ಆರ್. ಅಶೋಕ್‌ ಆರೋಪಗಳಿಗೆ ಉತ್ತರ ಕೊಟ್ಟ ಬರಗೂರು ರಾಮಚಂದ್ರಪ್ಪ; ಪೋರ್ಚುಗೀಸ್ ವಿರುದ್ಧ ಹೋರಾಡಿದ್ದ ರಾಣಿ ಅಬ್ಬಕ್ಕರ ಪಾಠ ತೆಗೆದಿರುವುದು ಯಾಕೆ? ಎಂದು ಪ್ರಶ್ನೆ

| Updated By: ಆಯೇಷಾ ಬಾನು

Updated on: Jun 24, 2022 | 6:43 PM

ಸಚಿವರು ಪಠ್ಯ ಪುಸ್ತಕದ ಬಗ್ಗೆ ಅಸತ್ಯದ ಸಂಗತಿ ಹೇಳಿದ್ದಾರೆಂದು ಆರೋಪಿಸಿ ಬರಗೂರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಮೈಸೂರು ಒಡೆಯರ್ ವಿವರಗಳನ್ನು ಬಿಟ್ಟಿದ್ದೇವೆಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ ತರಗತಿ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ವರ್ಗಾಯಿಸಿದ್ದೆವು. 7 ನೇ ತರಗತಿ ಪಠ್ಯಕ್ಕೆ ವರ್ಗಾವಣೆ ಮಾಡಿದ್ದೆವು.

ಆರ್. ಅಶೋಕ್‌ ಆರೋಪಗಳಿಗೆ ಉತ್ತರ ಕೊಟ್ಟ ಬರಗೂರು ರಾಮಚಂದ್ರಪ್ಪ; ಪೋರ್ಚುಗೀಸ್ ವಿರುದ್ಧ ಹೋರಾಡಿದ್ದ ರಾಣಿ ಅಬ್ಬಕ್ಕರ ಪಾಠ ತೆಗೆದಿರುವುದು ಯಾಕೆ? ಎಂದು ಪ್ರಶ್ನೆ
ಬರಗೂರು ರಾಮಚಂದ್ರಪ್ಪ
Follow us on

ಬೆಂಗಳೂರು: ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ವಿಚಾರಕ್ಕೆ(Textbook Revision Controversy) ಸಂಬಂಧಿಸಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೋಪವಾಗಿದೆ ಎಂದು ವಿರೋಧ ಪಕ್ಷದ ನಾಯಕರು, ವಿದ್ಯಾರ್ಥಿ ಸಂಘಟನೆಗಳು, ಕೆಲವು ಸಾಹಿತಿಗಳು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಈಗ ಪಠ್ಯ ಪರಿಷ್ಕರಣೆ ಸಮರ್ಥಿಸಿಕೊಂಡು ಸಚಿವ ಆರ್ ಅಶೋಕ್ ಸುದ್ದಿಗೋಷ್ಟಿ ನಡೆಸಿದ್ದು ಆರ್. ಅಶೋಕ್‌(R Ashok) ಆರೋಪಗಳಿಗೆ ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ(Baraguru Ramachandrappa) ಉತ್ತರ ಕೊಟ್ಟಿದ್ದಾರೆ.

