
ಕರ್ನಾಟಕ ವಿಧಾನ ಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದಂತೆ ರಾಜಕೀಯ ಪಕ್ಷಗಳು ದಿನದಿಂದ ದಿನಕ್ಕೆ ಪ್ರಚಾರ ಹೆಚ್ಚುಮಾಡುತ್ತಿವೆ. ನಾನಾ ಸರ್ಕಸ್ಗಳನ್ನು ಮಾಡುತ್ತಿವೆ. ಸದ್ಯ ನಿನ್ನೆ(ಫೆ.27) ಪ್ರಧಾನಿ ನರೇಂದ್ರ ಮೋದಿ(Narendra Modi Karnataka Visit) ಶಿವಮೊಗ್ಗ, ಬೆಳಗಾವಿಗೆ ಭೇಟಿ ನೀಡಿ ಅನೇಕ ಕಾಮಗಾರಿ, ಯೋಜನೆಗಳನ್ನು ಉದ್ಘಾಟಿಸಿ ಜನರಲ್ಲಿ ವಿಶ್ವಾಸದ ಬೀಜ ಬಿತ್ತಿದ್ದಾರೆ. ದೇಶದ ಅಭಿವೃದ್ಧಿ ಬಿಜೆಪಿ ಸರ್ಕಾರದ ಕೈಯಲ್ಲಿದೆ ಎಂಬ ಸಂದೇಶ ಸಾರಿದ್ದಾರೆ. ಮತ್ತೊಂದೆಡೆ ಇತರೆ ಪಕ್ಷಗಳು ಕೂಡ ನಾನಾ ಪ್ರಯತ್ನಕ್ಕೆ ಕೈ ಹಾಕುತ್ತಿವೆ. ಇಂದು ಚಿಕ್ಕಮಗಳೂರಿಗೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಇಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಹಾಗೂ ಗದಗ ಜಿಲ್ಲೆ ರೋಣ, ನರಗುಂದ ಕ್ಷೇತ್ರದಲ್ಲಿ ಪ್ರಜಾಧ್ವನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬನ್ನಿ ಚುನಾವಣೆಗೆ ರಾಜಕೀಯ ಪಕ್ಷಗಳ ಗುದ್ದಾಟ, ಪ್ರಚಾರ ಇಂದು ಹೇಗಿದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಕಾರ್ಯಕ್ರಮ ಮನೆಮನೆಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜಿಲ್ಲಾದ್ಯಕ್ಷ ಎಂ.ಕೆ.ತಾಜ್ ಪೀರ್ ವಿರುದ್ಧ ಮಯೂರ ಆಕ್ರೋಶ ಹೊರಹಾಕಿದರು. ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಬಗ್ಗೆ ಜನರಿಗೆ ತಿಳಿಸುವಲ್ಲಿ ವಿಫಲ ಎಂದು ಕುಪಿತಗೊಂಡ ಮಯೂರ ಅವರು ಸಭೆಯಿಂದ ಹೊರನಡೆಯಲು ಮುಂದಾದರು. ಈ ವೇಳೆ ಮುಖಂಡರು ಅವರ ಮನವೊಲಿಸಿ ಮರಳಿ ಸಭೆಗೆ ಕರೆತಂದರು.
ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಅವರಿಗೆ ಕಾಲು, ಮಂಡಿ ನೋವಿದೆ, ಮನೆಯಲ್ಲಿ ವಿಶ್ರಾಂತಿ ಸಿಗುತ್ತಿಲ್ಲ. ಅವರು ನಾನು ಪ್ರವಾಸಕ್ಕೆ ಹೋಗಲೇಬೇಕು ಅಂತಿದ್ದಾರೆ. ಮನೆಗೆ ಜನ ಬಂದು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಇದ್ದರೆ ಒಳ್ಳೆಯದು, ಸ್ಪಂದಿಸಬಹುದು ಅಂತ ಅಷ್ಟೆ. ನಾನು ಪ್ರವಾಸದಲ್ಲಿ ಇದ್ದೇನೆ, ಸಂಪೂರ್ಣ ಮಾಹಿತಿ ತೆಗೆದುಕೊಳ್ಳಲು ಆಗಿಲ್ಲ. ಆಸ್ಪತ್ರೆ ವರದಿ ನೋಡಿದ ಬಳಿಕ ಮಾತನಾಡುತ್ತೇನೆ ಎಂದರು.
ಉತ್ತರ ಕನ್ನಡ: ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಕದಂಬೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಸಿಎಂ ಆಗಮಿಸುತ್ತಿದ್ದಾಗ ಅವರ ಕಾರನ್ನು ತಡೆದ ಕಾಂಗ್ರೆಸ್ ಕಾರ್ಯಕರ್ತರು, ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಸಿದ್ದರಾಮಯ್ಯಗೆ ಜಯಘೋಷ ಕೂಗಿದರು. ಕದಂಬೋತ್ಸವ ಒಂದು ಪಕ್ಷದ ಉತ್ಸವವಾಗಿ ಮಾಡಲಾಗುತ್ತಿದೆ. ಕರೆಂಟ್ ಹಾಗೂ ನೀರಿಲ್ಲ ಆದರೂ ಏತನೀರಾವರಿ ಯೋಜನೆ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಈ ಬೆಳವಣಿಗೆ ನಂತರ ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ಹೊರಹಾಕಿದ ಪ್ರಸಂಗವೂ ನಡೆಯಿತು. ಪ್ರತಿಭಟನೆ ನಡೆಸಿದ ನಂತರ ಮಧುಕೇಶ್ವರ ದೇವಸ್ಥಾನ ಬಳಿ ತೆರಳಲು ಕಾರ್ಯಕರ್ತರು ಮುಂದಾದರು. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಪೊಲೀಸರು ಕಾರ್ಯಕರ್ತರನ್ನು ಹೊರಹಾಕಿದರು.
