ಬೆಂಗಳೂರು, (ಆಗಸ್ಟ್ 14): ಬಾಕಿ ಬಿಲ್ ಪಾವತಿಗಾಗಿ ಡಿಕೆ ಶಿವಕುಮಾರ್ (DK Sivakumar) ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದ ಬಿಬಿಎಂಪಿ ಗುತ್ತಿಗೆದಾರರ(BBMP contractor) ಸಂಘದ ಸದಸ್ಯ ಹೇಮಂತ್ ಕುಮಾರ್ (Hemant Kumar) ಇದೀಗ ಯೂಟರ್ನ್ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ಇಂದು (ಆಗಸ್ಟ್ 14) ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಂತ್, ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎನ್ನುವ ಹೇಳಿಕೆ ಹಿಂಪಡೆಯುತ್ತೇನೆ. ನಾನು ಹೇಳಿಕೆ ನೀಡಿದ್ದು ತಪ್ಪು, ಇದಕ್ಕೆ ಕ್ಷಮೆ ಕೋರುತ್ತೇನೆ. ನಾನು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. SIT ತನಿಖೆ ಬಗ್ಗೆ ಮಾಹಿತಿ ಬಂತು. ಹಾಗಾಗಿ ಭಾವುಕನಾಗಿ ಹೇಳಿದೆ. ಆ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನ ಹೇಳಿಕೆಯನ್ನ ಇಲ್ಲಿಗೆ ಬಿಟ್ಟುಬಿಡಿ ಮನವಿ ಮಾಡಿದರು.
ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಮೇಲೆ ಎಮೋಷನ್. ಅವರ ಎಮೋಷನ್ ಬಗ್ಗೆ ಮಾತನಾಡಿದ್ದೇನೆ. ಅದು ತಪ್ಪು ಎಂದು ಎಲ್ಲರೂ ಹೇಳಿದ್ರು. ನನ್ನ ಕಷ್ಟಗಳಿಂದ ಅದನ್ನೇ ಇಟ್ಟುಕೊಂಡು ನಾನೂ ಸತ್ಯ ಮಾಡಲಿ ಅಂತ ಭಾವೋದ್ವೇಗಕ್ಕೊಳಗಾಗಿ ಹೇಳಿದೆ. ಆ ವಿಡಿಯೋ ವೈರಲ್ ಆಯ್ತು. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎನ್ನುವುದಕ್ಕೆ ಯಾವುದೇ ಒತ್ತಡ ಇರಲಿಲ್ಲ. ಮಧ್ಯವರ್ತಿಗಳು ಈ ರೀತಿ ಆಗುವಂತೆ ಮಾಡಿದ್ದಾರೆ. ಇದನ್ನ ನೋಡಿ ನನಗೆ ಬೇಜಾರಾಗಿದ್ದು, ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದರು.
ಬಾಕಿ ಬಿಲ್ ಪಾವತಿಗಾಗಿ ಡಿಕೆ ಶಿವಕುಮಾರ್ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹರೀಶ್ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದು, ಆ ವಿಡಿಯೋ ಫುಲ್ ವೈರಲ್ ಆಗಿತ್ತು. ಇದನ್ನು ವಿಪಕ್ಷಗಳನ್ನು ರಾಜಕೀಯವಾಗಿ ಬಳಸಿಕೊಂಡು ಆಡಳಿತರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಇದೀಗ ಇದು ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಹರೀಶ್ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.
ಗುತ್ತಿಗೆದಾರರ ಹೇಮಂತ್ ಅವರು ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ ಬಗ್ಗೆ ಬಿಜೆಪಿ ಎಂಎಲ್ಸಿ ರವಿ ಕುಮಾರ್ ಪ್ರತಿಕ್ರಿಯಿಸಿ, ಬಿಬಿಎಂಪಿ ಗುತ್ತಿಗೆದಾರರು 15% ಕಮೀಷನ್ ಆರೋಪ ಮಾಡಿದ್ದು, ರಾಜ್ಯಪಾಲರು, ಬೊಮ್ಮಾಯಿ, ಯಡಿಯೂರಪ್ಪ, ನಮ್ಮ ಮಾಜಿ ಮಂತ್ರಿಗಳ ಬಳಿ ಹೋಗಿ ಮನವಿ ಪತ್ರ ಕೊಟ್ಟಿದ್ದರು. ಈಗ ಗುತ್ತಿಗೆದಾರರು ಯೂಟರ್ನ್ ಹೊಡೆದಿದ್ದಾರೆ. ಇದನ್ನು ಯಾರು ನಂಬುತ್ತಾರೆ.. ಗುತ್ತಿಗೆದಾರರಿಗೆ ಕಾಂಗ್ರೆಸ್‌ನವರು ಬೆದರಿಕೆ ಹಾಕಿರಬೇಕು ಅದಕ್ಕೆ ಅವರು ಹೆದರಿರಬೇಕು. ಆದ್ರೆ ಕಮೀಷನ್ ಕೇಳಿರೋದು ಸತ್ಯ ಅಲ್ವಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರೇ ನಮ್ಮ ಸರ್ಕಾರ ಎರಡೇ ತಿಂಗಳಿಗೆ ಹೀಗಾಯಿತಲ್ಲ ಎಂದು ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಎರಡೇ ತಿಂಗಳಲ್ಲಿ ಕೆಟ್ಟ ಹೆಸರು ಪಡೆಯುತ್ತಿದೆ ಎಂದು ಖುದ್ದು ಸಿಎಂ ಮಾತಾಡಿದಾರೆ ಅಂತ ನಮಗೆ ಕೇಳಿಬಂದಿದೆ. ಈ ಸರ್ಕಾರ ಭ್ರಷ್ಟಾಚಾರ ಸರ್ಕಾರ. ಚೆಲುವರಾಯಸ್ವಾಮಿ ಲಂಚ ಕೇಳಿರುವುದು ಸುಳ್ಳಾ? ಗುತ್ತಿಗೆದಾರರ ಆರೋಪ ಸುಳ್ಳಾ? ಇದು ಬ್ಲಾಕ್‌ಮೇಲ್ ತಂತ್ರ. ಈ ಸರ್ಕಾರ ಹಣ ಮಾಡಿಕೊಳ್ಳಲು ಬಂದ ಸರ್ಕಾರ. ಇಷ್ಟು ವರ್ಷ ಅಧಿಕಾರದಿಂದ ದೂರ ಇದ್ದು ಹಸಿದ ಹುಲಿಯಂತಾಗಿದ್ದಾರೆ. ಎಲ್ಲರೂ ಹಣ ಮಾಡಲು ನಿಂತು ಬಿಟ್ಟಿದ್ದಾರೆ. ಈ ಸರ್ಕಾರ ಮುಂದುವರೆದಷ್ಟೂ ರಾಜ್ಯಕ್ಕೆ ನಷ್ಟ ಎಂದು ಕಿಡಿಕಾರಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:41 pm, Mon, 14 August 23