುಗಳಿಗೆ ಈಗ ಹತ್ತಿರದ ಪೈಪೋಟಿ ನೀಡುತ್ತಿದೆ. ವಿಶೇಷವೆಂದರೆ, ಹತ್ತು ವರ್ಷಗಳ ಹಿಂದೆ ದೆಹಲಿ ಮತ್ತು ಬೆಂಗಳೂರಿನ ಮಾಲಿನ್ಯದ ನಡುವೆ 300% ವ್ಯತ್ಯಾಸವಿತ್ತು, ಆದರೆ ಇಂದು ಆ ಅಂತರವು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ.

ಕಣ್ಣಿಗೆ ಕಾಣದ ಶತ್ರು PM

ಬೆಂಗಳೂರಿನ ಇಂದಿನ ಗಾಳಿಯಲ್ಲಿ PM2.5, 64µg/m³ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ಸುರಕ್ಷಿತ ಮಿತಿಗಿಂತ (15 µg/m³) ಸುಮಾರು 4.2 ಪಟ್ಟು ಹೆಚ್ಚಾಗಿದೆ. PM ಎಂದರೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು. PM2.5 ಎಂದರೆ ವಾಯುವಿನಲ್ಲಿರುವ ಸಣ್ಣ ಗಾತ್ರದ ಕಣಗಳಾದರೆ, PM10 ಎಂದರೆ ಸ್ವಲ್ಪ ದೊಡ್ಡ ಗಾತ್ರದ ಕಣಗಳಾಗಿವೆ. ಬೆಂಗಳೂರಿನಲ್ಲಿ ಈಗ ವಾಹನಗಳ ಸಂಖ್ಯೆ 1.2 ಕೋಟಿ ದಾಟಿದ್ದು, ನಗರದ ಮಾಲಿನ್ಯಕ್ಕೆ 42% ರಷ್ಟು ಕೊಡುಗೆ ನೀಡುತ್ತಿರುವುದು ಈ ವಾಹನಗಳ ಹೊಗೆ.

ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ AQI ಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಹೀಗಿರುವಾಗ ಬಳ್ಳಾರಿಯ ಜನ ಮುಂಜಾಗೃತಾ ಕ್ರಮ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ ಪ್ರವಾಸಿಗರೇ ಎಚ್ಚರ: ಕಳಪೆ ಏರ್ ಕ್ವಾಲಿಟಿಯಲ್ಲಿ ಬೆಂಗಳೂರನ್ನೂ ಮೀರಿಸುತ್ತಿದೆ ಈ ಜಿಲ್ಲೆ!

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –170
  • ಮಂಗಳೂರು – 158
  • ಮೈಸೂರು – 123
  • ಬೆಳಗಾವಿ – 182
  • ಕಲಬುರ್ಗಿ – 134
  • ಶಿವಮೊಗ್ಗ – 84
  • ಬಳ್ಳಾರಿ – 196
  • ಹುಬ್ಬಳ್ಳಿ- 120
  • ಉಡುಪಿ – 146
  • ವಿಜಯಪುರ –132

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:25 am, Tue, 23 December 25