ಬೆಂಗಳೂರು: ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ವಾಯುಪಡೆಯ ವಿಶೇಷ ವಿಮಾನದ ಮೂಲಕ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇದೀಗ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ತೋಟಗಾರಿಕೆ ಸಚಿವ ಮುನಿರತ್ನ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸ್ವಾಗತಿಸಿದರು. ಇದೇ ವೇಳೆ ರಕ್ಷಣಾ ಇಲಾಖೆಯ ಗೌರವರಕ್ಷೆ ಸಲ್ಲಿಸಲಾಯಿತು.
ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ (AAP) ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ (Bhaskar Rao) ಅವರು ಕೇಸರಿ ಪಡೆಯತ್ತ ಮುಖ ಮಾಡಲು ಮನಸ್ಸು ಮಾಡಿದರೇ ಎಂಬ ಕುತೂಹಲ ಮೂಡಿಸಿದೆ. ಬಿಜೆಪಿ ಕಚೇರಿ ನಂತರ ಸಚಿವ ಆರ್.ಅಶೋಕ್ ಅವರನ್ನು ಭೇಟಿಯಾದ ಭಾಸ್ಕರ್ ರಾವ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಭೇಟಿ ಮಾಡಿದ್ದಾರೆ. ಇದೇ ವೇಳೆ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರನ್ನು ಕೂಡ ಭೇಟಿ ಮಾಡಿದ್ದಾರೆ.
ಗದಗ: ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಗ್ಯಾರಂಟಿ ಎಂದು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಶಾಸಕ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಈ ಸಲ ಸಿದ್ದರಾಮಯ್ಯನವರಿಗೆ ನಿರಾಸೆ ಮಾಡಲ್ಲ. ನಾಲ್ಕು ಕ್ಷೇತ್ರದಲ್ಲಿ ಗೆದ್ದು ಕೊಡುತ್ತೇವೆ. ನಮ್ಮ ಕಾರ್ಯಕ್ರಮಗಳ ಮೂಲಕ ನಾವು ಮತ ಕೇಳುತ್ತೇವೆ ಎಂದರು. ಇನ್ನು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ನಿನ್ನೆ ಶಿವಮೊಗ್ಗದಲ್ಲಿ ಜನರ ಬಗ್ಗೆ ಒಂದು ಮಾತನ್ನೂ ಮಾತಾಡಲಿಲ್ಲ. ಸೋನಿಯಾ ಗಾಂಧಿಯವರಿಗೆ ಛತ್ರಿ ಹಿಡಿದಿದ್ರು, ಖರ್ಗೆ ಅವರಿಗೆ ಛತ್ರಿ ಹಿಡಿದಿಲ್ಲ ಅಂದರು. ಧ್ವಜಾರೋಹಣ ಮಾಡುವಾಗ ಯಾರಾದರೂ ಛತ್ರಿ ಹೀಡಿಯುತ್ತಾರಾ? ಎಂದು ಪ್ರಶ್ನಿಸಿದರು. ಖರ್ಗೆಯವರು ಬರುವ ಐದು ನಿಮಿಷ ಮುಂಚೆ ಇರುತ್ತಾರೆ, ಅಡ್ವಾಣಿ ಅವರು ವೇದಿಕೆ ಮೇಲೆ ಬಂದರೆ ಒಂದು ನಮಸ್ಕಾರ ಮಾಡಲಿಲ್ಲ ನೀವು ಅಂತ ಮೋದಿಗೆ ಟಾಂಗ್ ಕೊಟ್ಟರು. ಬೆಳಗಾವಿಯಲ್ಲಿ ಮೋದಿ ಅವರು ಮಹದಾಯಿ ಬಗ್ಗೆ ಒಂದೂ ಮಾತಾಡಲಿಲ್ಲ. ಮಹದಾಯಿ ವಿಚಾರದಲ್ಲಿ ಅನ್ಯಾಯ ಆದ್ರೂ ಸುಮ್ಮನೇ ಕೂತಿದ್ದೀರಲ್ಲ ಬೊಮ್ಮಾಯಿ ಅವರೇ ನಾಚಿಕೆ ಆಗುವುದಿಲ್ವಾ? ಮಹದಾಯಿ ವಿಚಾರದಲ್ಲಿ ಅರಣ್ಯಕ್ಕೆ ಅರ್ಜಿ ಕೊಡಬೇಕಾಗಿಲ್ಲ ಅಂತಾ ಪ್ರಲ್ಹಾದ್ ಜೋಶಿ ಹೇಳಿದ್ದರು. ಮರುದಿನ ಅರ್ಜಿ ಕೊಟ್ಟಿರಲ್ಲ ನಿಮಗೆ ಅರಣ್ಯ ಭೂಮಿ ಸಿಕ್ಕಿತಾ ಅಂತ ಪ್ರಶ್ನಿಸಿದರು.
ಗದಗ: ರೋಣ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಗಡದ್ ನಿದ್ದೆಗೆ ಜಾರಿದರು. ಕಾಂಗ್ರೆಸ್ ಮುಖಂಡ ಪ್ರಕಾಶ್ ರಾಠೋಡ ಭರ್ಜರಿ ಭಾಷಣ ಮಾಡುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಭರ್ಜರಿ ನಿದ್ದೆಗೆ ಜಾರಿದರು.
