ಸೆ.26 ರಂದು ಬೆಂಗಳೂರು ಬಂದ್​: ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘಗಳಿಂದ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಕರ್ನಾಟಕದಲ್ಲಿ ರೈತರ ಆಕ್ರೋಶ ಹೆಚ್ಚಾಗುತ್ತಿದ್ದು, ಸೆ.26 ರಂದು ಬೆಂಗಳೂರು ಬಂದ್​ಗೆ ಕರೆ ನೀಡಲಾಗಿದೆ. ಈ ಬಂದ್​ಗೆ ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘಗಳು ಬೆಂಬಲ ಸೂವಿಸಿದ್ದು, ಹೊಟೇಲ್ ಮಾಲೀಕರ ಸಂಘ ನೈತಿಕ ಬೆಂಬಲ ಸೂಚಿಸಿದೆ. ಹಾಗಿದ್ದರೆ ಬಂದ್​ಗೆ ಯಾವೆಲ್ಲ ಸಂಘಟನೆಗಳು ಬೆಂಬಲ ಸೂಚಿಸಿವೆ? ಎಂಬುದು ಇಲ್ಲಿದೆ.

ಸೆ.26 ರಂದು ಬೆಂಗಳೂರು ಬಂದ್​: ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘಗಳಿಂದ ಬೆಂಬಲ
ಬೆಂಗಳೂರು ಬಂದ್​ಗೆ ಬೆಂಬಲ ಸೂಚಿಸಿದ ಹಲವು ಸಂಘಟನೆಗಳು (ಸಾಂದರ್ಭಿಕ ಚಿತ್ರ)
Edited By:

Updated on: Sep 23, 2023 | 4:41 PM

ಬೆಂಗಳೂರು, ಸೆ.23: ತಮಿಳುನಾಡಿಗೆ ಕಾವೇರಿ (Cauvery) ನೀರು ಹರಿಸದಂತೆ ಕರ್ನಾಟಕದಲ್ಲಿ ರೈತರ ಆಕ್ರೋಶ ಹೆಚ್ಚಾಗುತ್ತಿದ್ದು, ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಸೆ.26 ರಂದು ಬೆಂಗಳೂರು ಬಂದ್​ಗೆ (Bangalore Bandh) ಕರೆ ನೀಡಿದೆ. ಈ ಬಂದ್​ಗೆ ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘಗಳು ಬೆಂಬಲ ಸೂವಿಸಿದ್ದು, ಹೊಟೇಲ್ ಮಾಲೀಕರ ಸಂಘ ನೈತಿಕ ಬೆಂಬಲ ಸೂಚಿಸಿದೆ. ಹಾಗಿದ್ದರೆ ಬಂದ್​ಗೆ ಯಾವೆಲ್ಲ ಸಂಘಟನೆಗಳು ಬೆಂಬಲ ಸೂಚಿಸಿವೆ? ಎಂಬುದು ಇಲ್ಲಿದೆ.

ಬೆಂಗಳೂರು ಬಂದ್​ಗೆ ಬೆಂಬಲ ಸೂಚಿಸುವ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಾವೆಲ್ಲರೂ ಸಭೆ ಸೇರಿ ಬಂದ್ ಬೆಂಬಲಿರುವ ಬಗ್ಗೆ ನಿರ್ಧರಿಸಿದ್ದೇವೆ. ನೆಲ, ಜಲ, ಭಾಷೆ ವಿಷಯ ಬಂದಾಗ ಚಿತ್ರರಂಗ ಬೆಂಬಲಕ್ಕೆ ನಿಂತಿದೆ. ಹುಬ್ಬಳ್ಳಿ, ಕೋಲಾರಕ್ಕೆ ಹೋಗಿ ಪ್ರತಿಭಟನೆ ನಡೆಸಿದ್ದೇವೆ. ಈ ಬಾರಿಯು ಕೂಡ ಎಲ್ಲಾ ದಿಗ್ಗಜರು ಬಂದ್​ನಲ್ಲಿ ಭಾಗಿ ಆಗುತ್ತಾರೆ. ಹೋರಾಟದಲ್ಲಿ ಚಿತ್ರರಂಗ ಭಾಗಿಯಾಗುತ್ತಿಲ್ಲ ಎಂಬ ಸಂದೇಶ ಬೇಡ ಎಂದರು.

ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಬೆಂಗಳೂರು ಬಂದ್​ಗೆ ನೈತಿಕ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Cauvery Water Dispute:ಮಂಗಳವಾರ ಬೆಂಗಳೂರು ಸಂಪೂರ್ಣ ಬಂದ್, ಶಾಲಾ ಕಾಲೇಜುಗಳಿಗೆ ರಜೆ ನೀಡಿ ನಮ್ಮನ್ನು ಬೆಂಬಲಿಸಿ ಎಂದ ಕುರುಬೂರು ಶಾಂತಕುಮಾರ್

ಅದೇ ರೀತಿ, ಬೆಂಗಳೂರು ಬಂದ್​ಗೆ ಓಲಾ, ಉಬರ್ ಸಂಘದಿಂದ ಬೆಂಬಲ ವ್ಯಕ್ತವಾಗಿದ್ದು, ನಗರದಾದ್ಯಂತ ಓಲಾ, ಉಬರ್ ಕ್ಯಾಬ್​ಗಳನ್ನು ರಸ್ತೆಗಿಳಿಸದಿರಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಟಿವಿ9ಗೆ ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾಹಿತಿ ನೀಡಿದ್ದಾರೆ.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿವೆ. ಮಂಡ್ಯದಲ್ಲಿ ನಡೆದ ರೈತ ಹೋರಾಟದಲ್ಲಿ ವಿಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ. ಅದೇ ರೀತಿ ಬೆಂಗಳೂರು ಬಂದ್​ಗೆ ನಮ್ಮ ಬೆಂಬಲ ಇದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ನಾಯಕರು ಕೂಡ ಬೆಂಬಲ ಸೂಚಿಸಿದ್ದಾರೆ.

ಕಾವೇರಿ ಹೋರಾಟವನ್ನು ಯಾರೇ ಮಾಡಿದರೂ ಅದಕ್ಕೆ ಬಿಜೆಪಿ ಬೆಂಬಲ ಕೊಡುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಕೂಡಲೇ ಹಿಂಪಡೆಯಲಿ. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ದೊಡ್ಡ ಲಾಭ ಮಾಡಿಕೊಟ್ಟಿದೆ. ಇಂತಹ ಹೇಡಿ ನಿರ್ಧಾರವನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಿದ್ದೇವೆ ಎಂದರು.

ಕಾವೇರಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ ಮಾಜಿ ಸಚಿವ ಬಿಸಿ ಪಾಟೀಲ್, ಚಿತ್ರರಂಗದವರೆಲ್ಲರೂ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಬೆಂಗಳೂರಿಗರು ಕಾವೇರಿಯನ್ನೇ ನಂಬಿದ್ದಾರೆ. ಕಾಂಗ್ರೆಸ್ ಸರ್ಜಾದ ವೈಪಲ್ಯದಿಂದ ಇದೆಲ್ಲಾ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