ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಅವಾಚ್ಯ ಪದ ಬಳಕೆ; ಸಿಐಡಿ ತನಿಖೆ ಆದೇಶಕ್ಕೆ ಬಸವರಾಜ ಹೊರಟ್ಟಿ ಆಕ್ಷೇಪ
ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ಅವರಿಗೆ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ಬಿಜೆಪಿ ನಾಯಕ ಸಿ.ಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ವಿಚಾರವಾಗಿ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ಹೊರಹಾಕಿದ್ದಾರೆ. ಯಾವ ವಿಷಯಕ್ಕೆ ಸಿಐಡಿಗೆ ತನಿಖೆಗೆ ನೀಡಲಾಗಿದೆ ಎಂದು ನಮಗಿನ್ನು ಸ್ಪಷ್ಟ ಮಾಹಿತಿ ಇಲ್ಲ. ಸದನದಲ್ಲಿ ನಡೆದ ಘಟನೆಯನ್ನು ಚರ್ಚಿಸುವುದು, ಮುಕ್ತಾಯ ಮಾಡುವುದು, ತೀರ್ಮಾನಿಸುವುದರಲ್ಲಿ ಸದನಕ್ಕೆ ಸಾರ್ವಭೌಮತ್ವ ಅಧಿಕಾರ ಇರುತ್ತದೆ ಎಂದಿದ್ದಾರೆ.
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕಳೆದ ತಿಂಗಳು ಕೇಳಿಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಈ ಪ್ರಕರಣದ ತನಿಖೆ ಸಿಐಡಿಗೆ ವಹಿಸಿದ್ದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.
ಈ ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿಗೆ ವಹಿಸಲಾಗಿದೆ ಎಂದು ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸದನದಲ್ಲಿ ನಡೆದ ಘಟನೆಯ ಬಗ್ಗೆ ಚರ್ಚಿಸುವುದು, ಮುಕ್ತಾಯ ಮಾಡುವುದು, ತೀರ್ಮಾನಿಸುವುದರಲ್ಲಿ ಸದನಕ್ಕೆ ಸಾರ್ವಭೌಮತ್ವ ಅಧಿಕಾರ ಇರುತ್ತದೆ. ಡಿಸೆಂಬರ್ 19ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪರಾಮರ್ಶಿಸಿಕೊಂಡು ಪೀಠದಿಂದ ತೀರ್ಪು ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಡಿಜಿಪಿ ಅಲೋಕ್ ಮೋಹನ್ಗೆ ಸಿಟಿ ರವಿ ದೂರು: ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆರೋಪ
ಸದನದ ಆವರಣದ ಒಳಗೆ ಶಿಸ್ತು ಸಂರಕ್ಷಿಸುವುದು ವ್ಯವಹರಣೆ ನಿಯಂತ್ರಿಸುವ ಅಧಿಕಾರ ಸಭಾಪತಿಗೆ ಪ್ರದತ್ತವಾಗಿದೆ. ಸಭಾಪತಿ ತೀರ್ಪೇ ಇದರಲ್ಲಿ ಅಂತಿಮ. ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾದ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗವು ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಭಾಸವಾಗುತ್ತಿದೆ. ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷದ ಪ್ರಮೇಯ ನಿರ್ಮಾಣ ಆಗಬಾರದು. ಸದನದಲ್ಲಿ ನಡೆದ ಘಟನೆ ಸಭಾಪತಿಯವರ ಕಾರ್ಯವ್ಯಾಪ್ತಿಗೆ ನಿಹಿತವಾಗಿರುವುದು ತಮಗೆ ತಿಳಿದ ವಿಚಾರ ಎಂದು ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಕೇಸ್: ಸಿಟಿ ರವಿಗೆ ಬೆದರಿಕೆ ಪತ್ರ
ಕಾರ್ಯಾಂಗ ಮತ್ತು ಶಾಸಕಾಂಗದ ನಾವಿಬ್ಬರೂ ಪರಸ್ಪರ ಗೌರವದೊಂದಿಗೆ ನಮ್ಮ ಕರ್ತವ್ಯ ನಿರ್ವಹಿಸಬೇಕಿದೆ. ತಾವೂ ಕೂಡ ಸಂವಿಧಾನದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಉಳ್ಳವರು. ಸಂವಿಧಾನದ ಅಡಿಯಲ್ಲೇ ಕರ್ತವ್ಯವನ್ನು ನಿರ್ವಹಿಸುತ್ತೀರಿ ಎಂಬ ವಿಶ್ವಾಸ ಇದೆ. ಸಭಾಪತಿಯವರ ಹಕ್ಕುಗಳನ್ನು ಮತ್ತು ಸದನದ ಸಾರ್ವಭೌಮತ್ವ ಗಮನದಲ್ಲಿಟ್ಟುಕೊಂಡು ಈ ಪ್ರಕರಣವನ್ನು ನಿರ್ವಹಿಸುತ್ತೀರಿ ಎಂದು ನಂಬುತ್ತೇನೆ ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