ಗದಗ: ರೋಣ ಪಟ್ಟಣದಲ್ಲಿ ನಡೆದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಸಮಾವೇಶದಲ್ಲಿ ಭಾಷಣ ಮಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಪಕ್ಷದ ಸಾಧನೆ ತೋರಿಸಿ ಮತ ಕೇಳುತ್ತೇವೆ. ಎಲ್ಲಾ ಸಮಾಜಕ್ಕೆ ಒಳ್ಳೆಯದು ಆಗಬೇಕು ಎಂದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕೋವಿಡ್ ಸಮಯದಲ್ಲಿ ಅನ್ನ ಭಾಗ್ಯ ಮಹತ್ವ ಗೊತ್ತಾಯಿತು. ಲಾಕ್ ಡೌನ್ ಸಮಯದಲ್ಲಿ ದೇವರ ಪಕ್ಕದಲ್ಲಿ ಸಿದ್ದರಾಮಯ್ಯ ಅವ್ರ ಫೋಟೋ ಇಟ್ಟಿದ್ದರು. ಬಡವರಿಗೆ ಬಹಳ ಅನುಕೂಲವಾಗಿತ್ತು ಅನ್ನ ಭಾಗ್ಯ ಯೋಜನೆ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರಿಗೆ ರೈತರ ಸಾಲ ಮನ್ನಾ ಮಾಡುವ ವಿಷಯವಾಗಿ ಮಾತನಾಡಿದ ವೇಳೆ ಸಿದ್ದರಾಮಯ್ಯ ಅವರ ಹತ್ತಿರ ಟ್ಯೂಷನ್ ತೆಗೆದುಕೊಳ್ಳಿ ಅಂತಾ ಹೇಳಿದ್ದೆ ಎಂದರು. ಈ ವೇಳೆ ಅಲ್ಪಸಂಖ್ಯಾತರು ಹೆಚ್ವು ಇರುವುದರಿಂದ ಉರ್ದು ಭಾಷೆಯಲ್ಲಿ ಭಾಷಣ ಮಾಡುವಂತೆ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಸೂಚನೆಯಂತೆ ಉರ್ದು ಭಾಷೆಯಲ್ಲಿ ಭಾಷಣ ಮಾಡಿದ ಜಮೀರ್, ಮತ್ತೆ ಕನ್ನಡದಲ್ಲಿ ಭಾಷಣ ಮಾಡಿದರು. ಜಿ ಎಸ್ ಪಾಟೀಲ್ ಅವರಿಗೆ ಮತ ಹಾಕಿದರೆ ಅದು ಸಿದ್ದರಾಮಯ್ಯ ಅವರಿಗೆ ಮತ ಹಾಕಿದ ಹಾಗೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಬೇಡಿ ಉಪಯೋಗ ಇಲ್ಲ. ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ವೋಟ್ ಹಾಕುವಂತೆ ಮುಸ್ಲಿಮವರಿಗೆ ಮನವಿ ಮಾಡಿದರು.
ಹಾಸನ: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ವಿಚಾರವಾಗಿ ಆಲೂರು ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಳೆಯಿಂದ ಎಲ್ಲಾ ಸರ್ಕಾರಿ ನೌಕರರು ಹೋರಾಟ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದಾಗ 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ. ನೌಕರರ ಬೆಂಬಲಕ್ಕೆ ನಿಂತು 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ. ಮೋದಿ, ಅಮಿತ್ ಶಾ ಈಗಾಗಲೇ 3 ಬಾರಿ ಬಂದು ಹೋಗಿದ್ದಾರೆ. ಮಳೆ ಹಾನಿ, ಕೊವಿಡ್ ಸಂಕಷ್ಟ ಇದ್ದಾಗ ಮೋದಿ, ಶಾ ಬರಲಿಲ್ಲ. ಈಗ ಚುನಾವಣೆ ಬಂದಿದೆ ಅಂತಾ ಬರುತ್ತಿದ್ದಾರೆ. ಈ ಸರ್ಕಾರದಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಹಲವರು ಜೈಲಿಗೆ ಹೋಗಿದ್ದಾರೆ. ಲಂಚ ಪಡೆದ ಇನ್ನೂ ಕೆಲವರು ಜೈಲಿಗೆ ಹೋಗಿಲ್ಲ. ಸ್ವಚ್ಛ ಆಡಳಿತ ಕೊಡಲು ನಾವು ಬರುತ್ತೇವೆ ಎಂದರು.
ಮೈಸೂರು: ಶಾಸಕ ತನ್ವೀರ್ ಸೇಠ್ ನಿವಾಸದಲ್ಲಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಈಗಾಗಲೇ ಹಾಲಿ ಎಂಎಲ್ಎಗೆ ಟಿಕೇಟ್ ಕೊಡುವುದಕ್ಕೆ ಹೈಕಮಾಂಡ್ ನಿರ್ಧಾರ ಮಾಡಿದೆ. ಹಾಗಾಗಿ ಮೈಸೂರಿನ ಎನ್. ಆರ್.ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ತನ್ವೀರ್ ಸೇಠ್ ಅವರಿಗೆ ಟಿಕೇಟ್ ಖಚಿತ. ಕಾರ್ಯಕರ್ತರು, ಬೆಂಬಲಿಗರು ಯಾವುದೇ ಕಾರಣಕ್ಕೂ ನಿರಾಸೆ ಪಡುವ ಅಗತ್ಯವಿಲ್ಲ. ಹೈಕಮಾಂಡ್ನೊಂದಿಗೆ ಚರ್ಚೆ ಮಾಡಿ ಅಂತಿಮವಾಗಿ ಇವರನ್ನೇ ಕಣಕ್ಕಿಳಿಸುತ್ತೇವೆ. ಎಂದರು.
ಹಾಸನ: ರಾಜ್ಯದಲ್ಲಿ ಒಂದು ಸ್ಥಿರ ಸರ್ಕಾರ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯತೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಬಂದ್ ಮಾಡಲು ಮುಂದಾಗುತ್ತಿದೆ. ಆಡಳಿತ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತದೆ. ಎಲ್ಲಿ ಕಾಂಗ್ರೆಸ್ ಸೋಲಿಸಬೇಕೋ ಅಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತಾರೆ. ಕಾಳಜಿ ಇದ್ದರೆ ಹಾಸನ, ಮಂಡ್ಯ, ತುಮಕೂರು ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿ ಎಂದು ಸವಾಲು ಹಾಕಿದರು.
