ಸರ್ಕಾರಿ ಶಾಲೆ ಹಾಜರಾತಿ , ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಶಿಕ್ಷಣ ಸಚಿವ
ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಹಾಜರಾತಿ ಹಾಗೂ ಶಿಕ್ಷಕರ ನೇಮಕಾತಿ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ . ಪಠ್ಯಕ್ರಮದಲ್ಲಿ ನೀತಿ ವಿಜ್ಞಾನ ವಿಷಯವನ್ನು ಮತ್ತೆ ಪರಿಚಯಿಸುವ ಯೋಜನೆಯೂ ಇದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ CET ಮತ್ತು NEET ತರಬೇತಿಯನ್ನು ಒದಗಿಸಲಾಗುವುದು ಎಂದರು.

ಬಾಗಲಕೋಟೆ, ಜೂನ್ 10: ಸರ್ಕಾರಿ ಶಾಲಾ (Government School) ದಾಖಲಾತಿ ಮತ್ತು ಶಿಕ್ಷಕರ ನೇಮಕ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಬಿಗ್ ಅಪ್ಡೇಟ್ ನೀಡಿದ್ದಾರೆ. ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಎಐ ಆಧಾರಿತ ಹಾಜರಾತಿ (AI Attendance) ಜಾರಿ ಮಾಡಲಾಗುವುದು. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಎಐ ಆಧಾರಿತ ಹಾಜರಾತಿ ಜಾರಿಯಲ್ಲಿದೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಈ ವರ್ಷವೇ ಕೆಲವು ಬದಲಾವಣೆ ಮಾಡುತ್ತೇವೆ. ಒಂದೂವರೆ ಎರಡು ತಿಂಗಳಲ್ಲಿ ಎಲ್ಲ ಗೊತ್ತಾಗಲಿದೆ. ಸರಕಾರಿ ಶಾಲೆಯಲ್ಲೇ 25 ಸಾವಿರ ಮಕ್ಕಳಿಗೆ ಸಿಇಟಿ ಮತ್ತು ನೀಟ್ ತರಬೇತಿ ಕೊಡುತ್ತಿದ್ದೇವೆ. ಆಸಕ್ತ ಎಲ್ಲ ವಿದ್ಯಾರ್ಥಿಗಳಿಗೂ ಸಿಇಟಿ ಮತ್ತು ನೀಟಿ ತರಬೇತಿ ಕೊಡಿ ಅಂತ ಹೇಳಿದ್ದೇನೆ ಎಂದು ಹೇಳಿದರು.
16,500 ಶಿಕ್ಷಕರ ನೇಮಕ
ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ನಂತರ 16, 500 ಶಿಕ್ಷಕರ ನೇಮಕ ಮಾಡುತ್ತೇವೆ. ಆದರ್ಶ ಶಾಲೆಗಳಲ್ಲಿ ಈ ವರ್ಷದಿಂದಲೇ ಪಿಯುಸಿ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ. ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದರು.
ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ಪಠ್ಯದಲ್ಲಿ ನೈತಿಕ ವಿಜ್ಞಾನ ಅಳವಡಿಕೆಗೆ ಚಿಂತನೆ
ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪ್ರಕರಣ ಹೆಚ್ಚಾದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಎರಡೂವರೆ ತಿಂಗಳ ಹಿಂದೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಜತೆ ಚರ್ಚಿಸಿದ್ದೇನೆ. ಪಠ್ಯದಲ್ಲಿ ನೈತಿಕ ವಿಜ್ಞಾನ ಅಳವಡಿಸುವ ಬಗ್ಗೆ ಚರ್ಚಿಸಿದ್ದೇವೆ. ಮೊದಲು ನೈತಿಕ ವಿಜ್ಞಾನ ಅಂತ ವಿಷಯ ಇತ್ತು. 10-15 ವರ್ಷದಿಂದ ನೈತಿಕ ವಿಜ್ಞಾನ ಇಲ್ಲ. ಮಕ್ಕಳಲ್ಲೂ ನೈತಿಕ ಇಲ್ಲ ಅದು ಕಳೆದು ಹೋಗಿದೆ. ಈ ವರ್ಷದಿಂದ ಮತ್ತೆ ಅದನ್ನ ಜಾರಿಗೊಳಿಸಲು ತೀರ್ಮಾನ ಮಾಡಲಾಗಿದೆ. ಪಠ್ಯಪುಸ್ತಕ ಕೂಡ ತಯಾರಾಗುತ್ತಿದೆ ಎಂದು ಹೇಳಿದರು.