AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ನಿರ್ಮಾಣದ ಹಿಂದಿದೆ ಬೆಂಗಳೂರು ಐಐಎಸ್​ಸಿ ಪ್ರೊಫೆಸರ್ 17 ವರ್ಷದ ಶ್ರಮ!

ಜಗತ್ತಿನ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣದಲ್ಲಿ ಬೆಂಗಳೂರಿನ ಐಐಎಸ್ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್, ರಾಕ್ ಎಂಜಿನಿಯರಿಂಗ್ ತಜ್ಞೆ ಜಿ. ಮಾಧವಿ ಲತಾ ಕೂಡ ಮಹತ್ವದ ಪಾತ್ರ ವಹಿಸಿದ್ದಾರೆ. ಸುಮಾರು 17 ವರ್ಷಗಳಿಂದ ಕಾಮಗಾರಿಗೆ ಸಲಹೆ ಸೂಚನೆ ನೀಡುವಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.

ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ನಿರ್ಮಾಣದ ಹಿಂದಿದೆ ಬೆಂಗಳೂರು ಐಐಎಸ್​ಸಿ ಪ್ರೊಫೆಸರ್ 17 ವರ್ಷದ ಶ್ರಮ!
ಚೆನಾಬ್ ಸೇತುವೆ
TV9 Web
| Updated By: Ganapathi Sharma|

Updated on:Jun 06, 2025 | 12:58 PM

Share

ಬೆಂಗಳೂರು, ಜೂನ್ 6: ಜಗತ್ತಿನ ಅತಿ ಎತ್ತರದ ಚೆನಾಬ್ ರೈಲ್ವೆ ಬ್ರಿಡ್ಜ್​ (Chenab Bridge) ಲೋಕಾರ್ಪಣೆಗೊಳ್ಳುತ್ತಿದೆ. ಹಲವಾರು ವರ್ಷಗಳ ಕಾಲ ನಡೆದ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ವಿಶ್ವದ ಅತಿ ಎತ್ತರದ ಈ ಸೇತುವೆ ರೈಲು ಸಂಚಾರಕ್ಕೆ ಮುಕ್ತವಾಗುತ್ತಿದೆ. ಜಗತ್ತಿನ ಎಂಜಿನಿಯರಿಂಗ್ ಅದ್ಭುತ ಎಂದು ಪರಿಗಣಿಸಲಾಗಿರುವ ಈ ಸೇತುವೆ ನಿರ್ಮಾಣದಲ್ಲಿ ಬೆಂಗಳೂರಿನ ಐಐಎಸ್​​ಸಿ (Bengaluru IISc) ಪ್ರೊಫೆಸರ್ ಪಾತ್ರವೂ ಇದೆ ಎಂದರೆ ನೀವು ನಂಬಲೇಬೇಕು! ಐಐಎಸ್ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ರಾಕ್ ಎಂಜಿನಿಯರಿಂಗ್‌ ತಜ್ಞೆ ಜಿ. ಮಾಧವಿ ಲತಾ ಸುಮಾರು 17 ವರ್ಷಗಳ ಕಾಲ ಚೆನಾಬ್ ಸೇತುವೆಯ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಚೆನಾಬ್ ಸೇತುವೆಯ ಗುತ್ತಿಗೆಪಡೆದ ಆಫ್ಕಾನ್ಸ್ ಸಂಸ್ಥೆಯ ಮನವಿಯ ಮೇರೆಗೆ ಮಾಧವಿ ಲತಾ ನಿರ್ಮಾಣ ಕಾಮಗಾರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇಳಿಜಾರು ಸ್ಥಿರೀಕರಣ ಮತ್ತು ಸೇತುವೆಯ ಅಡಿಪಾಯದ ಕುರಿತು ಮಾಧವಿ ಲತಾ ಮಾರ್ಗದರ್ಶನ ಮಾಡಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. 1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಕಠಿಣ ನೈಸರ್ಗಿಕ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

ನದಿಪಾತ್ರದಿಂದ 359 ಮೀಟರ್ ಎತ್ತರದಲ್ಲಿ, ಕತ್ರಾ ಮತ್ತು ಖಾಜಿಗುಂಡ್ ನಡುವಿನ ಎರಡು ಬೆಟ್ಟಗಳನ್ನು ಸಂಪರ್ಕಿಸುವ ಚೆನಾಬ್ ರೈಲು ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದ್ದು, ಐಫೆಲ್ ಟವರ್​​​ಗಿಂತಲೂ ಎತ್ತರವಿದೆ.

