Bangalore Rains: ಬೆಂಗಳೂರಿನಲ್ಲಿ ರಾತ್ರಿ, ಮುಂಜಾನೆ ಅಬ್ಬರದ ಮಳೆ: ಟ್ರಾಫಿಕ್ ಜಾಮ್, ಜನಜೀವನ ಅಸ್ತವ್ಯಸ್ತ

| Updated By: Ganapathi Sharma

Updated on: Oct 21, 2024 | 7:09 AM

Bengaluru Rain Latest Updates: ಬೆಂಗಳೂರಿನಲ್ಲಿ ಕಳೆದ 4 ದಿನಗಳಿಂದ ರಚ್ಚೆಹಿಡಿದು ಸುರಿಯುತ್ತಿರುವ ಮಳೆ ಬಿಡುವು ಕೊಡುವ ಲಕ್ಷಣ ಕಾಣಿಸುತ್ತಿಲ್ಲ. ಭಾನುವಾರ ಬೆಳಗ್ಗೆಯಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ರಾತ್ರಿ ಮತ್ತೆ ಅಬ್ಬರಿಸಿದೆ. ಸೋಮವಾರ ಮುಂಜಾನೆಯಂತೂ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ಎಂಬ ವಿವರ ಇಲ್ಲಿದೆ.

Bangalore Rains: ಬೆಂಗಳೂರಿನಲ್ಲಿ ರಾತ್ರಿ, ಮುಂಜಾನೆ ಅಬ್ಬರದ ಮಳೆ: ಟ್ರಾಫಿಕ್ ಜಾಮ್, ಜನಜೀವನ ಅಸ್ತವ್ಯಸ್ತ
ಬೆಂಗಳೂರಿನ ಕಾರ್ಪೊರೇಷನ್ ವೃತ್ತದ ಬಳಿಯ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್ 21: ಭಾನುವಾರ ಬೆಳಗ್ಗೆ ಹಾಗೂ ರಾತ್ರಿ ಬೆಂಗಳೂರು ನಗರದಾದ್ಯಂತ ಭಾರಿ ಮಳೆಯಾಗಿದ್ದು, ಸೋಮವಾರ ಮುಂಜಾನೆಯೇ ಗುಡುಗು, ಸಿಡಿಲು ಸಹಿತ ವರ್ಷಧಾರೆಯೇ ಸುರಿದಿದೆ. ಸೋಮವಾರ ಬೆಳ್ಳಂಬೆಳಗ್ಗೆಯೇ ಮೆಜೆಸ್ಟಿಕ್​, ಮೈಸೂರು ಬ್ಯಾಂಕ್​ ಸರ್ಕಲ್​, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆ.ಆರ್​.ಮಾರ್ಕೆಟ್​, ಟೌನ್​ಹಾಲ್​, ಕಾರ್ಪೊರೇಷನ್​​ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆ.ಆರ್​.ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್​ ಬೋರ್ಡ್​, ಬಿಟಿಎಂ ಲೇಔಟ್, ಜೆ.ಪಿ.ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, ಆರ್​ಆರ್​​ ನಗರ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದೆ.

ಬೆಂಗಳೂರು: ಹಲವೆಡೆ ಟ್ರಾಫಿಕ್ ಜಾಮ್

ಮೆಜೆಸ್ಟಿಕ್ ಬಳಿಯ ಓಕಳಿಪುರಂ ಅಂಡರ್​ಪಾಸ್ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಅಂಡರ್​​ಪಾಸ್​ನ ನೀರಿನಲ್ಲಿ ಆಟೋ, ಕಾರು ಸಿಲುಕಿದ ಪರಿಣಾಮ ಓಕಳಿಪುರಂ ಅಂಡರ್​ಪಾಸ್ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಬೆಂಗಳೂರಿನ ಎಲ್ಲೆಲ್ಲಿ ಎಷ್ಟು ಮಳೆ?

ಬೆಂಗಳೂರಿನಲ್ಲಿ 17.7 ಮಿಲಿ ಮೀಟರ್ ಮಳೆಯಾಗಿದೆ. ಹೆಚ್​ಎಎಲ್ ಏರ್​​ಪೋರ್ಟ್​ ವ್ಯಾಪ್ತಿಯಲ್ಲಿ 10.8 ಮಿಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಮಿಮೀ, ಬಾಗಲಗುಂಟೆ 5.4 ಮಿಮೀ, ಶೆಟ್ಟಿಹಳ್ಳಿ 4.2 ಮಿಮೀ, ನಂದಿನಿ ಲೇಔಟ್ 3.3 ಮಿಮೀ, ಹೇರೋಹಳ್ಳಿ 2.9 ಮಿಮೀ, ಕೆಂಗೇರಿ ವ್ಯಾಪ್ತಿಯಲ್ಲಿ 2.1 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬ್ಯಾಟರಾಯನಪುರದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ

ಬ್ಯಾಟರಾಯನಪುರ ಬಳಿ ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನ ಸಮೀಪ ಭಾರಿ ಮಳೆಗೆ ರಾಜಕಾಲುವೆ ನೀರು ಉಕ್ಕಿ ಹರಿದಿದೆ. ಬಡಾವಣೆಯ ಹಲವು ಮನೆಗಳಿಗೆ 2 ಅಡಿಯಷ್ಟು ನೀರು ನುಗ್ಗಿ ನಿವಾಸಿಗಳು ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲೂ ಸಾಲು ಸಾಲು ತಾಪತ್ರಯ ತಲೆದೋರಿದೆ. ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ವಾಹನಗಳು ತೇಲಿಕೊಂಡು ಹೋಗುವಷ್ಟು ರಭಸವಾಗಿ ನೀರು ಹರಿದಿದೆ.

ಕೆಂಗೇರಿ ರೈಲ್ವೆ ನಿಲ್ದಾಣ ವರುಣಾರ್ಭಟಕ್ಕೆ ಹೊಳೆಯಂತೆ ಬದಲಾಗಿದ್ದು, ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ರಸ್ತೆ ಗುಂಡಿ ಅವಾಂತರ

ಮರಬಿದ್ದು ಕಾರು ಜಖಂ

ಮಲ್ಲೇಶ್ವರದಲ್ಲಿ ಪದೇ ಪದೇ ಮರಗಳು ಬೀಳುತ್ತಿದ್ದು, ಭಾನುವಾರ ರಾತ್ರಿ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಮರವೊಂದು ಉರುಳಿ ಆಲ್ಟೋ ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಇದನ್ನೂ ಓದಿ: ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ

ಬೆಂಗಳೂರು ಉತ್ತರ ತಾಲೂಕಿನ ತೋಟಗೆರೆ ಗ್ರಾಮದ ಬಳಿ ರಸ್ತೆ ಮಧ್ಯವೇ ಭಾರಿ ಮರ ಧರಾಶಾಯಿಯಾಗಿ, ಹೆಸರಘಟ್ಟ-ಗೊಲ್ಲಹಳ್ಳಿ ಮಾರ್ಗಮಧ್ಯೆ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ತಡರಾತ್ರಿವರೆಗೂ ಸುರಿದ ಜಡಿಮಳೆಯಿಂದ ಹಲವೆಡೆ ಟ್ರಾಪಿಕ್ ಜಾಮ್ ಉಂಟಾಗಿತ್ತು. ದಾಸನಪುರದ ರಸ್ತೆಯಲ್ಲಿ 4 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