ಗದಗ: ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಹಣೆಗೆ ತಿಲಕ ಇಟ್ಟು ಮಿಂಚುತ್ತಿದ್ದ ಸಿದ್ದರಾಮಯ್ಯ ಅವರು ವೇದಿಕೆಗೆ ಬಂದ ನಂತರ ಅದನ್ನು ಅಳಿಸಿಹಾಕಿದ್ದಾರೆ. ಸಮಾವೇಶದ ಆರಂಭದಲ್ಲಿ ಕುಂಕುಮ ಹಚ್ವಿಕೊಂಡು ರಾರಾಜಿಸಿದ್ದ ಸಿದ್ದರಾಮಯ್ಯ, ಕೆಲವೇ ಹೊತ್ತಿನಲ್ಲಿ ವೇದಿಕೆ ಮೇಲೆ ಮುಖ ಒರಸಿಕೊಳ್ಳುತ್ತಾ ಕುಂಕುಮ ಅಳಿಸಿಕೊಂಡರು.
ಹಾಸನ: ‘ನನ್ನ ವಿಷಯಕ್ಕೆ ಬಂದರೆ ನಾನು ಕೂಡ ಎಲ್ಲ ವಿಷಯ ಬಿಚ್ಚಿಡುತ್ತೇನೆ’ ಎಂಬ ಶಿವಲಿಂಗೇಗೌಡ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಇವರನ್ನು ಹಿಡಿದುಕೊಂಡು ಇರುವವರು ಯಾರು? ಬಿಚ್ಚಿಡಲಿ. ವಿಧಾನಸೌಧದಲ್ಲಿ ಮಾತಾಡುತ್ತಾರೆ ಅಂತಾ ಯಾರೋ ಹೆದರಿಕೊಂಡರೆ ನಾವ್ಯಾಕೆ ಹೆದರಬೇಕು? ನಮ್ಮದೇನು ತಪ್ಪಿದೆ? ಶಿವಲಿಂಗೇಗೌಡ ಬೆಳೆಯುತ್ತಿದ್ದಾಗ ಕುಟುಂಬ ರಾಜಕಾರಣ ಕಾಣಲಿಲ್ಲ. ಜೆಡಿಎಸ್ ಬಿಟ್ಟು ಹೋಗುವಾಗ ಕುಟುಂಬ ರಾಜಕಾರಣ ಕಾಣುತ್ತಿದೆಯಾ? ಇಲ್ಲೇ ಇದ್ದಾಗಲೇ ಕುಟುಂಬ ರಾಜಕಾರಣ ಬೇಡ ಅಂದಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಆಗ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದ್ದಾರೆ.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಪೈಪೋಟಿ ವಿಚಾರವಾಗಿ ಚಿಕ್ಕಮಗಳೂರಿನ ದೇವನೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡರು ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಬಂದ ಬಳಿಕ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ತೀರ್ಮಾನ ಮಾಡುತ್ತಾರೆ ಎಂದರು. ದೇವೇಗೌಡರು ಎಲ್ಲದರ ಬಗ್ಗೆಯೂ ತೀರ್ಮಾನ ಮಾಡುತ್ತಾರೆ. ಅವರ ಸಲಹೆಗಳನ್ನು ಪಡೆಯುತ್ತೇವೆ ಎಂದರು.
ಚಿಕ್ಕಮಗಳೂರು: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ವಿಚಾರವಾಗಿ ತಾಲೂಕಿನ ದೇವನೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಾಳೆಯಿಂದ ಮುಷ್ಕರಕ್ಕೆ ಸರ್ಕಾರಿ ನೌಕರರು ತೀರ್ಮಾನಿಸಿದ್ದಾರೆ. ಬಜೆಟ್ನಲ್ಲಿ 7ನೇ ವೇತನ ಆಯೋಗ ವರದಿ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಬಿಜೆಪಿ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದರು. ಅಂದು ಸರ್ಕಾರಿ ನೌಕರರಿಂದ ಸನ್ಮಾನ ಮಾಡಿಸಿಕೊಂಡು ಸಿಹಿ ತಿಂದರು, ಆದರೆ 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ, ಯೋಜನೆ ಜಾರಿ ಮಾಡಲು ಹಣ ಇಟ್ಟಿದ್ದೇವೆ, ಬೇಕಾದರೆ ಇನ್ನೂ ಇಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನಿಖರವಾಗಿ ಯಾವುದನ್ನು ಸರ್ಕಾರ ತೋರಿಸಲಿಲ್ಲ. ಇದು ಸರ್ಕಾರದ ಸ್ವಯಂಕೃತ ಅಪರಾಧ ಎಂದರು.
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ವಿಚಾರವಾಗಿ ಬೇಲೂರು ಪಟ್ಟಣದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಟಿಕೆಟ್ ಕೇಳುವ ಹಕ್ಕು ಭವಾನಿ ರೇವಣ್ಣಗೆ ಇದೆ, ಸ್ವರೂಪ್ಗೂ ಇದೆ. ಪ್ರತಿಯೊಬ್ಬ ಜನತಾದಳ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಹಕ್ಕಿದೆ. ಆದರೆ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ನಮ್ಮ ಪಕ್ಷ ನಿರ್ಧರಿಸುತ್ತದೆ ಎಂದರು. ಸಭೆ ಕರೆದಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಮೀಟಿಂಗ್ ಇರಲಿಲ್ಲ, ಇನ್ನೆಲ್ಲಿಂದ ರದ್ದಾಗುವುದು? ಅದು ತಪ್ಪು ಅಭಿಪ್ರಾಯ. ರೇವಣ್ಣ, ಕುಮಾರಸ್ವಾಮಿ, ಬಾಲಕೃಷ್ಣ, ರಮೇಶ್ ಈ ನಾಲ್ಕು ಜನ ಸಹೋದರರ ನಡುವೆ ಭಿನ್ನಾಭಿಪ್ರಾಯ ಬರುತ್ತದೆ ಅಂತ ಯಾರಾದರು ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಆ ನಾಲ್ಕು ಮಂದಿ ಯಾವತ್ತಿದ್ದರೂ ಒಂದೆ. ನಾನು ಐವತ್ತು ವರ್ಷದಿಂದ ನೋಡುತ್ತಿದ್ದೇನೆ ಹೇಗಿದ್ದಾರೆ ಈಗಲೂ ಹಾಗೇ ಇದ್ದಾರೆ ಎಂದರು.
ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಸಮಾವೇಶ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸಿದ್ದು ಬೃಹತ್ ರೋಡ್ ಶೋ ನಡೆಸಿದ್ದಾರೆ. ಪಟ್ಟಣದ ಸೂಡಿ ಕ್ರಾಸ್ ದಿಂದ ರೋಡ್ ಶೋ ಆರಂಭವಾಗಿದೆ.
ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಂಜೂರಾಗಿದೆ. 2 ತಿಂಗಳ ಹಿಂದೆ ಎಸಿಎಸ್ ಅಹಮದಾಬಾದ್ ವಿವಿಗೆ ತೆರಳಿದ್ದೆವು. ನೀವು ಅಪೇಕ್ಷೆಪಟ್ಟರೆ ವಿವಿ ಆರಂಭಿಸುವುದಾಗಿ ಅವರು ಹೇಳಿದ್ದರು. ಶಿವಮೊಗ್ಗದಲ್ಲಿ ವಿಶ್ವವಿದ್ಯಾಲಯ ಆರಂಭವಾಗಲಿದೆ ಎಂದು ಶಿವಮೊಗ್ಗದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನವಿಲೆ ಬಳಿ 8 ಎಕರೆ ಜಮೀನು ಡಿಸಿ ಮಂಜೂರು ಮಾಡಿಕೊಟ್ಟಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲೇ ತರಗತಿ ಆರಂಭಿಸಲಾಗುವುದು. ಡಿಪ್ಲೊಮಾ, ಡಿಗ್ರಿಗೆ ಪಿಯುಸಿ ಅರ್ಹತೆ, ಪಿಜಿಗೆ ಡಿಗ್ರಿ ಕ್ವಾಲಿಫಿಕೇಷನ್, ಮಿಲಿಟರಿ, ಆಂತರಿಕ ಭದ್ರತಾ ವಿಭಾಗದ ಕೆಲಸದ ಬಗ್ಗೆ ಬೋಧನೆ ಮಾಡಲಾಗುವುದು. ಮೆರಿಟ್ ಆಧಾರದ ಮೇಲೆ ಇಲ್ಲಿ ಪ್ರವೇಶಾತಿ ಪಡೆಯಲಾಗುವುದು. ಶಿವಮೊಗ್ಗದ ರಾಷ್ಟ್ರೀಯ ರಕ್ಷಾ ವಿವಿ ದೇಶದ ಎರಡನೇ ವಿವಿ ಆಗಿದೆ ಎಂದರು.
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತನ್ವೀರ್ ಸೇಠ್ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ತನ್ವೀರ್ ಸೇಠ್ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ತನ್ವೀರ್ ಬೆಂಬಲಿಗ ಕೆಸರೆ ನಿವಾಸಿ ರಸೂಲ್ ಎಂಬುವವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉದಯಗಿರಿ ಠಾಣೆ ಪೊಲೀಸರು ಕೂಡಲೇ ಬಾಟಲಿಯನ್ನು ಕಿತ್ತೆಸೆದು ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ನಾಳೆ ಬಿಜೆಪಿ ರಥಯಾತ್ರೆಗೆ ಚಾಲನೆ ನೀಡುತ್ತೇವೆ. ರಾಜ್ಯದಲ್ಲಿ 150 ಸ್ಥಾನ ಗೆದ್ದು ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ನಿನ್ನೆ ಪ್ರಧಾನಿ ಮೋದಿ ರೋಡ್ ಶೋಗೆ ಲಕ್ಷಾಂತರ ಜನ ಸೇರಿದ್ರು. ಜನ ಬಿಜೆಪಿ ಪರ ಇದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ರಾಜ್ಯ ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್‌ನವರಿಗೆ ನಮ್ಮ ವಿರುದ್ಧ ಮಾತಾಡಲು ಯಾವುದೇ ವಿಚಾರ ಇಲ್ಲ. ಕಾಂಗ್ರೆಸ್ನಲ್ಲಿ ನಾಯಕರಿಲ್ಲ, ಸಂಘಟನೆ ಇಲ್ಲ, ಕಾರ್ಯಕರ್ತರೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ಗಿಂತ ಬಿಜೆಪಿ ಮುಂದೆ ಇದೆ ಎಂದು ಅರುಣ್ ಸಿಂಗ್ ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ನರಸಿಂಹರಾಜ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಪತ್ರ ಬರೆದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಸುರ್ಜೇವಾಲಗೂ ಪತ್ರ ಬರೆದಿದ್ದಾರೆ. ಈ ಬಗ್ಗೆ ಮಾತನಾಡಿದ ತನ್ವೀರ್ ಸೇಠ್, ಅನಾರೋಗ್ಯದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದು ತಿಳಿಸಿರುವೆ ಎಂದರು.