ಇದನ್ನೂ ಓದಿ
Image
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
Image
ಸರ್ಕಾರ ಸ್ಥಿಮಿತ ತಪ್ಪಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಭಾಸ್ಕರ ರಾವ್
Image
ಪಹಲ್ಗಾಮ್ ದಾಳಿ ಬಳಿಕ ಕಾಶ್ಮೀರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ
Image
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ

ಇಳಿಜಾರು ಸ್ಥಿರೀಕರಣ ಮತ್ತು ಅಡಿಪಾಯಕ್ಕೆ ಐಐಎಸ್ಸಿ ಸಂಸ್ಥೆ ಸಲಹೆ ನೀಡಿತ್ತು. ಆದರೆ ಉಕ್ಕಿನ ಕಮಾನು ತಯಾರಿಕೆಯಲ್ಲಿ ವಿದೇಶಿ ಸಂಸ್ಥೆಗಳು ಕೈಜೋಡಿಸಿದ್ದವು. ಸೇತುವೆಯ ಯೋಜನೆ 2005 ರಲ್ಲಿ ಪ್ರಾರಂಭವಾಗಿತ್ತು. 2022 ರಲ್ಲಿ ಪೂರ್ಣ ವೇಗದ ರೈಲುಗಳ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿ ನೆರವೇರುವುದರೊಂದಿಗೆ ಕಾಮಗಾರಿ ಪೂರ್ಣಗೊಂಡಿತು ಎಂದು ಮಾಧವಿ ಲತಾ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

Professor G Madhavi Latha In Chenab Bridge

ಚೆನಾಬ್ ಸೇತುವೆ ಬಳಿ ಜಿ. ಮಾಧವಿ ಲತಾ (ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್)

1,315 ಮೀಟರ್ ಉದ್ದದ ಈ ಬ್ರಿಡ್ಜ್ ಉಧಮ್​​ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಪ್ರಮುಖ ಭಾಗವಾಗಿದೆ. ಅಷ್ಟೇ ಅಲ್ಲದೆ, ಭಾರತೀಯ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಸೇತುವೆಯ ಅಡಿಭಾಗದಲ್ಲಿ ಬರುವ ಬಂಡೆಗಳ ನಡುವೆ ಹೆಚ್ಚಿನ ಅಂತರವಿದ್ದು, ಇಳಿಜಾರುಗಳು ತುಂಬಾ ಕಡಿದಾಗಿರುವುದರಿಂದ ಸ್ಥಿರತೆಯ ಬಗ್ಗೆ ಕಳವಳಗಳಿದ್ದವು. ಹೀಗಾಗಿ ಇಳಿಜಾರುಗಳಲ್ಲಿ ಕಮಾನು ಆಧಾರಸ್ತಂಭಗಳು ಮತ್ತು ಕಂಬಗಳಿಗೆ ಅಡಿಪಾಯಗಳ ನಿರ್ಮಾಣವು ಪ್ರಾಥಮಿಕ ಸವಾಲುಗಳಲ್ಲಿ ಒಂದಾಗಿತ್ತು ಎಂದು ಅವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಗಂಟೆಗೆ 220 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳಲು ಸೇತುವೆಯ ಅಡಿಪಾಯವನ್ನು ದೊಡ್ಡದಾಗಿ ಮತ್ತು ಹೆಚ್ಚು ಆಳದಿಂದಲೇ ಮಾಡಲಾಗಿತ್ತು. ಅಲ್ಲದೆ ಈ ಸೇತುವೆ ಇರುವ ಪ್ರದೇಶ ಭೂಕಂಪನ ವಲಯದಲ್ಲಿ ಬರುತ್ತಿದ್ದು, ಎಂಜಿನಿಯರ್​​​ಗಳಿಗೆ ಹೆಚ್ಚಿನ ಸವಾಲು ಒಡ್ಡಿತ್ತು ಎಂದು ವರದಿ ತಿಳಿಸಿದೆ.

ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಾವು ವಿನ್ಯಾಸ ಮಾರ್ಪಾಡುಗಳನ್ನು ಮಾಡಿದ್ದೇವೆ. ಉದಾಹರಣೆಗೆ, ಮೂಲ ಯೋಜನೆಗಳಲ್ಲಿ ಅಡಿಪಾಯಗಳನ್ನು ಅವು ಇರಬೇಕಾದ ಸ್ಥಳದಿಂದ ಸ್ವಲ್ಪ ಬದಲಾಯಿಸಲಾಗಿದೆ. ಈ ರೀತಿಯ ಸಂದರ್ಭಗಳಲ್ಲಿ, ನಾವು ಕಠಿಣ ವಿನ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: Chenab Bridge: ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾದ ಚೆನಾಬ್ ಬ್ರಿಡ್ಜ್ ಕುರಿತ ಅಚ್ಚರಿಯ ಸಂಗತಿಗಳಿವು

ಆರಂಭಿಕ ವರ್ಷಗಳಲ್ಲಿ, ಲತಾ ಅವರಿಗೆ ಮತ್ತೊಬ್ಬ ಐಐಎಸ್ಸಿ ವಿಜ್ಞಾನಿ ಕೂಡ ಯೋಜನಾ ಸಲಹೆಗಾರರಾಗಿದ್ದರು. ಆದರೆ ಕೆಲವು ವರ್ಷಗಳ ನಂತರ ಅವರು ಯೋಜನೆಯಿಂದ ಹೊರಹೋದರು. ನಂತರ 2022 ರಲ್ಲಿ ಸೇತುವೆ ಸಿದ್ಧವಾಗುವವರೆಗೆ ಲತಾ ಅವರೇ ಕಾರ್ಯ ನಿರ್ವಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Fri, 6 June 25