ಸ್ಟಾರ್ಟಪ್ ಮಾತ್ರವಲ್ಲ, ಉದ್ಯೋಗ ಸೃಷ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ ಬೆಂಗಳೂರು; ಅಧ್ಯಯನ ವರದಿ

|

Updated on: Aug 17, 2023 | 10:00 PM

Bengaluru Startup Ecosystem; ಉತ್ತಮ ಪ್ರತಿಭಾನ್ವಿತರ ಅತಿಹೆಚ್ಚಿನ ಲಭ್ಯತೆಯ ವಿಚಾರದಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿವೆತ್ತಿರುವ ಬೆಂಗಳೂರಿನಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳು ನೆಲೆಗೊಳ್ಳಲು ಪ್ರತಿಭೆಯ ಸಮೃದ್ಧಿ ಹಾಗೂ ಲಭ್ಯತೆಯೇ ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಸ್ಟಾರ್ಟಪ್ ಮಾತ್ರವಲ್ಲ, ಉದ್ಯೋಗ ಸೃಷ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ ಬೆಂಗಳೂರು; ಅಧ್ಯಯನ ವರದಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 17: ದೇಶದ ಸ್ಟಾರ್ಟಪ್ ರಾಜಧಾನಿಯಾಗಿರುವ (Startup Capital) ಬೆಂಗಳೂರು (Bengaluru) ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಸ್ಥಾನ ಪಡೆದಿರುವುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಇಂಕ್ 42 (Inc42, ಇದು ದೇಶದಲ್ಲಿ ಸ್ಟಾರ್ಟಪ್​ಗೆ ಪೂರಕ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆ) ನಡೆಸಿದ ಅಧ್ಯಯನವು ಭಾರತದ ಮುಂಚೂಣಿಯಲ್ಲಿರುವ 10 ಸ್ಟಾರ್ಟ್‌ಅಪ್‌ಗಳಲ್ಲಿ ಐದು ಬೆಂಗಳೂರಿನಲ್ಲಿ ನೆಲೆಗೊಂಡಿವೆ ಎಂದು ತಿಳಿಸಿದೆ. ಉದ್ಯೋಗ ಸೃಷ್ಟಿಸುವ ಸ್ಟಾರ್ಟ್‌ಅಪ್‌ಗಳ ವಿಷಯದಲ್ಲಿ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮುಂಚೂಣಿಯಲ್ಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಫ್ಲಿಪ್‌ಕಾರ್ಟ್ 47,859 ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಎಜುಟೆಕ್ ದೈತ್ಯ ಬೈಜೂಸ್ 35,094 ಉದ್ಯೋಗ ಸೃಷ್ಟಿಯೊಂದಿಗೆ ನಂತರದ ಸ್ಥಾನದಲ್ಲಿದ್ದರೆ (ಇವು 2021-22 ಸಂಖ್ಯೆಗಳು), ಆ ಬಳಿಕದ ಸ್ಥಾನದಲ್ಲಿ ಓಲಾ ಇದೆ. ಈ ಕಂಪನಿಯು 21,027 ಉದ್ಯೋಗಗಳನ್ನು ಸೃಷ್ಟಿಸಿದೆ. ಒಟ್ಟಾರೆಯಾಗಿ, ಅಗ್ರ 10 ಯುನಿಕಾರ್ನ್‌ಗಳು ಭಾರತದಲ್ಲಿ ಸುಮಾರು 1.8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ.

ಉತ್ತಮ ಪ್ರತಿಭಾನ್ವಿತರ ಅತಿಹೆಚ್ಚಿನ ಲಭ್ಯತೆಯ ವಿಚಾರದಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿವೆತ್ತಿರುವ ಬೆಂಗಳೂರಿನಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳು ನೆಲೆಗೊಳ್ಳಲು ಪ್ರತಿಭೆಯ ಸಮೃದ್ಧಿ ಹಾಗೂ ಲಭ್ಯತೆಯೇ ಪ್ರಮುಖ ಕಾರಣವಾಗಿದೆ.

