ತುಮಕೂರು: ಸ್ವಂತ ಹಣದಿಂದ ಸರ್ಕಾರಿ ಶಾಲೆಗೆ ಆಧುನಿಕ ಕೊಠಡಿ ನಿರ್ಮಿಸಿಕೊಟ್ಟ ಚಿಕ್ಕಚೆಂಗಾವಿ ರೈತ
ಪ್ರಸಕ್ತ ಸನ್ನಿವೇಶದಲ್ಲಿ ಸರ್ಕಾರಿ ಶಾಲೆ ಅಂದರೆ ಜನ ಕೇವಲವಾಗಿ ನೋಡುವ ಸ್ಥಿತಿ ತಲುಪಿದೆ. ಮನೆ ಬಾಗಿಲಿಗೆ ಬರುವ ಖಾಸಗಿ ಸ್ಕೂಲ್ ವ್ಯಾನ್ಗಳು, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಕೊರತೆ ಇತ್ಯಾದಿ ಕಾರಣಗಳಿಂದಾಗಿ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಈ ಮಧ್ಯೆ ತಮುಕೂರಿನ ಚಿಕ್ಕಚೆಂಗಾವಿ ರೈತರೊಬ್ಬರು ತಮ್ಮ ಊರಿನ ಸರ್ಕಾರಿ ಶಾಲೆಗೆ ಸ್ವಂತ ಹಣದಿಂದ ಕೊಠಡಿ ನಿರ್ಮಾಣ ಮಾಡಿಕೊಟ್ಟು ಮಾದರಿಯಾಗಿದ್ದಾರೆ.

ತುಮಕೂರು, ಜೂನ್ 7: ಹೈಟೆಕ್ ಆಗಿ ಕಾಣುತ್ತಿರುವ ಶಾಲಾ ಕೊಠಡಿ. ಫಕ್ಕನೆ ನೊಡಿದಾಗ ಯಾವುದೋ ಖಾಸಗಿ ಶಾಲೆ ಕೊಠಡಿ ಇರಬೇಕು ಎಂದು ಒಂದು ಕ್ಷಣ ಅನ್ನಿಸುವಂತಿದೆ. ಆದರೆ ಇದು ಖಾಸಗಿ ಶಾಲೆ ಕೊಠಡಿ ಅಲ್ಲ! ರೈತರೊಬ್ಬರು ತಮ್ಮೂರಿನ ಸರ್ಕಾರಿ ಶಾಲೆ (govt School) ಉಳಿಸಲು ಸ್ವಂತ ಹಣದಲ್ಲಿ 10 ಲಕ್ಷ ರೂ. ಖರ್ಚು ಮಾಡಿ ಹೈಟೆಕ್ ಕೊಠಡಿ ನಿರ್ಮಿಸಿ ಕೊಡುಗೆಯಾಗಿ ಕೊಟ್ಟಿದ್ದಾರೆ! ತುಮಕೂರು (Tumkur) ಜಿಲ್ಲೆ ಗುಬ್ಬಿ ತಾಲೂಕಿನ ಚಿಕ್ಕಚೆಂಗಾವಿ ಗ್ರಾಮದ ರೈತ ಪ್ರಕಾಶ್ ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಉತ್ತಮ ಕೊಠಡಿಯಿಲ್ಲದೇ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡ ರೈತ ತಮ್ಮೂರಿನ ಶಾಲೆಯನ್ನು ಹೇಗಾದರು ಮಾಡಿ ಉಳಿಸಬೇಕು ಎಂದು ಶಿಕ್ಷಕರು ಹಾಗೂ ತಾಲ್ಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಬರೊಬ್ಬರಿ 10 ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ತಮ್ಮೂರಿನ ಸರ್ಕಾರಿ ಶಾಲೆಗೆ ಹೈಟೆಕ್ ಶಾಲಾ ಕೊಠಡಿ ಕಟ್ಟಿಸಿಕೊಟ್ಟಿದ್ದಾರೆ.

ಚಿಕ್ಕಚೆಂಗಾವಿ ಗ್ರಾಮದ ರೈತ ಪ್ರಕಾಶ್
ಈ ಶಾಲೆಯಲ್ಲಿ ಈ ಹಿಂದೆ ಕೇವಲ 10 ಮಕ್ಕಳ ದಾಖಲಾತಿಯಾಗಿತ್ತು. ಈ ಕೊಠಡಿ ನಿರ್ಮಾಣದ ಬಳಿಕ ಇದೀಗ 20ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಶಾಲಾ ಆವರಣದಲ್ಲಿ ಉತ್ತಮವಾದ ಶೌಚಾಲಯ, ಹೈಟೆಕ್ ಕಾಪೌಂಡ್ ನಿರ್ಮಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಎಲ್ಲೂ ಹೆಸರು ಹಾಕಿಸದ ರೈತ!
ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಶಾಲಾ ಕೊಠಡಿ ಕೊಡುಗೆ ಕೊಟ್ಟಿದ್ದರೂ, ಶಾಲೆಯ ಯಾವುದೇ ಮೂಲೆಯಲ್ಲೂ ತನ್ನ ಹೆಸರಾಗಲಿ, ತಮ್ಮ ಕುಟುಂಬದವರ ಹೆಸರನ್ನಾಗಲಿ ರೈತ ಪ್ರಕಾಶ್ ಹಾಕಿಸಿಲ್ಲ. ಶ್ರೀಮಂತರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುವ ರೀತಿಯೇ ತಮ್ಮ ಗ್ರಾಮದ ಬಡವರ ಮಕ್ಕಳು ಕೂಡ ಓದಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಮಾಡಿದ್ದಾಗಿ ಪ್ರಕಾಶ್ ‘ಟಿವಿ9’ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲೆ ಆರಂಭವಾಗಿ ವಾರ ಕಳೆದರೂ ವಿದ್ಯಾರ್ಥಿಗಳ ಕೈಸೇರಿಲ್ಲ ಪಠ್ಯ ಪುಸ್ತಕ: ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ
ಒಟ್ಟಿನಲ್ಲಿ, ರೈತ ಪ್ರಕಾಶ್ ಅವರ ಸಮಾಜಮುಖಿ ಉತ್ತಮ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಸರ್ಕಾರಿ ಶಾಲೆ ಅಂದರೆ ದೂರ ಉಳಿಯುವ ಅದೆಷ್ಟೋ ಮಂದಿಯ ನಡುವೆ ನಮ್ಮೂರಿನ ಸರ್ಕಾರಿ ಶಾಲೆಗೆ ಹೊಸ ಮೆರುಗು ಕೊಟ್ಟಿರುವ ರೈತನ ಪ್ರಯತ್ನ ಬಡಮಕ್ಕಳ ಆಶಾಕಿರಣವಾಗಲಿ.







