
ಬೆಂಗಳೂರು, ಡಿಸೆಂಬರ್ 15: ಬೆಂಗಳೂರು (Bengaluru) ಸಂಚಾರ ಪೊಲೀಸರು ಬಾಕಿ ಇರುವ ಫೈನ್ ಪಾವತಿ ಮಾಡಲು ಡಿಸ್ಕೌಂಟ್ ನೀಡಿದ್ದ ರೀತಿಯಲ್ಲಿ ಜಲಮಂಡಳಿ ಕೂಡ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ One time settlement ವಿನಾಯಿತಿ ಕೊಡಲು ಮುಂದಾಗಿದೆ. ಕಾವೇರಿ ನೀರಿನ ವಿಳಂಬ ಶುಲ್ಕ ಮತ್ತು ಬಡ್ಡಿ ಮೇಲೆ ಸಂಪೂರ್ಣ ವಿನಾಯಿತಿ ನೀಡಲಿದೆ. ಆದರೆ ಅಸಲು ಹಣದಲ್ಲಿ ಯಾವುದೇ ವಿನಾಯಿತಿ ಇಲ್ಲ. ಮೂರು ತಿಂಗಳ ಕಾಲ ಬಾಕಿ ಮೊತ್ತ ವಿನಾಯಿತಿಗೆ ಅವಕಾಶ ನೀಡಲಿದೆ. ಜಲಮಂಡಳಿ ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಜನವರಿ ತಿಂಗಳಿನಿಂದ OTS ಜಾರಿಯಾಗುವ ಸಾಧ್ಯತೆ ಇದೆ.
ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ, ಜಲಮಂಡಳಿಯು 11.14 ಲಕ್ಷ ನೀರಿನ ಸಂಪರ್ಕಗಳನ್ನು ಕಲ್ಪಿಸಿದೆ. ನಗರದ 1.55 ಕೋಟಿ ಜನರ ಬಾಯಾರಿಕೆ ನೀಗಿಸುತ್ತಿದೆ. ನೂರು ಕಿ.ಮೀ. ದೂರದ ಕಾವೇರಿಯಿಂದ ನೀರು ತರುತ್ತಿರುವ ಜಲಮಂಡಳಿಗೆ ನೀರು ಮತ್ತು ಒಳಚರಂಡಿ ಶುಲ್ಕವೇ ಆದಾಯದ ಪ್ರಮುಖ ಮೂಲವಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರದ ಇಲಾಖೆಗಳು, ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ನೀರಿನ ಸಂಪರ್ಕ ಪಡೆದಿರುವ ಸಾರ್ವಜನಿಕರು ಸಮರ್ಪಕವಾಗಿ ಶುಲ್ಕ ಪಾವತಿಸುತ್ತಿಲ್ಲ. ಇದರಿಂದ ಜಲಮಂಡಳಿಯು ದೈನಂದಿನ ನಿರ್ವಹಣೆಗೆ ಹಣ ಹೊಂದಿಸಲು ಪರದಾಡುತ್ತಿದೆ. ಹಲವು ವರ್ಷಗಳಿಂದ ಗ್ರಾಹಕರು 700 ಕೋಟಿ ರೂ. ಶುಲ್ಕ ಬಾಕಿ ಉಳಿಸಿಕೊಂಡಿದ್ದು, ಅಸಲು 450 ಕೋಟಿ ಹಣ ಬರುವ ನಿರೀಕ್ಷೆಯಿದೆ.
ಬೆಂಗಳೂರು ಜಲಮಂಡಳಿಯ ವನ್ ಟೈಮ್ ಸೆಟಲ್ಮೆಂಟ್ ನಿರ್ಧಾರದ ಬಗ್ಗೆ ಬೆಂಗಳೂರಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ನಿರ್ಧಾರ. ನಮ್ಮ ಕಚೇರಿಯ ನೀರಿನ ಬಿಲ್ ಎರಡೂವರೆ ಲಕ್ಷ ರೂ. ಇತ್ತು. ಬಡ್ಡಿ ಮತ್ತು ಫೈನ್ ಸೇರಿ ಲಕ್ಷಾಂತರ ರುಪಾಯಿ ಆಗಿದೆ. ಇದೀಗ ವನ್ ಟೈಮ್ ಸೆಟಲ್ಮೆಂಟ್ ಅವಕಾಶದಿಂದ ನಮಗೆ ಅನುಕೂಲ ಆಗಲಿದೆ ಎಂದಿದ್ದಾರೆ.
ಬಾಕಿ ಬಿಲ್ ಹಣ ಪಾವತಿ ಮಾಡಲು ಬಿಡಬ್ಲೂಎಸ್ಎಸ್ಬಿ ಆನ್‌ಲೈನ್, ಆಫ್‌ಲೈನ್ (ಜಲಮಂಡಳಿ ಕಚೇರಿ) ಮತ್ತು ಇತರ ಬ್ಯಾಂಕಿಂಗ್ ಪಾವತಿ ವ್ಯವಸ್ಥೆಗಳ ಮೂಲಕ ಪಾವತಿಗೆ ಅವಕಾಶ ನೀಡಲದೆ. ಮಾರ್ಚ್ ಅಂತ್ಯದ ವರೆಗೆ ಈ ಓಟಿಎಸ್ ಸಿಸ್ಟಮ್ ಜಾರಿಯಲ್ಲಿರುವ ನಿರೀಕ್ಷೆ ಇದೆ.