ಬೆಂಗಳೂರು: ಬಿಬಿಎಂಪಿ (BBMP) ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬೆಂಗಳೂರು ವಿಶ್ವವಿದ್ಯಾಲಯ (Bengaluru University) ವಿದ್ಯಾರ್ಥಿಗಳು ರಸ್ತೆಗೆ ಸ್ಪೀಡ್ ಬ್ರೇಕರ್ಸ್ ಅಳವಡಿಸಲು ಗಡುವು ನೀಡಿದ್ದಾರೆ. ವಿವಿ ಆವರಣದಲ್ಲಿ 10 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಹಂಪ್ಸ್ ಇಲ್ಲದೆ ನಿತ್ಯ 6 ರಿಂದ 8 ಅಪಘಾತಗಳು ಸಂಭವಿಸುತ್ತಿವೆ. ಮೊದಲು ವಿವಿ ಆವರಣದಲ್ಲಿ ಒಟ್ಟು 22 ಹಂಪ್ಸ್ಗಳಿದ್ದವು. ರಸ್ತೆಗೆ ಡಾಂಬರು ಹಾಕುವ ಭರದಲ್ಲಿ ಪಾಲಿಕೆ ಹಂಪ್ಸ್ಗಳನ್ನ ಮುಚ್ಚಿಸಿದೆ. ಇದರಿಂದ ವಾಹನಗಳು ಬಾರಿ ವೇಗವಾಗಿ ಸಂಚರಿಸುತ್ತಿದ್ದು, ಕಂಟ್ರೋಲ್ ಸಿಗದೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ತೆರವು ಮಾಡಿರುವ ರಸ್ತೆ ಹಂಪ್ಸ್ಗಳನ್ನ ಪುನರ್ ನಿರ್ಮಿಸಲು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ಮೈದಾನದಲ್ಲಿ 3 ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಪ್ರಧಾನಿ ಇಲ್ಲಿಗೆ ಬಂದಿಳಿಯದಿದ್ದರೂ, ಹೆಲಿಪ್ಯಾಡ್ ಇನ್ನು ತೆರವಾಗಿಲ್ಲ. ಇದರಿಂದ ಆಟದ ಮೈದಾನ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ 2 ದಿನಗೊಳಗಾಗಿ ರಸ್ತೆಗೆ ಹಂಪ್ಸ್ಗಳನ್ನ ಅಳವಡಿಸಬೇಕು. ಸೋಮವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ವಿವಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Nandamuri Balakrishna: ನಂದಮೂರಿ ಬಾಲಕೃಷ್ಣಗೆ ಕೊರೊನಾ ಪಾಸಿಟಿವ್; ಶ್ರುತಿ ಹಾಸನ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆ
ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯ ಬಳಿ ರಸ್ತೆ ಕಾಮಗಾರಿ ನಡೆದಿತ್ತು. ಈ ವೇಳೆ ಹಂಪ್ಸ್ಗಳನ್ನ ತೆರವು ಮಾಡಲಾಗಿದೆ. ವಿವಿ ಆವರಣ ಸಾರ್ವಜನಿಕ ರಸ್ತೆಯಾದರೂ, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಂಚರಿಸುತ್ತಿರುತ್ತಾರೆ. ಹೀಗಾಗಿ ತಕ್ಷಣ ಹಂಪ್ಸ್ಗಳನ್ನ ಅಳವಡಿಸಲು ವಿದ್ಯಾರ್ಥಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ವೇಳೆ 23 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಕಳಪೆ ಕಾಮಗಾರಿ ಹಿನ್ನೆಲೆ, ಸ್ಥಳೀಯ ಇಇ, ಎಇಇ, ಎಇ ಮೂವರು ಬಿಬಿಎಂಪಿ (BBMP) ಅಧಿಕಾರಿಗಳಿಗೆ ಮುಖ್ಯ ಅಭಿಯಂತರ ಪ್ರಹ್ಲಾದ್ ಶೋಕಾಸ್ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವುದು ಕಾಣುತ್ತಿದೆ. ಈ ಕುರಿತಾಗಿ ವರದಿ ನೀಡುವಂತೆ ಮೂವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಟಿವಿ9 ಸುದ್ದಿ ಆಧರಿಸಿ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದು, ಶೋಕಾಸ್ ನೋಟೀಸ್ನಲ್ಲಿ ಟಿವಿ9 ಹೆಸರು ಉಲ್ಲೇಖ ಮಾಡಲಾಗಿದೆ. ನೂತನವಾಗಿ ನಿರ್ಮಿಸಿದ್ದ ರಸ್ತೆ ಕೈಯಿಂದಲೇ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಹಿನ್ನೆಲೆ ವರದಿ ನೀಡುವಂತೆ ಮೂವರು ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ.
Published On - 7:36 am, Sat, 25 June 22