ಕರ್ನಾಟಕದಲ್ಲಿ 1.35 ಲಕ್ಷ ಇಂಜಿನಿಯರಿಂಗ್ ಸೀಟುಗಳು ಲಭ್ಯ: ಕರಡು ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ ಕೆಇಎ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಕರಡು ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ್ದು, 2025-26ನೇ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ 1.35 ಲಕ್ಷ ಇಂಜಿನಿಯರಿಂಗ್ ಸೀಟುಗಳು ಲಭ್ಯವಿದೆ ಎಂದು ತಿಳಿಸಿದೆ. 64,047 ಸರ್ಕಾರಿ ಕೋಟಾ ಸೀಟುಗಳಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಸೀಟ್ಗಳ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆ ಆಗಿದೆ.

ಬೆಂಗಳೂರು, ಜೂನ್ 14: 2025-26ನೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ 1.35 ಲಕ್ಷ ಇಂಜಿನಿಯರಿಂಗ್ ಸೀಟುಗಳು (engineering seats) ಲಭ್ಯವಿದ್ದು, ಇದು ಕಳೆದ ವರ್ಷ ಲಭ್ಯವಿದ್ದ ಸೀಟುಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. ಈ ಕುರಿತಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದೆ.
ಕೆಇಎ ಮಾಹಿತಿ ಪ್ರಕಾರ, ಈ ವರ್ಷ 1,35,969 ಸೀಟುಗಳು ಹಂಚಿಕೆಗೆ ಲಭ್ಯವಿದ್ದು, ಇದರಲ್ಲಿ 64,047 ಸರ್ಕಾರಿ ಕೋಟಾದಡಿಯಲ್ಲಿವೆ. ಕಳೆದ ವರ್ಷ 1,41,009 ಸೀಟ್ಗಳು ಲಭ್ಯವಿದ್ದು ಅದರಲ್ಲಿ 66,663 ಸರ್ಕಾರಿ ಕೋಟಾದಡಿಯಲ್ಲಿತ್ತು. ಕರಡು ಸೀಟ್ ಮ್ಯಾಟ್ರಿಕ್ಸ್ನಲ್ಲಿ ಲೋಪದೋಷವಿದ್ದಲ್ಲಿ ಅಥವಾ ಆಕ್ಷೇಪಣೆ, ಸಲಹೆಗಳು ಇದ್ದಲ್ಲಿ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಬಹುತೇಕ ವಿವಿಗಳಲ್ಲಿ ಪ್ರಾಧ್ಯಾಪಕರ ಕೊರತೆ: ಸ್ನಾತಕೋತ್ತರ ವಿಧ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿತದ ಆತಂಕ
2025-26ನೇ ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯಗಳಲ್ಲಿನ ಇಂಜಿನಿಯರಿಂಗ್ ಸ್ನಾತಕ ಕೋರ್ಸ್ಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (AICTE)ಯಿಂದ ಪ್ರವೇಶಾತಿ ಅನುಮೋದನೆ ನೀಡಿರುವ ಕಾಲೇಜುಗಳನ್ನು ಕರಡು ಸೀಟ್ ಮ್ಯಾಟ್ರಿಕ್ಸ್ನಲ್ಲಿ ಪರಿಗಣಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿ ಹೇಳಿದ್ದಿಷ್ಟು
ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಸೀಟುಗಳ ಸಂಖ್ಯೆಯಲ್ಲಿ ಇಳಿಕೆಗೆ ಪ್ರಮುಖ ಕಾರಣವೆಂದರೆ ಕೆಲವು ಕಾಲೇಜುಗಳು ಸೇರಿದಂತೆ ಅದರಲ್ಲೂ ಅನುದಾನಿತ ಕಾಲೇಜುಗಳು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (AICTE) ಪ್ರವೇಶಾತಿಗೆ ಅನುಮೋದನೆ ಪಡೆಯದಿರುವುದಾಗಿದೆ. ಹೀಗಾಗಿ ಅಧಿಕೃತ ಅನುಮತಿಯಿಲ್ಲದೆ ಗೊಂದಲವನ್ನು ಸೃಷ್ಟಿಸಲು ನಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಒಂದು ವಾರದೊಳಗೆ ಅನುಮೋದನೆ ಸಿಗಲಿದೆ: ಪ್ರಾಂಶುಪಾಲರು
ಈ ಬಗ್ಗೆ ಅನುದಾನಿತ ಕಾಲೇಜ್ ಒಂದರ ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದು, ನಮ್ಮ ಕಡೆಯಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸಲ್ಲಿಸುವಲ್ಲಿ ಕೆಲವು ದೋಷಗಳು ಉಂಟಾಗಿವೆ. ಒಂದು ವಾರದೊಳಗೆ ನಮಗೆ ಅನುಮೋದನೆ ಸಿಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Become a Pilot: ಪೈಲಟ್ ಆಗುವುದು ಹೇಗೆ? ಶೈಕ್ಷಣಿಕ ಅರ್ಹತೆ ಹಾಗೂ ತರಬೇತಿಗಳೇನು? ಮಾಹಿತಿ ಇಲ್ಲಿದೆ
ಕರಡು ಸೀಟ್ ಮ್ಯಾಟ್ರಿಕ್ಸ್ನಲ್ಲಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಸೀಟುಗಳು ಕಡಿಮೆ ಇವೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಒಟ್ಟು 33,813 ಸೀಟುಗಳು ಲಭ್ಯವಿದ್ದು, ಅದರಲ್ಲಿ 15,754 ಸೀಟುಗಳನ್ನು ಕೆಇಎ ಭರ್ತಿ ಮಾಡುತ್ತದೆ. 2024ರಲ್ಲಿ 35,013 ಕಂಪ್ಯೂಟರ್ ಸೈನ್ಸ್‌ನ ಸೀಟ್ಗಳಿದ್ದವು. ಅದರಲ್ಲಿ 16,280 ಸೀಟುಗಳನ್ನು ಸರ್ಕಾರಿ ಕೋಟಾದಡಿಯಲ್ಲಿ ಭರ್ತಿ ಮಾಡಲಾಗಿತ್ತು.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Sat, 14 June 25








