ಬೆಂಗಳೂರು ಕಾಲ್ತುಳಿತ ಕೇಸ್ ಸಿಐಡಿಗೆ, ಬೆಂಗಳೂರು ಕಮಿಷನರ್, ಎಸಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ವಿಜಯೋತ್ಸವ ಆಚರಣೆ ವೇಲೆ ಕಾಲ್ತುಳಿತ ಸಂಭವಿಸಿದ್ದು, ಇದರಲ್ಲಿ ಬರೋಬ್ಬರಿ 11 ಜನ ಮೃತಪಟ್ಟಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕೇಸನನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಅಲ್ಲದೇ ಈ ಪ್ರಕರಣದಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.

ಬೆಂಗಳೂರು, (ಜೂನ್ 05): ನಿನ್ನೆ ಅಂದರೆ ಜೂನ್ 04ರಂದು ಬೆಂಗಳೂರಿನ ಎಂ,ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಜೂನ್ 05) ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುತ್ತಿರುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ , ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಘಟನೆಯಲ್ಲಿ ಮೂರು ಸಂಸ್ಥೆಗಳ ಬೇಜವಾಬ್ದಾರಿ ಕಂಡು ಬಂದಿದೆ. ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ , ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್.ಎ.ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಿದ್ದೇವೆ. ಮೃತಪಟ್ಟವರ ಕುಟುಂಬಗಳ ಜೊತೆಗೆ ನಮ್ಮ ಸರ್ಕಾರ ಇರಲಿದೆ. ಎಫ್ಐಆರ್ ಆಧಾರದ ಮೇಲೆ ಸಿಐಡಿ ತನಿಖೆ ನಡೆಸಲಿದೆ. 30 ದಿನದಲ್ಲಿ ನ್ಯಾಯಾಂಗ ತನಿಖೆ ಮುಗಿಸಲು ಸೂಚಿಸಲಾಗಿದೆ. ಗುಪ್ತಚರ ಇಲಾಖೆಯ ಲೋಪವೂ ಆಗಿದೆ ಎಂದು ಒಪ್ಪಿಕೊಂಡರು.
ಸುದ್ದಿಗೋಷ್ಠಿಯ ಮುಖ್ಯಾಂಶಗಳು
- ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಸಂತಾಪ ಕೋರಲಾಯಿತು. ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
- ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.
- ಆರ್ ಸಿ ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್ ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
- ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸಪೆಕ್ಞರ್ ಸೇರಿದಂತೆ ಆ ಭಾಗದ ಎಸಿಪಿ, ಸೆಂಟ್ರಲ್ ಡಿಸಿಪಿ , ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ನಗರದ ಪೊಲೀಸ್ ಕಮೀಷನರ್ ರನ್ನು ತಕ್ಷಣದಿಂದ ಅಮಾನತ್ತು ಗೊಳಿಸಲು ತೀರ್ಮಾನಿಸಲಾಗಿದೆ. ಈ ದುರಂತಕ್ಕೆ ಸಂಬಂಧಪಟ್ಟ ಚರ್ಚೆಯ ನಂತರ ತೆಗೆದುಕೊಂಡ ತೀರ್ಮಾನಗಳಾಗಿವೆ. ಉಪಮುಖ್ಯಮಂತ್ರಿಗಳು, ಗೃಹಸಚಿವರು, ಸಚಿವರಾದ ಎಚ್.ಕೆ.ಪಾಟೀಲ್, ಸುಧಾಕರ್ , ಮಹಾದೇವಪ್ಪ ಸೇರಿದಂತೆ ಸಿಬಿಐ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
- ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ.
- ನಾನು ಶಾಸಕರು, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನಮ್ಮನ್ನು ಘಾಸಿಗೊಳಿಸಿದೆ.
- ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ.
- ನಿನ್ನೆ ಆದೇಶ ನೀಡಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದೆ. ಈ ಮಹಾದುರಂತದ ಬಗ್ಗೆ ಕೆಲವು ಮಾಹಿತಿಗಳು ದೊರೆತ ನಂತರ, ಸಚಿವಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮೂರು ಸಂಸ್ಥೆಗಳು ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
Published On - 9:29 pm, Thu, 5 June 25