ಎಲಿವೇಶನ್ ಕ್ಯಾಪಿಟಲ್ (ಇದು ಫಸ್ಟ್‌ಕ್ರೈ, ಅಕೋ ಮತ್ತು ಜಸ್ಟ್ ಡಯಲ್‌ನಂತಹ ಸಂಸ್ಥೆಗಳಲ್ಲಿ ಹೂಡಿಕೆಯನ್ನು ಹೊಂದಿದೆ) ವರದಿಯ ಪ್ರಕಾರ, ಪ್ರತಿಭಾನ್ವಿತರ ಲಭ್ಯತೆ ಹೈದರಾಬಾದ್‌ನಲ್ಲಿ ಶೇ 21, ಪುಣೆ/ಮುಂಬೈನಲ್ಲಿ ಶೇ 10 ಮತ್ತು ಚೆನ್ನೈನಲ್ಲಿ, ದೆಹಲಿಯಲ್ಲಿ ಕೇವಲ ಶೇ 8 ರಷ್ಟು ಇವೆ. ಈ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪ್ರತಿಭಾನ್ವಿತರ ಲಭ್ಯತೆ ಪ್ರಮಾಣ ಶೇ 51 ರಷ್ಟು ಇದೆ.

ಫ್ಲಿಪ್‌ಕಾರ್ಟ್ ಅಥವಾ ಓಲಾ, ಸ್ವಿಗ್ಗಿ ಅಥವಾ ಬಿಗ್‌ಬಾಸ್ಕೆಟ್‌ನಂತಹ ಕಂಪನಿಗಳ ವಿಷಯದಲ್ಲಿ ಗಮನಾರ್ಹ ಸಂಗತಿಯೆಂದರೆ, ಈ ಸಂಸ್ಥೆಗಳು ವೈಟ್‌ಕಾಲರ್‌ನ ಉದ್ಯೋಗಗಳನ್ನು ಮಾತ್ರವಲ್ಲದೆ ಕಡಿಮೆ ಮಟ್ಟದ ಕೌಶಲ ಮತ್ತು ಶಿಕ್ಷಣ ಹೊಂದಿರುವ ಜನರಿಗೆ ಕೂಡ ಉದ್ಯೋಗಗಳನ್ನು ನೀಡಿವೆ.

ಇದನ್ನೂ ಓದಿ: ಸ್ಟಾರ್ಟಪ್​ಗೆ ಪೂರಕ ವಾತಾವರಣ; ಜಾಗತಿಕ ರ‍್ಯಾಂಕಿಂಗ್​ನಲ್ಲಿ ಬೆಂಗಳೂರಿಗೆ 8ನೇ ಸ್ಥಾನ

ಜಾಗತಿಕವಾಗಿ ಸ್ಟಾರ್ಟಪ್​ಗೆ ಪೂರಕ ವಾತಾವರಣ ಇರುವ ನಗರಗಳ ರ‍್ಯಾಂಕಿಂಗ್​ನಲ್ಲಿ ಬೆಂಗಳೂರು 8 ನೇ ಸ್ಥಾನ ಪಡೆದುಕೊಂಡಿರುವ ಬಗ್ಗೆ ಬುಧವಾರ ವರದಿಯಾಗಿತ್ತು. ಇದರೊಂದಿಗೆ, 2023 ರಲ್ಲಿ ಸ್ಟಾರ್ಟಪ್​ಗೆ ಪೂರಕ ವಾತಾವರಣ ಇರುವ ಅಗ್ರ 10 ನಗರಗಳಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರವಾಗಿ ಬೆಂಗಳೂರು ಗುರುತಿಸಿಕೊಂಡಿದೆ. ದೆಹಲಿಗೆ 13ನೇ ಸ್ಥಾನ ದೊರೆತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