ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ಕರ್ನಾಟಕದಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಹೆಚ್ಚಾಗತೊಡಗಿವೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಇದೀಗ ಹಾಸನದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಹಾಸನ, ಜೂನ್ 16: ಹಾಸನದ (Hassan) ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ (bomb Threat) ಸಂದೇಶ ಬಂದಿದೆ. ಒಟ್ಟು 3 ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಬಂದಿದೆ. ಹಾಸನದ ವಿಜಯನಗರ ಇಂಡಸ್ಟ್ರಿಯಲ್ ಏರಿಯಾ, ಕೆಆರ್ ಪುರಂದಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆಗೆ ಇ-ಮೇಲ್ ಬಂದಿದೆ. 1 ಗಂಟೆಗೆ ಕಟ್ಟಡ ಸ್ಫೋಟಿಸುವುದಾಗಿ ದುಷ್ಕರ್ಮಿ ಸಂದೇಶ ಕಳುಹಿಸಿದ್ದಾನೆ. ವಿದ್ಯಾಸೌಧ ಶಾಲೆ ಹಾಗೂ ಕಿಡ್ಸ್ ಶಾಲೆ ಮಂಜೇಗೌಡ ಎಂಬುವವರಿಗೆ ಸೇರಿದ್ದಾಗಿದೆ. ಈ ಬಗ್ಗೆ ಹಾಸನ ನಗರ, ಗ್ರಾಮಾಂತರ ಠಾಣೆಗೆ ಪ್ರಾಂಶುಪಾಲರು ರಾತ್ರಿಯೇ ದೂರು ನೀಡಿದ್ದರು. ತಡರಾತ್ರಿಯೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ನೀಡಿದ ದೂರಿನಲ್ಲೇನಿದೆ?
ಭಾನುವಾರ ರಾತ್ರಿ 10.16 ಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ವಿಷಯವು ಗಂಭೀರ ಕಳವಳಕಾರಿಯಾಗಿರುವುದರಿಂದ, ಈ ಬಗ್ಗೆ ತನಿಖೆ ನಡೆಸಲು ಮತ್ತು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ತಕ್ಷಣ ಕ್ರಮ ಕೈಗೊಳ್ಳುವಂತೆ ನಾವು ವಿನಂತಿಸುತ್ತೇವೆ. ದಯವಿಟ್ಟು ಭದ್ರತೆಗಾಗಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಮತ್ತು ಸಂಪೂರ್ಣ ತಪಾಸಣೆ ನಡೆಸಿ, ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ಒದಗಿಸಲು ಮತ್ತು ತನಿಖೆಯಲ್ಲಿ ನಿಮ್ಮ ಅಧಿಕಾರಿಗಳೊಂದಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಈ ವಿಷಯವನ್ನು ಅತ್ಯಂತ ತುರ್ತು ಮತ್ತು ಗಂಭೀರವಾಗಿ ಪರಿಗಣಿಸಿ. ನಿಮ್ಮ ತ್ವರಿತ ಪ್ರತಿಕ್ರಿಯೆ ಮತ್ತು ಅಗತ್ಯ ಕ್ರಮಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ: ಪೊಲೀಸ್ ಮುಂದೆಯೇ ಯುವಕನಿಗೆ ಮನಸೋ ಇಚ್ಚೇ ಥಳಿತ
ಇದರ ಬೆನ್ನಲ್ಲೇ ಶಾಲೆಗೆ ಪೊಲೀಸರು ಧಾವಿಸಿದ್ದಾರೆ. ಬಾಂಬ್ ಪತ್ತೆ ದಳವೂ ಕಾರ್ಯಾಚರಣೆ ನಡೆಸಿದೆ. ಆದರೆ, ಸ್ಫೋಟಕಗಳು ಪತ್ತೆಯಾದ ಬಗ್ಗೆ ಈವರೆಗೆ ಪೊಲೀಸರು ದೃಢಪಡಿಸಿಲ್ಲ.
ತಿಂಗಳ ಹಿಂದಷ್ಟೇ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ಆಚಾರ್ಯ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಜತೆಗೆ, ಪ್ರಾಂಶುಪಾಲರಿಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಅದಕ್ಕೂ 2 ದಿನಗಳ ಮೊದಲು, ಅಂದರೆ ಏಪ್ರಿಲ್ 27 ರಂದು ಬೆಂಗಳೂರು ವಾರಾಣಸಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಹುಸಿ ಬೆದರಿಕೆ ಸಂದೇಶ ಬಂದಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Mon, 16 June 25







