BBMP Khata Services: ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ: ಆಸ್ತಿ ಮಾಲೀಕರಿಗೆ ಸಂಪುಟ ಭರ್ಜರಿ ಗುಡ್ ನ್ಯೂಸ್
ಬೆಂಗಳೂರು ಬಿಬಿಎಂಪಿ ಎ ಖಾತಾ, ಬಿ ಖಾತಾ ಭಾಗ್ಯ: ಕರ್ನಾಟಕ ಸಚಿವ ಸಂಪುಟವು ಬಿ ಖಾತಾಗಳಿಗೆ ಎ ಖಾತಾ ಕಾನೂನು ಮಾನ್ಯತೆ ನೀಡಲು ತೀರ್ಮಾನಿಸಿದೆ. 2009 ರಿಂದ 2024ರ ಸೆಪ್ಟೆಂಬರ್ 30ರವರೆಗೆ ನೀಡಲಾದ ಬಿ ಖಾತಾಗಳಿಗೆ ಈ ನಿರ್ಧಾರ ಅನ್ವಯಿಸಲಿದೆ. ಇದರಿಂದ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಬೆಂಗಳೂರು, ಜುಲೈ 18: ಬೆಂಗಳೂರಿನಲ್ಲಿ ಬಿ ಖಾತಾ (B Khata) ಹೊಂದಿರುವ ಆಸ್ತಿ ಮಾಲೀಕರ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿ ಖಾತಾ ಹೊಂದಿರುವ ಎಲ್ಲರಿಗೆ ಎ ಖಾತಾ (A Khata) ಕಾನೂನು ಮಾನ್ಯತೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka Cabinet) ತೀರ್ಮಾನಿಸಲಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಸಚಿವ ಹೆಚ್‌ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವ ಆಸ್ತಿ ಮಾಲೀಕರಿಗೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
ಯಾವೆಲ್ಲ ಆಸ್ತಿ ಮಾಲೀಕರಿಗೆ ಸಿಗಲಿದೆ ಎ ಖಾತಾ?
ಕ್ರಮಬದ್ಧವಲ್ಲದ ಸೈಟ್ ಅಥವಾ ಆಸ್ತಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ಬಿಬಿಎಂಪಿಯಲ್ಲಿ 2009 ರಿಂದ ಅಸ್ತಿತ್ವದಲ್ಲಿತ್ತು. 2024ರ ಸೆಪ್ಟೆಂಬರ್ 30 ರಿಂದ ಬಿ ಖಾತಾ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ 2009 ರಿಂದ 2024ರ ಸೆಪ್ಟೆಂಬರ್ 30ರ ನಡುವೆ ಯಾರಿಗೆಲ್ಲ ಬಿ ಖಾತಾ ನೀಡಲಾಗಿದೆಯೋ ಅವರಿಗೆಲ್ಲ ಎ ಖಾತಾ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.
ಮನೆ ಕಟ್ಟಲು ಹರಸಾಹಸಪಡುತ್ತಿದ್ದ ಬಿ ಖಾತಾ ಆಸ್ತಿ ಮಾಲೀಕರು
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಕಲಂಗಳ ಪ್ರಕಾರ ಆಸ್ತಿಗಳಿಗೆ ಬಿ ಖಾತಾ ನೀಡಲಾಗುತ್ತಿಲ್ಲ. ಇದರಿಂದಾಗಿ ಈಗಾಗಲೇ ಬಿ ಖಾತಾ ಹೊಂದಿರುವವರಿಗೆ ಮನೆ ಕಟ್ಟುವುದು ಬಹಳ ಸಂಕಷ್ಟದ ಕೆಲಸವಾಗಿತ್ತು. ನೀರು, ಚರಂಡಿ, ವಿದ್ಯುತ್ ಸಂಪರ್ಕ ಸಿಗದೆ ಸುಮಾರು 3 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರು ಸಂಕಷ್ಟಕ್ಕೀಡಾಗಿದ್ದರು. ಅನಿಯಂತ್ರಿತ, ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮತ್ತು ಬಡಾವಣೆಗಳ ನಿರ್ಮಾಣ ತಡೆಯಲು, ಕಟ್ಟಡ ನಿರ್ಮಾಣದಲ್ಲಿ ಶಿಸ್ತು ತರಲು ಮತ್ತು ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳಿಗೆ ಕಾನೂನು ಉದ್ದೇಶಕ್ಕೆ ಅಧಿಕೃತ ಎ ಖಾತಾ ನೀಡಲು ಸಂಪುಟ ನಿರ್ಧರಿಸಿದೆ ಎಂದು ಹೆಚ್‌ಕೆ ಪಾಟೀಲ್ ತಿಳಿಸಿದ್ದಾರೆ.
ಯಾವ ಬಿ ಖಾತಾ ಆಸ್ತಿಗಳಿಗೆ ಎ ಖಾತಾ?
ಬಿ-ಖಾತಾವನ್ನು ಸರ್ಕಾರದ ಸುತ್ತೋಲೆಗಳ ಆಧಾರದ ಮೇಲೆ ನೀಡಿದ್ದರೆ ಎ-ಖಾತಾ ಎಂದು ಪರಿಗಣಿಸಬಹುದು. ಇಲ್ಲದಿದ್ದರೆ ಸರಿಯಾದ ಖಾತಾ ಎಂದು ಪರಿಗಣಿಸಿ ಕಾನೂನು ಉದ್ದೇಶಕ್ಕೆ ಅಧಿಕೃತ ಎಂದು ಪರಿಗಣಿಸಬಹುದು ಎಂದು ಸಂಪುಟ ನಿರ್ಧರಿಸಿದೆ ಎನ್ನಲಾಗಿದೆ. ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ನಕ್ಷೆ ಅನುಮೋದನೆ, ಓಸಿ ಹಾಗೂ ಸಿಸಿ ಸಮಸ್ಯೆ, ತನ್ಮೂಲಕ ಉಂಟಾಗಿದ್ದ ಇತರ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.
ಇದನ್ನೂ ಓದಿ: ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಒಟ್ಟಿನಲ್ಲಿ, ಸಚಿವ ಸಂಪುಟ ನಿರ್ಧಾರದಿಂದ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ನಿರಾಳರಾದಂತಾಗಿದೆ. ಸದ್ಯ ಬಿ ಖಾತಾದಾರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಇಷ್ಟೇ ಅಲ್ಲದೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆಗಳ ರಚನೆ ಮಾಡುವ ಪ್ರಸ್ತಾವನೆಗೂ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 am, Fri, 18 July 25








