ನೀಟ್ನಲ್ಲಿ ಕರ್ನಾಟಕಕ್ಕೆ ಫಸ್ಟ್ ರ‍್ಯಾಂಕ್: ಗುಮ್ಮಟನಗರಿ ಹುಡುಗ ಮುಂದಿನ ಗುರಿ ಏನು ಗೊತ್ತಾ?
ವಿಜಯಪುರದ ನಿಖಿಲ್ ಸೊನ್ನದ ಎಂಬ ವಿದ್ಯಾರ್ಥಿ 2025ರ ನೀಟ್ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಆ ಮೂಲಕ ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 720ಕ್ಕೆ 670 ಅಂಕ ಗಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ 17ನೇ ರ‍್ಯಾಂಕ್ ಪಡೆದಿದ್ದಾರೆ. ಟಿವಿ9 ಗೆ ಫಸ್ಟ್ ರ‍್ಯಾಂಕ್ ರಹಸ್ಯ ಬಿಚ್ಚಿಟ್ಟಿದ್ದಾರೆ.

ವಿಜಯಪುರ, ಜೂನ್ 15: ವಿಜಯಪುರ (Vijayapura) ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ. ಎಷ್ಟೇ ಹಿಂದುಳಿದಿದ್ದರೂ ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಶನಿವಾರ ಪ್ರಕಟಗೊಂಡ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷಾ ಫಲಿತಾಂಶದಲ್ಲಿ (NEET UG Result) ಜಿಲ್ಲೆಯ ವಿದ್ಯಾರ್ಥಿ ಕರ್ನಾಟಕಕ್ಕೆ ಮೊದಲನೇ ಸ್ಥಾನ ಗಳಿಸಿದ್ದಾರೆ. ನಗರದ ವೈದ್ಯ ದಂಪತಿಯ ಪುತ್ರ ನಿಖಿಲ್ ಸೊನ್ನದ ನೀಟ್ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
720 ಕ್ಕೆ 670 ಅಂಕ
ವಿಜಯಪುರ ನಗರದ ವೈದ್ಯ ದಂಪತಿ ಡಾ. ಸಿದ್ದಪ್ಪ ಸೊನ್ನದ್ ಹಾಗೂ ಡಾ. ಮೀನಾಕ್ಷಿ ಅವರ ಮನೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಕಾರಣ ನಿನ್ನೆ ಪ್ರಕಟವಾದ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ. ಈ ಪರೀಕ್ಷೆಯಲ್ಲಿ ಅವರ ಪುತ್ರ ನಿಖಿಲ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ 17 ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಗನ ಸಾಧನೆಗೆ ಇಡೀ ಕುಟುಂಬ ಸಂಸತಪಟ್ಟಿದೆ. ಮಂಗಳೂರು ವಳಚಿಲ್‌ನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಿಖಿಲ್, ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 670 ಅಂಕ ಪಡೆದಿದ್ದಾರೆ.
ನರರೋಗ ತಜ್ಞನಾಗುವ ಆಸೆ: ನಿಖಿಲ್ ಸೊನ್ನದ
ನಿಖಿಲ್ ಸಾಧನೆ ಕುಟುಂಬಕಷ್ಟೇಯಲ್ಲಾ ಜಿಲ್ಲೆ ಹಾಗೂ ರಾಜ್ಯಕ್ಕೆ ಸಂತಸದ ಸಂಗತಿ. ನಿಖಿಲ್‌ಗೆ ಆರತಿ ಬೆಳಗಿ ಸಿಹಿ ತಿನ್ನಿಸಿ ಪೋಷಕರು ಸಂತಸ ಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ವಿದ್ಯಾರ್ಥಿ ನಿಖಿಲ್, ಒತ್ತಡ ರಹಿತವಾಗಿ ನಿರಂತರ ಅಭ್ಯಾಸ, ಕ್ರೀಡೆ, ಸಾಹಿತ್ಯ, ಆಧ್ಯಾತ್ಮಗಳ ವಿಚಾರ ಪಠ್ಯೇತರವಾಗಿ ಅಳವಡಿಕೆ ಮಾಡಿಕೊಂಡು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದೆ. ಮುಂದೆ ದೆಹಲಿಯ ಏಮ್ಸ್ನಲ್ಲಿ ಎಂಬಿಬಿಎಸ್ ಮಾಡಿ, ನಂತರ ನರರೋಗ ತಜ್ಞನಾಗುವ ಆಸೆ ಇದೆ ಎಂದು ಹೇಳಿದ್ದಾರೆ.