ಕೊಪ್ಪಳ ನಗರಸಭೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಕಿವಿಗೆ ಹೂ ಇಟ್ಟುಕೊಂಡಿದ್ದಾರೆ. ಕಿವಿಯಲ್ಲಿ ಹೂ ಇಟ್ಟುಕೊಂಡು ಧರಣಿಗೆ ಕುಳಿತಿದ್ದಾರೆ. ತಮ್ಮ ವಾಡ್೯ ಅಭಿವೃದ್ಧಿಗೆ ತಾರತಮ್ಯ ಮಾಡಲಾಗ್ತಿದೆ ಅಂತ ಆರೋಪಿಸಿ ಪ್ರತಿಭಟನೆ ನಡೆಸಿದರು.
ಅಮಿತ್ ಶಾ ಬೆಂಗಳೂರು ಭೇಟಿ, ಚುನಾವಣಾ ತಯಾರಿ ಸಂಬಂಧ ಬೆಂಗಳೂರು ನಗರದಲ್ಲಿ ಪೊಲೀಸ್ ಅಧಿಕಾರಿಗಳಿಂದ ಸರಣಿ ಸಭೆ ನಡೆಯುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆದಿದ್ದು ಈಗ ಡಿಜಿ & ಐಜಿಪಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯುತ್ತಿದೆ. ಮಾರ್ಚ್ 3ರಂದು ಬೆಂಗಳೂರಿಗೆ ಅಮಿತ್ ಶಾ ಆಗಮಿಸಲಿದ್ದಾರೆ. ಇದೇ ವೇಳೆ ಕಮಿಷನರ್ ಕಚೇರಿಯ ಕಮಾಂಡ್ ಸೆಂಟರ್ಗೆ ಭೇಟಿ ನೀಡಲಿದ್ದಾರೆ. ಬಳಿಕ ಸೇಫ್ ಸಿಟಿ ಪ್ರಾಜೆಕ್ಟ್ಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಪದೇಪದೆ ಮೋದಿ, ಅಮಿತ್ ಶಾ ಭೇಟಿಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ಗತಿ ಇಲ್ಲದೇ ಇರುವವರು ಕಾಂಗ್ರೆಸ್ನಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತ್ರ ಎಲ್ಲೆಡೆ ಹೋಗ್ತಾರೆ. ಸಮಾವೇಶಗಳನ್ನು ಮಾಡಿಕೊಂಡು ಅವರಿಬ್ಬರು ಓಡಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲ, ಹಾಗಾಗಿ ಯಾರೂ ಬರುತ್ತಿಲ್ಲ. ಕಾಂಗ್ರೆಸ್ನಲ್ಲಿ ರಾಷ್ಟ್ರೀಯ ನಾಯಕರಿಲ್ಲದೆ ಸೊರಗುತ್ತಿದೆ. ರಾಹುಲ್, ಸೋನಿಯಾ, ಪ್ರಿಯಾಂಕಾ ಹೋದಕಡೆ ಕಾಂಗ್ರೆಸ್ ಸೋತಿದೆ. ಪಕ್ಷ ಸಂಘಟನೆಗೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಲೇ ಇರ್ತಾರೆ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗಳನ್ನು ಜನರಿಗೆ ಸಮಗ್ರವಾಗಿ ತಲುಪಿಸಬೇಕು. ಅದಕ್ಕಾಗಿ 31 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಮಾಡಲು ನಿರ್ಣಯ ಮಾಡಿದ್ದೇವೆ ಎಂದು ಹಾಲಪ್ಪ ಆಚಾರ್ ಹೇಳಿದರು. ಚಿತ್ರದುರ್ಗದಲ್ಲಿ ಮಾರ್ಚ್ 4 ರಂದು ಸಿಎಂ ಚಾಲನೆ ಕೊಡಲಿದ್ದಾರೆ. ಮಾರ್ಚ್ 20ರ ವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಎಲ್ಲ ಫಲಾನುಭವಿಗಳನ್ನು ಒಂದೆಡೆ ಸೇರಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಡಿಸಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರಕ್ಕೆ ಸಿಎಂ ಬೊಮ್ಮಾಯಿ ಆಗಮಿಸಿದ್ದು ಸಿದ್ದಾಪುರದ ಎಂ.ಜಿ.ಸಿ ಕಾಲೇಜು ಮೈದಾನಕ್ಕೆ ಬಂದಿಳಿದಿದ್ದಾರೆ. ಸಿದ್ದಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ, ಹಾಗೂ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾಳೆಯಿಂದ ರಾಜ್ಯದ 4 ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗುತ್ತೆ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಮಾರ್ಚ್ 25ರಂದು ಪ್ರಧಾನಿ ಮೋದಿ ದಾವಣಗೆರೆಗೆ ಬರ್ತಾರೆ. ಚಾಮರಾಜನಗರದಿಂದ ವಿಜಯ ಸಂಕಲ್ಪ ಯಾತ್ರೆ ಹೊರಡಲಿದೆ. ಜೆ.ಪಿ.ನಡ್ಡಾ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಚಾಮರಾಜನಗರ, ನಂದಗಡ, ಹೊಸ ಅನುಭವ ಮಂಟಪ ಹಾಗೂ ಆವತಿಯಲ್ಲಿ ನಾಳೆ ವಿಜಯ ಸಂಕಲ್ಪ ಯಾತ್ರೆ ಆರಂಭಗೊಳ್ಳಲಿದೆ. ನಾಲ್ಕು ತಂಡಗಳ ಸಮಾವೇಶ ದಾವಣಗೆರೆಯಲ್ಲಿ ನಡೆಯಲಿದೆ ಎಂದರು.
ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಹೈವೆ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಸಮರ್ಪಕವಾಗಿ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹ ಮಾಡುವಂತೆ ಆಗ್ರಹ ನೂರಾರು ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.
ಮಾ.3ರಂದು ದೇವನಹಳ್ಳಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮಕ್ಕೆ ಭೇಟಿ ನೀಡಿ ರಣಭೈರೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಶಾ ಚನ್ನಕೇಶವಸ್ವಾಮಿ ದೇಗುಲಕ್ಕೂ ಭೇಟಿ ನೀಡಲಿದ್ದಾರೆ.
