ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಮಕ್ಕಳನ್ನ ಹೊರ ಕಳುಹಿಸಿ ತಪಾಸಣೆ
ಬೆಂಗಳೂರಿನ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಆರ್.ಆರ್. ನಗರ ಮತ್ತು ಕೆಂಗೇರಿ ಸೇರಿದಂತೆ ಹಲವು ಪ್ರದೇಶಗಳ ಶಾಲೆಗಳಿಗೆ ಬೆದರಿಕೆ ಸಂದೇಶ ಬಂದಿದೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಜುಲೈ 18: ನಗರದ ಆರ್.ಆರ್ ನಗರ, ಕೆಂಗೇರಿ ಸೇರಿದಂತೆ 40 ಖಾಸಗಿ ಶಾಲೆಗಳಿಗೆ (schools) ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ (bomb threat) ಸಂದೇಶ ರವಾನಿಸಲಾಗಿದೆ. roadkill333@atomicmail.io ಎಂಬ ಇ-ಮೇಲ್ನಿಂದ ಸಂದೇಶ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದಾರೆ.
ಬಾಂಬ್ ಬೆದರಿಕೆ ಇ-ಮೇಲ್ನಲ್ಲಿ ಏನಿದೆ?
ನಮಸ್ಕಾರ, ಶಾಲಾ ತರಗತಿಗಳಲ್ಲಿ ನಾನು ಹಲವು ಸ್ಫೋಟಕ ವಸ್ತುಗಳು ಇರಿಸಿದ್ದೇನೆ. ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಿಂದ ಮುಚ್ಚಿಡಲಾಗಿದೆ. ನಿಮ್ಮೆಲ್ಲರನ್ನೂ ಈ ಲೋಕದಿಂದ ಅಳಿಸಿಹಾಕುತ್ತೇನೆ. ಯಾರೋಬ್ಬರು ಬದುಕುಳಿಯುವುದಿಲ್ಲ. ಈ ಸುದ್ದಿಯನ್ನು ನಾನು ನೋಡುವಾಗ ಸಂತೋಷದಿಂದ ನಗುತ್ತೇನೆ ಎಂದು ಕಿಡಿಗೇಡಿ ಇ-ಮೇಲ್ನಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಕಾಲೇಜಿಗೆ ಬಾಂಬ್ ಬೆದರಿಕೆ, ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುತ್ತೇವೆ ಎಂದ ದುಷ್ಕರ್ಮಿಗಳು
ನೀವೆಲ್ಲರೂ ಕಷ್ಟ ಅನುಭವಿಸಲೇಬೇಕು. ಈ ಸುದ್ದಿ ಹೊರ ಬಂದ ನಂತರ ನಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನಗೆ ಯಾರೊಬ್ಬರು ನಿಜವಾಗಿಯೂ ಸಹಾಯ ಮಾಡಿಲ್ಲ. ಮನೋವೈದ್ಯರು, ಮನೋವಿಜ್ಞಾನಿಗಳು, ಯಾರೂ ಕಾಳಜಿ ವಹಿಸಿಲ್ಲ ಮತ್ತು ಯಾರೂ ಎಂದಿಗೂ ಕಾಳಜಿ ವಹಿಸುವುದಿಲ್ಲ ಎಂದಿದ್ದಾನೆ.
ನೀವು ಅಸಹಾಯಕ ಮತ್ತು ಅಜ್ಞಾನಿ ಮನುಷ್ಯರಿಗೆ ಔಷಧ ನೀಡುವುದರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ, ಆ ಔಷಧಿಗಳು ನಿಮ್ಮ ಅಂಗಗಳನ್ನು ಹಾಳುಮಾಡುತ್ತವೆ ಅಥವಾ ಅದು ತೂಕ ಹೆಚ್ಚಿಸಲು ಕಾರಣವಾಗುತ್ತವೆ ಎಂದು ಮನೋವೈದ್ಯರು ಎಂದಿಗೂ ನಿಮಗೆ ಹೇಳುವುದಿಲ್ಲ.
ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ಗೆ ಒಂದೇ ವಾರದಲ್ಲಿ 2ನೇ ಬಾರಿಗೆ ಹುಸಿ ಬಾಂಬ್ ಮೇಲ್ ಬೆದರಿಕೆ
ಮನೋವೈದ್ಯಕೀಯ ಔಷಧಗಳು ಜನರಿಗೆ ಸಹಾಯ ಮಾಡುತ್ತವೆ ಎಂದು ಯೋಚಿಸುವಂತೆ ಜನರ ಬ್ರೈನ್ ವಾಶ್ ಮಾಡುತ್ತಾರೆ. ಆದರೆ ಅದು ಹಾಗೆ ಆಗುವುದಿಲ್ಲ ಎಂಬುದಕ್ಕೆ ನಾನು ಜೀವಂತ ಸಾಕ್ಷಿ ನೀಡುತ್ತೇನೆ. ನೀವೆಲ್ಲರೂ ಇದಕ್ಕೆ ಅರ್ಹರು. ನನ್ನಂತೆಯೇ ನೀವು ಸಹ ಕಷ್ಟ ಅನುಭವಿಸಲು ಅರ್ಹರು ಎಂದು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯ 10ಕ್ಕೂ ಹೆಚ್ಚು ಶಾಲೆಗಳಿಗೂ ಬಾಂಬ್ ಬೆದರಿಕೆ
ಇನ್ನು ದೆಹಲಿಯ 10ಕ್ಕೂ ಹೆಚ್ಚು ಶಾಲೆಗಳಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಶಾಲೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಹುಸಿ ಬಾಂಬ್ ಸಂದೇಶ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:22 am, Fri, 18 July 25







