ಬೆಂಗಳೂರು: ಪಾಸ್ಪೋರ್ಟ್ ಕಚೇರಿ, ಸಿಎಂ ಮನೆಗೆ ಬಾಂಬ್ ಬೆದರಿಕೆ ಸಂದೇಶ
ಬೆಂಗಳೂರಿನ ಕೋರಮಂಗಲದಲ್ಲಿರುವ ಪಾಸ್ಪೋರ್ಟ್ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವಂತಹ ಘಟನೆ ನಡೆದಿದೆ. ಆತ್ಮಹತ್ಯಾ ದಾಳಿ ಎಂದು ಬೆದರಿಕೆ ಒಳಗೊಂಡ ಇ-ಮೇಲ್ ಪತ್ತೆಯಾದ ಬಳಿಕ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.

ಬೆಂಗಳೂರು, ಜೂನ್ 06: ನಗರದ ಕೋರಮಂಗಲದ ಪಾಸ್ಪೋರ್ಟ್ ಕಚೇರಿ ಮತ್ತು ಸಿಎಂ (CM) ಮನೆಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಸಂದೇಶ ಬಂದಿರುವಂತಹ ಘಟನೆ ನಡೆದಿದೆ. ಆತ್ಮಾಹುತಿ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ತನಿಖೆ ಮುಂದುವರೆದಿದೆ.
ಬಾಂಬ್ ಬೆದರಿಕೆ ಸಂದೇಶದಲ್ಲೇನಿದೆ?
ಇಂದು ಇಸ್ಲಾಂನ ದುಲ್ ಹಜ್ ಪವಿತ್ರ ದಿನ. ಅಮೋನಿಯಮ್ ಸಲ್ಫರ್ ಬೇಸ್ಡ್ ಐಇಡಿ ಬಳಸಿ ಬೆಂಗಳೂರಿನ ಪಾಸ್ಪೋರ್ಟ್ ಕಛೇರಿ ಮತ್ತು ಸಿಎಂ ಮನೆಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುತ್ತೇವೆ. ಸವುಕ್ಕು ಶಂಕರ್ ಮತ್ತು ಕಸಬ್ (ತಾಜ್ ಅಟ್ಯಾಕ್)ನನ್ನು ಗಲ್ಲಿಗೇರಿಸಿದ್ದಕ್ಕೆ ಇದು ಪ್ರತಿಕಾರ ಎಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಇದನ್ನೂ ಓದಿ: ಸರ್ಕಾರ ಸ್ಥಿಮಿತ ಕಳೆದುಕೊಂಡಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಮಾಜಿ ಐಪಿಎಸ್ ಭಾಸ್ಕರ ರಾವ್ ಟೀಕೆ
ಇನ್ನೂ ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಆಚಾರ್ಯ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಅಪರಿಚಿತ ವ್ಯಕ್ತಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ. ಆಚಾರ್ಯ ಕಾಲೇಜಿನ ಅಧಿಕೃತ ಇ-ಮೇಲ್ ಪರಿಶೀಲನೆ ವೇಳೆ ಈ ಬೆದರಿಕೆ ಸಂದೇಶ ಗಮನಕ್ಕೆ ಬಂದಿತ್ತು. ಜೊತೆಗೆ ಕಾಲೇಜು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುವುದಾಗಿ ಬೆದರಿಕೆ ಹಾಕಲಾಗಿತ್ತು. ಬಳಿಕ ಕಾಲೇಜಿನ ಆಡಳಿತ ಮಂಡಳಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿತ್ತು.
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
ಅದೇ ರೀತಿಯಾಗಿ ಇತ್ತೀಚೆಗೆ ರಾಯಚೂರಿನಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಬೆಳಿಗ್ಗೆ 6.50 ರ ಸುಮಾರಿಗೆ ರಾಯಚೂರು ಜಿಲ್ಲಾಧಿಕಾರಿಗಳ ಅಧಿಕೃತ ಖಾತೆಗೆ ಮೇಲ್ ಬಂದಿದ್ದು, ಬಾಂಬ್ ಬೆದರಿಕೆ ಒಡ್ಡಲಾಗಿತ್ತು.
ಇದನ್ನೂ ಓದಿ: Bengaluru Stampede: ಸ್ಟೇಡಿಯಂ ಗೇಟ್ಗಳ ಬಳಿಯೇ ಯಮರಾಜ ಸುಳಿದಾಡುತ್ತಿದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ
ನಂತರ ಸಾರ್ವಜನಿಕರು ಭಯ ಬೀಳ್ಳುತ್ತಾರೆ ಎಂಬ ನಿಟ್ಟಿನಲ್ಲಿ ಈ ವಿಚಾರ ಗೌಪ್ಯವಾಗಿ ಇಡಲಾಗಿತ್ತು. ಬಳಿಕ ರಾಯಚೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಬಾಂಬ್ ನಿಗ್ರಹ ದಳ, ಶ್ವಾನ ದಳ ಸೇರಿದಂತೆ ಸಿಬ್ಬಂದಿಗಳು ಇಡೀ ಜಿಲ್ಲಾಧಿಕಾರಿಗಳ ಕಚೇರಿ ಪರಿಶೀಲನೆ ಮಾಡಿದ್ದರು. ಘಟನೆ ಹಿನ್ನೆಲೆ ಡಿಸಿ ಕಚೇರಿ ಹಾಗೂ ಸುತ್ತ ಹೈ ಅಲರ್ಟ್ ಸೂಚಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