‘ವೀರೇಂದ್ರ ಪಾಟೀಲ್, ನಿಜಲಿಂಗಪ್ಪಗೆ ಕಾಂಗ್ರೆಸ್ನಿಂದ ಅಪಮಾನ’ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನು ಇತ್ತು ಅಂತ ನನಗೆ ಗೊತ್ತು. ನರೇಂದ್ರ ಮೋದಿಗೆ ರಾಜಕೀಯ ಏನು ಗೊತ್ತಿಲ್ಲ. ನಾನು ವೀರೇಂದ್ರ ಪಾಟೀಲ್ ಜೊತೆ ಶಾಸಕ ಆಗಿದ್ದವನು. ವೀರೇಂದ್ರ ಪಾಟೀಲ್ ಆರೋಗ್ಯ ಚೇತರಿಸಿಕೊಳ್ಳದ ಸ್ಥಿತಿಯಲ್ಲಿದ್ದರು. ಅದನ್ನು ಮಧ್ಯರಾತ್ರಿ ಎಲ್ಲರ ಬಳಿ ಕುಳಿತುಕೊಂಡು ಚರ್ಚಿಸಿದರು. ವೈದ್ಯರು ವೀರೇಂದ್ರ ಪಾಟೀಲ್ ಆರೋಗ್ಯ ಸರಿಯಿಲ್ಲ ಅಂದಿದ್ದರು. ಆರೋಗ್ಯ ಸರಿಯಿರದಿದ್ದಕ್ಕೆ ರಾಜೀವ್ ಗಾಂಧಿ ಕೆಳಗೆ ಇಳಿಸಿದರು. ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಿದವರನ್ನು ಮತ್ತೆ ನಿಲ್ಲಿಸಿದ್ದರು. ಲೋಕಸಭಾ ಚುನಾವಣೆಗೆ ನಿಲ್ಲಿಸಿ ಕೇಂದ್ರದಲ್ಲಿ ಮಂತ್ರಿ ಮಾಡಿದರು. ಮಂತ್ರಿ ಮಾಡಿದ ಹೃದಯ ಶ್ರೀಮಂತಿಕೆ ಗಾಂಧಿ ಕುಟುಂಬಕ್ಕೆ ಇತ್ತು. ನಿಜಲಿಂಗಪ್ಪಗೆ ಗೌರವ ಕೊಡಲು ಅಳಿಯನಿಗೆ MLC ಮಾಡಿದ್ವಿ. ಬಿಜೆಪಿಯವರ ಸಿಂಪತಿ ನಮಗೆ ಬೇಡ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಭಾವ ಚಿತ್ರಕ್ಕೆ ಸಗಣಿ ಬಳಿದು ಚಪ್ಪಟಿ ಏಟು ನೀಡಲಾಗಿದೆ. ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ ಮತ್ತೊಮ್ಮೆ ಬಿಜೆಪಿ ಎಂಬ ಪೋಸ್ಟರ್ ಹಾಕಲಾಗಿತ್ತು. ಆ ಪೋಸ್ಟರ್ನಲ್ಲಿ ಇದ್ದ ಎನ್ ಮಹೇಶ್ ಭಾವಚಿತ್ರಕ್ಕೆ ಸಗಣಿ ಬಳಿಯಲಾಗಿದೆ. ಇನ್ನೊಂದೆಡೆ ಎನ್ ಮಹೇಶ್ ಭಾವಚಿತ್ರದ ಮೇಲೆ 40% ಎಂದು ಬರೆದಿರುವುದು ಪತ್ತೆಯಾಗಿದೆ.
ಹೆಚ್ಡಿಕೆ ನಿವೃತ್ತಿಯಾಗುವ ವಯಸ್ಸಲ್ಲ, ಇನ್ನೂ ಸೇವೆ ಮಾಡಬೇಕಿದೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲ ನಡೆಯುತ್ತಿರುತ್ತವೆ. ರಾಜ್ಯದ ಜನರು ಪ್ರಬುದ್ಧರಾಗಿದ್ದಾರೆ, ಎಲ್ಲವನ್ನೂ ಗಮನಿಸುತ್ತಾರೆ. ಮುಂದಿನ ಚುನಾವಣೆ ವೇಳೆಗೆ ಇನ್ನೂ ಪ್ರಬುದ್ಧರಾಗುತ್ತಾರೆ. ನಾವು ಮಾತನಾಡುವಾಗ ಅದರ ಹಿಂದಿರುವ ಕಲ್ಪನೆ ಇರಬೇಕು. ರಾಜ್ಯದಲ್ಲಿ ಈಗಾಗಲೇ ಪಕ್ಷ ಬಲವರ್ಧನೆ ನಡೆಯುತ್ತಿದೆ. ಮೋದಿ, ಅಮಿತ್ ಶಾ ಸೇರಿ ಅನೇಕ ನಾಯಕರು ಮತ್ತೆ ಬರ್ತಾರೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ನಾಯಕರು ರಾಜ್ಯಕ್ಕೆ ಬರ್ತಾರೆ ಎಂದು ಸಿಎಂ ತಿಳಿಸಿದರು.
