AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಪರಮೇಶ್ವರ್ ಚಾಲನೆ: ಏನಿದು ಯೋಜನೆ? ಇಲ್ಲಿದೆ ವಿವರ

ಕರ್ನಾಟಕದ ಗೃಹ ಸಚಿವರು ಬೆಂಗಳೂರಿನಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಚಾಲನೆ ನೀಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಜಾರಿಗೆ ಬಂದಿದೆ ಎಂದ ಅವರು, ಪೊಲೀಸರು ಪ್ರತಿ ಮನೆಗೂ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಯೋಜನೆ ಕುರಿತಾದ ವಿವರ ಇಲ್ಲಿದೆ.

‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಪರಮೇಶ್ವರ್ ಚಾಲನೆ: ಏನಿದು ಯೋಜನೆ? ಇಲ್ಲಿದೆ ವಿವರ
ಗೃಹ ಸಚಿವ ಡಾ ಜಿ ಪರಮೇಶ್ವರ
Ganapathi Sharma
|

Updated on: Jul 18, 2025 | 1:02 PM

Share

ಬೆಂಗಳೂರು, ಜುಲೈ 18: ಕರ್ನಾಟಕದ ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಬೆಂಗಳೂರಿನಲ್ಲಿ (Bengaluru) ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಇಡೀ ದೇಶದಲ್ಲಿ ಇದೇ ಮೊದಲು. ಈ ವಿನ್ಯಾಸದ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ (Karnataka Police) ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಸಹಾಯವಾಗಲಿದೆ ಎಂದರು.

ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಪೊಲೀಸರು ಜನಸ್ನೇಹಿ ಆಗಬೇಕು ಎಂದು ಈ ಕಾರ್ಯಕ್ರಮ ಶುರು ಮಾಡುತ್ತಿದ್ದೇವೆ. ನಾವೇ ಜನರ ಮನೆ ಬಾಗಿಲಿಗೆ ಕಷ್ಟ ಕೇಳೋಣ ಅಂತ ತೀರ್ಮಾನ ಮಾಡಿದ್ದೇವೆ. ಪ್ರತಿ ಠಾಣೆಯ ಲಿಮಿಟ್ಸ್ ನಲ್ಲಿ ಈ ಕೆಲಸ ಆಗಬೇಕು. ಬೀಟ್ ಪೊಲೀಸರು ಈ ಕೆಲಸವನ್ನು ಮಾಡಬೇಕು. ಯಾರ ಮನೆಯಲ್ಲಿ ಯಾರಿದ್ದಾರೆ, ಹೊಸದಾಗಿ ಬಂದಿದ್ದಾರ, ಬಾಡಿಗೆಗೆ ಇದ್ದಾರೆಯೇ, ಅವರು ಏನ್ ಕೆಲಸ ಮಾಡ್ತಾರೆ ಎಂಬ ಮಾಹಿತಿ ಕಲೆಹಾಕಿದ್ರೆ ಇಡೀ ಬೆಂಗಳೂರು ಡೇಟಾ ಬ್ಯಾಂಕ್ ನಮ್ಮ ಬಳಿ ಇರುತ್ತದೆ. ಪೊಲೀಸರು ಬಂದಾಗ ಜನರು ಕಷ್ಟಸುಖ ಹೇಳಬಹುದು. ಏನಾದ್ರೂ ತೊಂದರೆ ಆಗ್ತಾ ಇದ್ದರೆ ಹೇಳಬಹುದು. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಬಹುದು. ಜನಸ್ನೇಹಿ ಪೊಲೀಸರ ಜೊತೆಗೆ ಶಾಂತಿ ಕಾಪಾಡಲು ಈ ಕಾರ್ಯಕ್ರಮ ಸಹಾಯ ಆಗುತ್ತದೆ. ನಿಮ್ಮ ಮನೆಗೆ ಬಂದಾಗ ನಿಮ್ಮ ಹೆಸರನ್ನು ನಮೂದಿಕೊಳ್ಳುತ್ತಾರೆ. ಬಳಿಕ ಅದನ್ನ ಡಿಜಿಟಲೈಸ್ ಮಾಡಿ ಇಟ್ಟುಕೊಳ್ಳುತ್ತಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ಇದನ್ನೂ ಓದಿ
Image
ಕಾಂಡಿಮೆಂಡ್ಸ್, ಅಂಗಡಿಗಳಿಗೆ ನೋಟಿಸ್: ತೆರಿಗೆ ಇಲಾಖೆ ಮತ್ತೊಂದು ಸ್ಪಷ್ಟನೆ
Image
ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ ನೀಡಲು ಸಂಪುಟ ನಿರ್ಧಾರ
Image
ಶುಶ್ರುತಿ ಸಹಕಾರ ಬ್ಯಾಂಕ್ ವಂಚನೆ: ಇಡಿ ತನಿಖೆ ವೇಳೆ ಆಘಾತಕಾರಿ ಅಂಶ ಬಯಲಿಗೆ
Image
ವಿಡಿಯೋ: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ

ಯಾಕಾಗಿ ಈ ಯೋಜನೆ? ಪೊಲೀಸರು ಹೇಳಿದ್ದೇನು?

ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಗಳನ್ನು ಪತ್ತೆ ಹಚ್ಚುವ ಉದ್ದೇಶದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮನೆ ಮನೆಗೆ ಪೊಲೀಸ್’ ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ! ಎಂದು ಬೆಂಗಳೂರು ಆಗ್ನೇಯ ಡಿಸಿಪಿ ಎಕ್ಸ್​ ಸಂದೇಶದಲ್ಲಿ ತಿಳಿಸಿದ್ದಾರೆ.

ಡಿಸಿಪಿ ಎಕ್ಸ್​ ಸಂದೇಶ

‘ನಿಮ್ಮ ಪೊಲೀಸ್ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಗುರುತರವಾದ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ. ಪೊಲೀಸ್ ಸೇವೆಗಳ ಪ್ರತಿಯೊಂದು ಸ್ತರದಲ್ಲೂ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ ಆ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣಾ ಸರಹದ್ದುಗಳನ್ನು ಸಬ್ -ಬೀಟ್​ಗಳಿಗೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಮಕ್ಕಳನ್ನ ಹೊರ ಕಳುಹಿಸಿ ತಪಾಸಣೆ

ಕರ್ನಾಟಕ ರಾಜ್ಯ ಸರ್ಕಾರದ ಗೃಹ ಇಲಾಖೆಯು ‘ಮನೆ ಮನೆಗೆ ಪೊಲೀಸ್’ ಎಂಬ ಕಾರ್ಯಕ್ರಮವನ್ನು ರೂಪಿಸುವುದರ ಮೂಲಕ ಸಕ್ರಿಯ ಸೇವೆಗೆ ನಾಂದಿ ಹಾಡಿದೆ. ಇನ್ನು ಮುಂದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಿದ್ದಾರೆ. ಬನ್ನಿ ಅಂಜಿಕೆ ಇಲ್ಲದೆ ಮುಕ್ತ ಮನಸ್ಸಿನೊಂದಿಗೆ ನಿಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ಅವರು ಕರೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