ಸಚಿವರು ಪಠ್ಯ ಪುಸ್ತಕದ ಬಗ್ಗೆ ಅಸತ್ಯದ ಸಂಗತಿ ಹೇಳಿದ್ದಾರೆಂದು ಆರೋಪಿಸಿ ಬರಗೂರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಮೈಸೂರು ಒಡೆಯರ್ ವಿವರಗಳನ್ನು ಬಿಟ್ಟಿದ್ದೇವೆಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ ತರಗತಿ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ವರ್ಗಾಯಿಸಿದ್ದೆವು. 7 ನೇ ತರಗತಿ ಪಠ್ಯಕ್ಕೆ ವರ್ಗಾವಣೆ ಮಾಡಿದ್ದೆವು. ಆದರೆ ಈಗಿನ ಸಮಿತಿ 7ನೇ ತರಗತಿಯಿಂದ ತೆಗೆದು 10 ನೇ ತರಗತಿಗೆ ಮುಕ್ಕಾಲು ಪುಟದ ವಿವರ ಕೊಟ್ಟು ಅನ್ಯಾಯ ಮಾಡಿದೆ. ನಾಡಪ್ರಭು ಕೆಂಪೇಗೌಡರ ಪಾಠ ಪರಿಷ್ಕರಣೆ ಮಾಡಿಲ್ಲ ಎಂಬುದು ಸಚಿವರ ಆರೋಪ. 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕೆಂಪೇಗೌಡರ 2 ಪುಟ ವಿವರ ಕೊಟ್ಟಿದ್ದೇವೆ. ಆದರೆ ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಾರೆ. ಕೆಂಪೇಗೌಡರ ಮಹತ್ವವನ್ನು ಇವರೇ ಕುಗ್ಗಿಸಿದ್ದಾರೆ. ಚೆನ್ನಭೈರಾದೇವಿ ಪಾಠ ಸೇರ್ಪಡೆಗೆ ನಮ್ಮ ಸ್ವಾಗತ. ಆದರೆ ಪೋರ್ಚುಗೀಸ್ ವಿರುದ್ಧ ಹೋರಾಡಿದ್ದ ರಾಣಿ ಅಬ್ಬಕ್ಕರ ಪಾಠ ತೆಗೆದಿರುವುದು ಯಾಕೆ? 7ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಇಡೀ ಅಧ್ಯಯ ಕೈ ಬಿಡಲಾಗಿದೆ. ಯಶೋಧರಮ್ಮ ದಾಸಪ್ಪ, ಬಳ್ಳಾರಿ ಸಿದ್ಧಮ್ಮ, ಉಮಾ ಬಾಯಿ ಕುಂದಾಪುರ, ಕಮಲಾದೇವಿ ಚಟ್ಟೋಪಾಧ್ಯಾಯ ಇವರ ಎಲ್ಲಾ ವಿವರಗಳನ್ನು ತೆಗೆದಿದ್ದಾರೆ. ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದ ವೇಳೆ ಕಪ್ಪುಡುಗೆ ತೊಟ್ಟು ಮಿಂಚಿದ ಜಾಕ್ವೆಲಿನ್ ಫರ್ನಾಂಡಿಸ್

7ನೇ ತರಗತಿ ಸಮಾಜ ವಿಜ್ಞಾನ ಭಾಗ-1 ರಲ್ಲಿ ಭಕ್ತಿಪಂಥ ಮತ್ತು ಸೂಫಿಪಂಥಗಳು ಎಂಬ ಅಧ್ಯಾಯಗಳಿದ್ದವು ಈ ಅಧ್ಯಾಯದಲ್ಲಿದ್ದ ಶಿಶುನಾಳ ಶರೀಫರು, ಪುರಂದರದಾಸರು, ಕನಕದಾಸರು ಇವರ ಎಲ್ಲಾ ವಿವರ ತೆಗೆದು ಹಾಕಿದ್ದಾರೆ. ಕೇವಲ ಉತ್ತರ ಭಾರತದವರನ್ನು ಮಾತ್ರ ಸೇರಿಸಿಕೊಂಡಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ. ಕನ್ನಡ ಭಾಷಾ ಪಠ್ಯಗಳಲ್ಲಿದ್ದ ದಲಿತ ಸಾಹಿತಿಗಳು, ಮಹಿಳಾ ಸಾಹಿತಿಗಳ ಬರಹ ಕೈ ಬಿಟ್ಟಿದ್ದಾರೆ. ಆ ಜಾಗದಲ್ಲಿ ಒಂದೇ ಸಮುದಾಯದ ಬರಹಗಳನ್ನು ಹಾಕಿದ್ದಾರೆ. ಅಪಚಾರಗಳನ್ನು ಮರೆಮಾಚಲು ಕುವೆಂಪು ಅವರ 10 ಪಾಠಗಳನ್ನು ಸೇರಿಸಿದ್ದೇವೆಂದು ಹೇಳುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರ ತೆಗೆದು ಹಾಕಿದ್ದಾರೆ. ನಮ್ಮ ಪಠ್ಯದಲ್ಲಿ ಇದ್ದ ಸಿದ್ಧಗಂಗ ಮತ್ತು ಆದಿಚುಂಚನಗಿರಿ ಮಠಗಳ ವಿವರಗಳನ್ನು ಒಂದೇ ಸಾಲಿಗೆ ಇಳಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಗೆ ಸಾಕಷ್ಟು ಕತ್ತರಿ ಹಾಕಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪ ಅವರು ಆರ್ ಅಶೋಕ್ರ ಆರೋಪಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

Published On - 6:43 pm, Fri, 24 June 22