ಅಮಿತ್ ಶಾ ಚುನಾವಣಾ ಏಜೆಂಟರಂತೆ ವರ್ತಿಸ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೋದಿ ಭೇಟಿಯಿಂದ ಕಾಂಗ್ರೆಸ್ನವರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದ ವಿಚಲಿತಗೊಂಡಿದ್ದಾರೆ. ಮಾಜಿ ಸಿಎಂ ಆಗಿದ್ದವರು ಹೀಗೆ ಮಾತನಾಡುವುದು ಸರಿಯಲ್ಲ. ಹಾಗಾದ್ರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟಾ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದವನು ಈಗ ಎಲ್ಲಿ ಹೋದ? ಈಗ ಅವನನ್ನು ಒದ್ದು ಕಳಿಸಿದ್ದಾರೆ. ಆತ ಈಗ ಪತ್ತೆ ಇಲ್ಲ, ಅವನು ಈಗ ದನ ಮೇಯಿಸೋಕೆ ಹೋದ್ನಾ?ಎಮ್ಮೆ ಮೇಯಿಸೋಕೆ ಹೋದನಾ ಗೊತ್ತಿಲ್ಲ ಎಂದು ಕಳಲೆ ಕೇಶವಮೂರ್ತಿ ವಿರುದ್ಧ ಸಂಸದ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಆತನ ಜಾಗಕ್ಕೆ ಬರಲು ಧ್ರುವನಾರಾಯಣ್, ಮಹದೇವಪ್ಪ ಕಚ್ಚಾಡ್ತಿದ್ದಾರೆ. ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಆಟ ಆಡಿದವರು ಎಲ್ಲಿ ಹೋದ್ರು? ನನ್ನ ವಿರುದ್ಧ ಆಟ ಆಡಿದರಲ್ಲಿ ಒಬ್ಬ ಟಿ.ನರಸೀಪುರದಲ್ಲಿ ಅವಿತುಕೊಂಡ. ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಕೋಲಾರ ಕ್ಷೇತ್ರಕ್ಕೆ ಹೋದರು ಎಂದು ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸಂಸದ ಶ್ರೀನಿವಾಸಪ್ರಸಾದ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಹಾಸನ ಜಿಲ್ಲೆಯಲ್ಲಿ ಇಂದಿನಿಂದ 2 ದಿನ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಆಲೂರು, ಸಕಲೇಶಪುರ, ಹೊಳೆನರಸೀಪುರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಆಲೂರಿನಲ್ಲಿ ಕಾಂಗ್ರೆಸ್ನಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಮಧ್ಯಾಹ್ನ 1 ಗಂಟೆಗೆ ಸಕಲೇಶಪುರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ.
ಬೇರೆಯವರ ತರಹ ಕೈಕಾಲು ಹಿಡಿದಿದ್ರೆ ನಾನು ಸಿಎಂ ಆಗುತ್ತಿದ್ದೆ ಎಂದು ಕಲಬುರಗಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ದಾರೆ. ನಾನು ಯಾವುದೇ ಹುದ್ದೆಯ ಆಸೆ ಪಟ್ಟವನಲ್ಲ. ಆ ಹುದ್ದೆ ನನಗೆ ಬರುವುದಿದ್ರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಏನು ಆಗದಿದ್ರೂ ಪರವಾಗಿಲ್ಲ, ಮತ್ತೊಬ್ಬರನ್ನು ನೋಡಿ ಖುಷಿ ಪಡ್ತೇನೆ. ಮತ್ತೊಬ್ಬರನ್ನು ನೋಡಿ ಸಂತೋಷಪಡುವ ವ್ಯಕ್ತಿ ನಾನು ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರೆದಿದೆ. ಸಿಎಂ ಬೊಮ್ಮಾಯಿ ಇಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಹಿನ್ನೆಲೆ ಬನವಾಸಿಯ ರಸ್ತೆ ಉದ್ದಕ್ಕೂ ‘ಪೇ ಸಿಎಂ’ ಪೋಸ್ಟರ್ ಅಳವಡಿಸಲಾಗಿದೆ. ಸಿಎಂ ಸಂಚರಿಸುವ ರಸ್ತೆ ಬದಿಯಲ್ಲಿನ ಮರಗಳಿಗೆ ‘ಡೀಲ್ ನಿಮ್ಮದು ಕಮಿಷನ್ ನಮ್ದು’ ಎಂಬ ಬರಹವುಳ್ಳ ಪೋಸ್ಟರ್ ಅಳವಡಿಸಲಾಗಿದೆ. ರಸ್ತೆ ಪಕ್ಕದ ಕಟ್ಟಡಗಳಿಗೆ ಸಚಿವ ಹೆಬ್ಬಾರ್ ಫೋಟೋ ಅಳವಡಿಸಲಾಗಿದೆ.
ಗದಗ ಜಿಲ್ಲೆ ರೋಣ, ನರಗುಂದ ಕ್ಷೇತ್ರದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ರೋಣ ಪಟ್ಟಣದಲ್ಲಿ ಸಮಾವೇಶ ನಡೆಯಲಿದ್ದು ಮಧ್ಯಾಹ್ನ 3 ಗಂಟೆಗೆ ನರಗುಂದ ಪಟ್ಟಣದಲ್ಲಿ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯ ರೋಣ ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸತೀಶ್ ಜಾರಕಿಹೊಳಿ, ಜಮೀರ್, ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಇಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 11ಕ್ಕೆ ಸಿದ್ದಾಪುರ ತಾಲೂಕಿನ ಎಂಜಿಸಿ ಕಾಲೇಜು ಆವರಣದಲ್ಲಿರುವ ಎಂಜಿಸಿ ಕಾಲೇಜಿನ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ನಲ್ಲಿ ಆಗಮಿಸಲಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಶಿಲಾನ್ಯಾಸ ಮಾಡಲಿದ್ದಾರೆ. ಹಾಗೂ ವಿವಿಧ ಯೋಜನೆಯಡಿ ಸರ್ಕಾರದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಗಣೇಶ ಹೆಗಡೆ ಜನ್ಮಶತಮಾನೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಚಿಕ್ಕಮಗಳೂರಿಗೆ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದು ಇಂದಿನಿಂದ 2 ದಿನ ಚಿಕ್ಕಮಗಳೂರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೆಚ್ಡಿಕೆ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ ಕ್ಷೇತ್ರದ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
Published On - 9:21 am, Tue, 28 February 23