
ಬೆಂಗಳೂರು, ಫೆಬ್ರವರಿ 18: ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇತ್ತೀಚೆಗೆ ಬಿ ಖಾತಾ (B Khata) ಹೊಂದಿರುವ ಆಸ್ತಿ ಮಾಲೀಕರು ಎ ಖಾತಾಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಆನ್ಲೈನ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಇದೇ ಆನ್ಲೈನ್ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗಿವೆ. ಆಸ್ತಿ ಮಾಲೀಕರು ಖಾತಾ ವರ್ಗಾವಣೆಗೆ ಲಕ್ಷಾಂತರ ರೂ ಹಣ ಪಾವತಿಸಿದ ಬಳಿಕವೂ ವೆಬ್ಸೈಟ್ನಲ್ಲಿ ಮಾತ್ರ ಪೆಂಡಿಂಗ್ ತೋರಿಸುತ್ತಿದೆ. ಹೀಗಾಗಿ ಆಸ್ತಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಸಾರ್ವಜನಿಕರಿಗೆ ಜಿಬಿಎ ದೋಖಾ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಬಗ್ಗೆ ಟಿವಿ9 ಡಿಜಿಟಲ್ ಕನ್ನಡಗೆ ಬೆಂಗಳೂರಿನ ಆಸ್ತಿ ಮಾಲೀಕರಾದ ಎಮ್. ಶ್ರೀನಿವಾಸ ಎಂಬುವವರು ತಮಗಾದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಗರದ ವಾರ್ಡ್ 161ರ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿಯಲ್ಲಿ ವಾಸವಾಗಿರುವ ಎಮ್. ಶ್ರೀನಿವಾಸ ಅವರು, ಅಲ್ಲಿ ಇರುವಂತಹ ಬಿ ಖಾತಾ ಸ್ವತ್ತಿನ ಮನೆಗೆ ಎ ಖಾತಾಗೆ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.
ಈ ಸ್ವತ್ತು ಅವರ ಪತ್ನಿ ಸ್ವಾತಿ ಎನ್.ಕೆ. ಹೆಸರಿನಲ್ಲಿದ್ದು, ಕಳೆದ ಶುಕ್ರವಾರ ಅಂದರೆ ಫೆಬ್ರವರಿ 12ರಂದು ಒಟ್ಟು ಮೊತ್ತ ಒಂದು ಲಕ್ಷದ ಅರವತ್ತೇಳು ಸಾವಿರದ ಏಳು ನೂರಾ ಎಪ್ಪತ್ತೊಂದು ರೂಪಾಯಿ ಆನ್ಲೈನ್ ಮೂಲಕ ಪಾವತಿ ಮಾಡಿದ್ದಾರೆ. ಆದರೆ ಏಳು ದಿನಗಳ ನಂತರವೂ ಆ ಪಾವತಿಯು ಪೆಂಡಿಂಗ್ ಎಂಬ ಸ್ಟೇಟಸ್ನಲ್ಲಿಯೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಮ್. ಶ್ರೀನಿವಾಸ ಅವರಿಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಇದನ್ನೂ ಓದಿ: ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್ಮೆಂಟ್ಗಳಿಗೆ ಸಿಗಲಿದೆ ಎ ಖಾತಾ!
ಇನ್ನು ಲಕ್ಷಾಂತರ ರೂ ಹಣ ಮಾತ್ರ ಖಾತೆಯಿಂದ ಡೆಬಿಟ್ ಆಗಿದೆ. ಆದರೆ ಆ ಮೊತ್ತಕ್ಕೆ ಜಿಬಿಎ ಕಡೆಯಿಂದ ಯಾವುದೇ ರಸೀದಿ ಕೂಡ ಇವರಿಗೆ ತಲುಪಿಲ್ಲ. ಇಷ್ಟು ದೊಡ್ಡ ಮೊತ್ತ ಹೀಗೆ ಒಂದು ವಾರ ಕಳೆದರೂ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗದೇ ಪರದಾಡಿದ್ದಾರೆ. ಇನ್ನು ಈ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ ಎಂಬುವುದು ತಿಳಿಯದೇ ಕಂಗಾಲಾಗಿದ್ದಾರೆ.
ಇದನ್ನೂ ಓದಿ: BBMP Khata Services: ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ: ಆಸ್ತಿ ಮಾಲೀಕರಿಗೆ ಸಂಪುಟ ಭರ್ಜರಿ ಗುಡ್ ನ್ಯೂಸ್
ಅವರ ವಾರ್ಡ್ ವ್ಯಾಪ್ತಿಯ ಎಆರ್ಒ ಹಿಡಿದು, ಜಿಬಿಎ ಕೇಂದ್ರ ಕಚೇರಿ ತನಕ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವತಿ ಮಾಡಿರುವ ಮೊತ್ತದ ಬಗ್ಗೆ ಆತಂಕಗೊಂಡಿದ್ದು, ದಯವಿಟ್ಟು ಸಮಸ್ಯೆಗೆ ಪರಿಹಾರ ತಿಳಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Wed, 18 February 26