ಮಗನ ಸಾಧನೆ ಇತರರಿಗೆ ಮಾದರಿಯಾಗಲಿ ಎಂದ ನಿಖಿಲ್ ಪೋಷಕರು
ಇನ್ನು ಮಗನ ಸಾಧನೆಗೆ ನಿಖಿಲ್ ಪೋಷಕರು ಹಾಗೂ ಸಂಬಂಧಿಕರಲ್ಲಿ ಸಂತಸ ಹೆಚ್ಚಾಗಿದೆ. ನಗರದಲ್ಲಿ ಸ್ವಂತ ಆಸ್ಪತ್ರೆ ಹೊಂದಿರುವ ತಂದೆ ಡಾ. ಸಿದ್ದಪ್ಪ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ನೇತ್ರ ತಜ್ಞೆಯಾಗಿರುವ ತಾಯಿ ಡಾ. ಮೀನಾಕ್ಷಿ ಮಗನ ಸಾಧನೆ ಇತರರಿಗೆ ಮಾದರಿಯಾಗಲಿ ಎಂದಿದ್ದಾರೆ.
ಇದನ್ನೂ ಓದಿ: NEET UG Result 2025: NEET UG ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಲಿಂಕ್ ಇಲ್ಲಿದೆ
ಯಾವತ್ತೂ ನಮ್ಮ ಮಗನಿಗೆ ಹೀಗೆ ಓದು, ಹಾಗೇ ಓದಬೇಕೆಂದು ಒತ್ತಡ ಹಾಕಿಲ್ಲ. ಅವನ ಆಸಕ್ತಿ ಹೇಗಿತ್ತೋ ಹಾಗೇ ಬಿಟ್ಟಿದ್ದೇವು. ಈ ಮೊದಲು ನ್ಯಾಷನಲ್ ಡಿಫೆನ್ಸ್ನಲ್ಲಿ ಸೇರುವ ಆಸೆ ಹೊಂದಿದ್ದ. ಎನ್ಡಿಎ ಪರೀಕ್ಷೆಯಲ್ಲೂ ಪಾಸ್ ಆಗಿದ್ದ. ನಂತರ ವೈದ್ಯನಾಗಬೇಕೆಂದು ನಿರ್ಧಾರ ಮಾಡಿದ್ದಾನೆ. ಆತನ ಆಸೆಗೆ ನಾವು ಆಡ್ಡಿಯಾಗಿಲ್ಲ. ಹಣ ಗಳಿಸುವುದಕ್ಕಾಗಿ ಓದಬಾರದು, ಜ್ಞಾನ ಸಂಪಾದನೆಗಾಗಿ ಓದಬೇಕೆಂದು ಮೌಲ್ಯಗಳನ್ನು ಮಾತ್ರ ಹೇಳಿದ್ದೇವೆ. ಮಗ ಮಾಡಿದ ಸಾಧನೆ ಖುಷಿ ನೀಡಿದೆ ಎಂದು ಪೋಷಕರು ಹೇಳಿದ್ದಾರೆ.
ಒಟ್ಟಾರೆ ನೀಟ್ನಲ್ಲಿ ವಿಜಯಪುರದ ವಿದ್ಯಾರ್ಥಿ ನಿಖಿಲ್ ಸಾಧನೆ ಮಾಡಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಿಖಿಲ್ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ನಿಖಿಲ್ ಸಾಧನೆ ಇತರೆ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.