ತುಮಕೂರು: ರಾಷ್ಟ್ರಮಟ್ಟದ ವಿದ್ಯಾರ್ಥಿವೇತನಕ್ಕೆ ಸಿದ್ದಗಂಗಾ ಮಠದ ಆರು ವಿದ್ಯಾರ್ಥಿಗಳು ಆಯ್ಕೆ
ಸಿದ್ಧಗಂಗಾ ಮಠದ ಆರು ಬಡ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ NMMS ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ, ಅವರಿಗೆ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು 1000 ರೂ. ವಿದ್ಯಾರ್ಥಿವೇತನ ದೊರೆಯಲಿದೆ. ವಿದ್ಯಾರ್ಥಿಗಳ ಸಾಧನೆಗೆ ಸಿದ್ದಲಿಂಗ ಸ್ವಾಮೀಜಿಗಳು ಅಭಿನಂದಿಸಿದ್ದಾರೆ.

ತುಮಕೂರು, ಜೂನ್ 16: ಸಿದ್ದಗಂಗಾ ಮಠದ (Siddaganga Mutt) ಆರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವಿದ್ಯಾರ್ಥಿವೇತನಕ್ಕೆ (scholarship) ಆಯ್ಕೆ ಆಗಿದ್ದಾರೆ. ಆ ಮೂಲಕ ಸಿದ್ದಗಂಗಾ ಮಠದ ಬಡಮಕ್ಕಳ ಶ್ರಮಕ್ಕೆ ಗರಿಮೆ ಸಂದಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಸೂಚನೆಯಡಿ ನಡೆಯುವ ಕೇಂದ್ರ ಸರ್ಕಾರದ ಯೋಜನೆಯನ್ನು ಮಠದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡಿದ್ದಾರೆ. ಸದ್ಯ ವಿದ್ಯಾರ್ಥಿಗಳ ಸಾಧನೆಗೆ ಸಿದ್ದಲಿಂಗ ಸ್ವಾಮೀಜಿಗಳಿಂದ ಶಬ್ಬಾಸ್ ಗಿರಿ ಸಿಕ್ಕಿದೆ.
ರಾಷ್ಟ್ರೀಯ ಮಟ್ಟದ NMMS ವಿದ್ಯಾರ್ಥಿವೇತನ ಅಡಿ 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ 90 ನಿಮಿಷದ 90 ಪ್ರಶ್ನೆಗೆ ಉತ್ತರ ನೀಡುವ ಮೂಲಕ ಅತ್ಯತ್ತಮ ಅಂಕ ಪಡೆದ ಸಿದ್ದಗಂಗಾ ಮಠದ 6 ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ತುಮಕೂರು: ಸ್ವಂತ ಹಣದಿಂದ ಸರ್ಕಾರಿ ಶಾಲೆಗೆ ಆಧುನಿಕ ಕೊಠಡಿ ನಿರ್ಮಿಸಿಕೊಟ್ಟ ಚಿಕ್ಕಚೆಂಗಾವಿ ರೈತ
ಲಕ್ಷಾಂತರ ವಿದ್ಯಾರ್ಥಿಗಳು ಬರೆಯುವ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆಯುವ ಮೂಲಕ ಮಠದ ಗರಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ, 8ನೇ ತರಗತಿಯಿಂದ ಪಿಯುಸಿ ಮುಗಿಯುವರೆಗೂ ಪ್ರತಿ ತಿಂಗಳು ತಲಾ ಒಬ್ಬ ವಿದ್ಯಾರ್ಥಿಗೆ ಒಂದು ಸಾವಿರ ರೂ ಹಣ ನೀಡುತ್ತದೆ.
ಮಕ್ಕಳ ಸಾಧನೆಗೆ ಸಿದ್ದಲಿಂಗ ಶ್ರೀಗಳ ಮೆಚ್ಚುಗೆ ಮಾತು
ಮಕ್ಕಳ ಸಾಧನೆ ಕುರಿತು ಮಾತನಾಡಿದ ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಪ್ರತಿ ವರ್ಷ ನಮ್ಮ ಮಕ್ಕಳು ಕೇಂದ್ರ ಸರ್ಕಾರ ಯೋಜನೆಯ ವಿದ್ಯಾರ್ಥಿವೇತನಕ್ಕೆ ಅರ್ಹರಾಗುತ್ತಿದ್ದಾರೆ. ಈ ವರ್ಷವೂ ಪರೀಕ್ಷೆ ತೆಗೆದುಕೊಂಡು ಆರು ಮಕ್ಕಳು ಅರ್ಹರಾಗಿದ್ದಾರೆ. ಪರೀಕ್ಷೆ ಬಹಳಷ್ಟು ಕಠಿಣವಾಗಿರುತ್ತದೆ. 90 ಪ್ರಶ್ನೆ 90 ನಿಮಿಷದಂತೆ ಒಟ್ಟು ಎರಡು ಸುತ್ತಿನ ಪರೀಕ್ಷೆ ಇರತ್ತೆ. ನಿಮಿಷಕ್ಕೊಂದು ಪ್ರಶ್ನೆಗೆ ಉತ್ತರ ಬರೆಯಬೇಕು. 180 ಅಂಕ ಪಡೆದರೇ ಮಾತ್ರ ಅರ್ಹರಾಗುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀಟ್ನಲ್ಲಿ ಕರ್ನಾಟಕಕ್ಕೆ ಫಸ್ಟ್ ರ‍್ಯಾಂಕ್: ಗುಮ್ಮಟನಗರಿ ಹುಡುಗ ಮುಂದಿನ ಗುರಿ ಏನು ಗೊತ್ತಾ?
ಮೂರು ಜನ ಗಂಡು ಹಾಗೂ ಮೂರು ಜನ ಹೆಣ್ಣು ಮಕ್ಕಳು ಪಾಸ್ ಆಗಿ ಅರ್ಹರಾಗಿದ್ದಾರೆ. ಅವರಿಗೆ ನಾಲ್ಕು ವರ್ಷ ವಿದ್ಯಾರ್ಥಿವೇತನ ಸಿಗುತ್ತದೆ. ಎಲ್ಲರಿಗೂ ಈ ಪರೀಕ್ಷೆ ಇರುವುದಿಲ್ಲ. ಬಡಮಕ್ಕಳಿಗೆ ಮಾತ್ರ ಈ ಪರೀಕ್ಷೆ ನಡೆಯುತ್ತದೆ. ಹಳ್ಳಿ ಮಕ್ಕಳಿಗೆ, ಬಡಮಕ್ಕಳಿಗೆ ಈ ರೀತಿಯ ವಿದ್ಯಾರ್ಥಿವೇತನ ತುಂಬಾ ಉಪಯೋಗವಾಗಿದೆ. ಕೇಂದ್ರ ಸರ್ಕಾರದ ಉತ್ತಮ ಯೋಜನೆ ಇದು. ಮಕ್ಕಳ ಪ್ರತಿಭೆ ವಿಕಾಸವಾಗುತ್ತದೆ. ಮಕ್ಕಳ ಶಿಕ್ಷಣಕ್ಕೂ ಪೂರಕ ಸಹಕಾರವಾಗುತ್ತದೆ. ಇಂತಹ ಮಕ್ಕಳಿಗೆ ನಾನು ಅಭಿನಂದಿಸುತ್ತೇನೆ. ಈ ರೀತಿಯ ಪರೀಕ್ಷೆ ಎದುರಿಸುವ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಕ್ಕಳಿಗೆ ಧೈರ್ಯ ಬರುತ್ತದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







