ಚಾರಣಕ್ಕೆಂದು ಹೋಗಿ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ ಮೆಡಿಕಲ್ ವಿದ್ಯಾರ್ಥಿಗಳು: ಮುಂದೇನಾಯ್ತು?
ಚಿತ್ರದುರ್ಗದ ಮೆಡಿಕಲ್ ಕಾಲೇಜಿನ ಹತ್ತು ಜನ ಸ್ನೇಹಿತರು ಒಟ್ಟಾಗಿ ಚಾರಣಕ್ಕೆ ಬಂದಿದ್ದರು. ಪ್ರಕೃತಿಯ ಸೌಂದರ್ಯವನ್ನು ಸವಿಬೇಕು ಅಂತ ಚಾರಣಕ್ಕೆ ಬಂದವರು ದಟ್ಟಾರಣ್ಯದ ನಡುವೆ ದಾರಿ ತಪ್ಪಿದರು. ದಾರಿ ತಪ್ಪಿದವರಿಗೆ ಎಲ್ಲಿ ಹೋಗಬೇಕು? ಏನು ಮಾಡಬೇಕು? ಎಂಬ ದಿಕ್ಕು ತೋಚದೆ ದಿನವಿಡೀ ಕಾಡಿನಲ್ಲೇ ಸುತ್ತಿದರು. ಎಷ್ಟು ಸುತ್ತಿದರೂ ಸರಿಯಾದ ದಾರಿ ಕಾಣದೆ ಕಡೆಗೆ ರಕ್ಷಣೆಗಾಗಿ ಪೊಲೀಸರ ಮೊರೆ ಹೋದರು. ಮುಂದೇನಾಯ್ತು? ಇಲ್ಲಿದೆ ವಿವರ.

ಚಿಕ್ಕಮಗಳೂರು, ಜೂನ್ 10: ಚಿತ್ರದುರ್ಗದ (Chitradurga) ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ (MBBS) ದ್ವಿತೀಯ ವರ್ಷದಲ್ಲಿ ಓದುತ್ತಿರುವ ಐವರು ಹುಡುಗರು ಮತ್ತು ಐವರು ಹುಡುಗಿಯರು ಜೊತೆಯಾಗಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ (Trekking) ಬಂದಿದ್ದರು. ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಆರಂಭಿಸಿದರು.
ದಾರಿ ತಿಳಿಯದೆ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿ ಕೊನೆಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಬಾಳೂರು ಠಾಣೆಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳಿಯರು, ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಂದಿದ್ದಾರೆ.
ಬಲ್ಲಾಳರಾಯನ ದುರ್ಗದ ಕಾಡಲ್ಲಿ ತಪ್ಪಿಸಿಕೊಂಡಿದ್ದ 10 ಜನ ಚಾರಣಿಗರಿಗಾಗಿ ಕಡುಗತ್ತಲಲ್ಲಿ ಟಾರ್ಚ್ ಬೆಳಕಲ್ಲಿ ಬಾಳೂರು ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ಹಾಗೂ ಅವರ ಸಿಬ್ಬಂದಿ, ಸ್ನೇಕ್ ಆರೀಫ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡ ಸುದೀರ್ಘ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಕೊನೆ ತಡರಾತ್ರಿ ಎರಡು ಗಂಟೆಗೆ ಸಮಯದಲ್ಲಿ ವಿದ್ಯಾರ್ಥಿಗಳು ಪತ್ತೆಯಾಗಿದ್ದು, ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಂದಿದ್ದಾರೆ.
ಇನ್ನು, ಮಳೆಗಾಲ ಆರಂಭವಾಗಿರುವುದರಿಂದ ಚಾರಣ, ಜಲಪಾತಗಳ ವೀಕ್ಷಣೆ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ಹೋಗದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಚಾರಣಕ್ಕೆ ಅವಕಾಶ ಕೊಡದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದರೂ ಕೂಡ ಪ್ರವಾಸೋದ್ಯಮ ಇಲಾಖೆ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದು, ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಚಾರಣಕ್ಕೆ ಬರುವವರು ಇಲಾಖೆ ಸೂಚಿಸಿದ ಮಾರ್ಗದಲ್ಲಿಯೇ ಹೋಗಬೇಕು. ಸೂಚನೆಗಳನ್ನು ಪಾಲಿಸಬೇಕು, ಅದರ ಜೊತೆಗೆ ಮಾರ್ಗದರ್ಶಿಗಳನ್ನು ಕರೆದುಕೊಂಡು ಹೋಗಬೇಕು. ಒಂದು ವೇಳೆ ನಿಯಮ ಮೀರಿ ಟ್ರಕ್ಕಿಂಗ್ ಹೋದರೇ ಫಾರೆಸ್ಟ್ ಆ್ಯಕ್ಟ್ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕೂಡ ಪೊಲೀಸ್ ಇಲಾಖೆ ನೀಡಿದೆ.
ಇದನ್ನೂ ಓದಿ: ಚಾರ್ಮಾಡಿ ಬೆಟ್ಟದ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಒಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಸಾಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯೋದಕ್ಕೆಂದು ಬಂದ ಚಾರಣಿಗರು ಕಾಡಿನ ನಡುವೆ ದಾರಿತಪ್ಪಿ, ಪೊಲೀಸರ ಸಹಾಯದಿಂದ ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಪೊಲೀಸ್ ಇಲಾಖೆಯ ಸೂಚನೆ ಬಳಿಕವೂ ಈ ರೀತಿ ಬೇಕಾಬಿಟ್ಟಿ ಅವಕಾಶ ಕೊಡುತ್ತಿರುವುದು ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಳೆಗಾಲ ಮುಗಿಯೋವರೆಗೂ ಚಾರಣಕ್ಕೆ ಅವಕಾಶ ಬೇಡ ಅನ್ನೋ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Tue, 10 June 25