ಕರ್ನಾಟಕದ ಬಹುತೇಕ ವಿವಿಗಳಲ್ಲಿ ಪ್ರಾಧ್ಯಾಪಕರ ಕೊರತೆ: ಸ್ನಾತಕೋತ್ತರ ವಿಧ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿತದ ಆತಂಕ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಬದುಕಿಗೆ ದಾರಿಯಾಗಬೇಕಿದ್ದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದು, ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಿದ್ಯಾರ್ಥಿಗಳಿಂದಲೂ ಆಕ್ರೋಶದ ಮಾತುಗಳು ವ್ಯಕ್ತವಾಗಿವೆ. ಬೋಧಕ ಸಿಬ್ಬಂದಿ ಕೊರೆತೆಯಿಂದ ಸ್ನಾತಕೋತ್ತರ ವಿಧ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿತದ ಆತಂಕ ಎದುರಾಗಿದೆ.

ಬೆಂಗಳೂರು, ಜೂನ್ 13: ಉನ್ನತ ಶಿಕ್ಷಣ ಪಡೆಯಲು ಗ್ರಾಮೀಣ ಭಾಗದ ಬಡ ಪ್ರತಿಭಾನ್ವಿತ ವಿಧ್ಯಾರ್ಥಿಗಳು ಅವಲಂಬಿಸುವುದು ಸರ್ಕಾರಿ ವಿಶ್ವ ವಿದ್ಯಾಲಯಗಳನ್ನು. ಆದರೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ (Karnataka Universities) ನುರಿತ ಖಾಯಂ ಪ್ರಾಧ್ಯಾಪಕರೇ ಇಲ್ಲದಂತಾಗಿದ್ದು, ವಿದ್ಯಾರ್ಥಿಗಳ ಕಲಿಕೆಯಲ್ಲಿ ಕುಂಠಿತವಾಗುವುದು ಅಷ್ಟೇ ಅಲ್ಲದೇ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಈಗಾಗಲೇ ವರದಿಯಾಗಿದೆ. ಈಗ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಪಕರ ಕೊರತೆ ಎದುರಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ, ನೃಪತುಂಗ ವಿವಿ, ಕೇಂದ್ರ ವಿವಿ ಹಾಗೂ ಮಹರಾಣಿ ಕ್ಲಸ್ಟರ್ ವಿವಿ ಸೇರಿದಂತೆ ರಾಜ್ಯದ ಹಲವು ವಿವಿಗಳಲ್ಲಿ ಪಾಠ ಹೇಳಿಕೊಡಲು ಪ್ರಾಧ್ಯಾಪಕರು ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಅತಿಥಿ ಶಿಕ್ಷಕರಿಂದ ಪಾಠ ಕೇಳುವ ಭಾಗ್ಯ ದೊರೆಯುತ್ತಿದೆ. ರಾಜ್ಯದಲ್ಲಿ ಸರಿಸುಮಾರು 3000 ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಪದವಿ ಕೋರ್ಸ್ ಮುಗಿಸಿ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಸ್ನಾತಕೋತ್ತರ ಪದವಿಗೆ ಅಡ್ಮಿಷನ್ ಪಡೆಯುವ ವಿಧ್ಯಾರ್ಥಿಗಳು ಸಾಕಷ್ಟು ಕನಸುಗಳನ್ನು ಹೊತ್ತು ಬಂದಿರುತ್ತಾರೆ. ಜ್ಞಾನ ದೇಗುಲ ಎಂದೇ ಕರೆಸಿಕೊಳ್ಳುವ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಮಟ್ಟದ ಜ್ಞಾನ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟು ಕೊಂಡಿರುತ್ತಾರೆ. ಆದರೆ ವಿಧ್ಯಾರ್ಥಿಗಳ ನಿರೀಕ್ಷೆಗೆ ತಕ್ಕಂತೆ ಬೋಧನಾ ಸಿಬ್ಬಂದಿಯನ್ನು ಪೂರೈಸದ ಸರ್ಕಾರದ ನಡೆ ಬೇಸರ ಉಂಟು ಮಾಡುತ್ತಿದೆ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.
ವಿಧ್ಯಾರ್ಥಿಗಳ ಬೇಡಿಕೆಗೆ ತಕ್ಕಂತ ನುರಿತ ಕಾಯಂ ಪ್ರಾಧ್ಯಾಪಕರು ವಿಶ್ವ ವಿದ್ಯಾಲಯಗಳಲ್ಲಿ ಇಲ್ಲದಂತಾಗಿದ್ದು, ಪ್ರತಿ ಬಾರಿಯೂ ಅತಿಥಿ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಬೋಧನೆಯಿಂದಲೇ ಸ್ನಾತಕೋತ್ತರ ವಿಧ್ಯಾರ್ಥಿಗಳು ತೃಪ್ತಿ ಪಡುವಂತಾಗಿದೆ. ನುರಿತ ಕಾಯಂ ಉಪನ್ಯಾಸಕರು ಹಾಗೂ ತಾತ್ಕಾಲಿಕ ಉಪನ್ಯಾಸಕರ ಬೋಧನೆ ನಡುವೆ ಸಾಕಷ್ಟು ವ್ಯತ್ಯಾಸ ಇದ್ದು, ವಿಧ್ಯಾರ್ಥಿಗಳ ಕಲಿಕೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಆದಷ್ಟು ಬೇಗ ಕಾಯಂ ಪ್ರಾಧ್ಯಾಪಕರನ್ನು ನೇಮಕ ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಕುಲಪತಿಗಳು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಕಾನೂನು ಅಧ್ಯಯನ ಮಾಡುವ ಕನಸು ನಿಮಗಿದ್ಯಾ? ಉಪಯುಕ್ತ ಮಾಹಿತಿ ಇಲ್ಲಿದೆ
ಒಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಮಾತ್ರ ಅಲ್ಲದೆ ವಿಶ್ವ ವಿದ್ಯಾಲಯಗಳಲ್ಲಿ ಸಹ ಸೂಕ್ತ ಮತ್ತು ಅಗತ್ಯ ಪ್ರಮಾಣದ ಬೋಧನಾ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಬೇಕಾದ ಪದವಿ ವಿಧ್ಯಾರ್ಥಿಗಳಿಗೆ ಹಿನ್ನಡೆ ಆಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದ ಪ್ರಾಧ್ಯಾಪಕರನ್ನು ನೇಮಕ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕಾಗಿದೆ.







