ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಯನ್ನು ಡಿಸೆಂಬರ್ ಒಳಗಾಗಿ ನಡೆಸುವಂತೆ ಹೈಕೋರ್ಟ್ (High Court) ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಆದೇಶ ನೀಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ (R Ashok) ಮಾತನಾಡಿ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಹಿಂದೇಟು ಹಾಕಲ್ಲ. ನ್ಯಾಯಾಲಯದ ಆದೇಶದ ಪ್ರತಿ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ನ್ಯಾಯಯುತವಾಗಿ ಒಬಿಸಿ ಮೀಸಲಾತಿ ಸಿಗಬೇಕೆಂಬ ಉದ್ದೇಶವಿದೆ. ಮುಂದೆ ನಡೆಯುವ ತೀರ್ಪು ನೋಡಿ ಅಂತಿಮ ನಿರ್ಧಾರ ಮಾಡುತ್ತೇವೆ. ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರಕ್ಕೆ ಬಹಳ ಇಚ್ಛಾ ಶಕ್ತಿ ಇದೆ. ಅದಕ್ಕಾಗಿಯೇ ವಾರ್ಡ್ ಪುನರ್ ವಿಂಗಡಣೆ, ಮೀಸಲಾತಿ ನೀಡಲಾಗಿದೆ ಎಂದರು.
ಹೈಕೋರ್ಟ್ನ ಪೂರ್ಣ ಮಾಹಿತಿ ಸಿಕ್ಕಿಲ್ಲ. ಇರುವ ಮಾಹಿತಿ ಪ್ರಕಾರ ಡಿಸೆಂಬರ್ 30ರೊಳಗೆ ಚುನಾವಣೆ ಮೀಸಲಾತಿ ನೀಡಲು ತಿಳಿಸಿದೆ. ಕೆಟಗರಿ, ಓಬಿಸಿ ಮೀಸಲಾತಿ ಕೊಡಬೇಕಿದೆ. ಕೋರ್ಟ್ ಆದೇಶ ಪ್ರತಿ ಪಡೆದು ತೀರ್ಮಾನ ಮಾಡುತ್ತೇವೆ.
ಬಿಬಿಎಂಪಿ ಚುನಾವಣೆಯನ್ನು ಡಿಸೆಂಬರ್ ಅಂತ್ಯದೊಳಗೆ ನಡೆಸಬೇಕು
ಬಿಬಿಎಂಪಿ ಚುನಾವಣೆ ರಾಜ್ಯ ಸರ್ಕಾರದ ಪಾಲಿಗೆ ಸವಾಲಿನ ಸಂಗತಿಯಾಗಿದೆ. ಆಡಾಳಿತಾರೂಢ ಬಿಜೆಪಿ ಸರ್ಕಾರ ಬಿಬಿಎಂಪಿ ಸಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಹರಸಾಹಸ ಪಡುತ್ತಿದೆ. ಅಲ್ಲದೇ ಇತ್ತೀಚಿಗೆ ವಾರ್ಡ್ಗಳನ್ನು ವಿಂಗಡನೆ ಮಾಡಿದೆ. ಇದರಿಂದ 193ಗಳಿದ್ದ ವಾರ್ಡ್ಗಳು 243ಕ್ಕೆ ಏರಿಕೆಯಾಗಿದೆ. ಆದರೆ ಬಿಜೆಪಿ ತನ್ನ ಅನಕೂಲದ ತಕ್ಕ ಹಾಗೆ ವಾರ್ಡ್ಗಳನ್ನು ವಿಂಗಡಣೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಈ ಸಂಬಂಧ ಕೋರ್ಟ ಮೆಟ್ಟಿಲು ಏರಿದ್ದು ಆಯ್ತು. ಈಗ ಹೈ ಕೋರ್ಟ್ ಬಿಬಿಎಂಪಿ ಚುನಾವಣೆಯನ್ನು ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದೊಳಗೆ ನಡೆಸಬೇಕು” ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಬಿಬಿಎಂಪಿ ವಾರ್ಡ್ ವಾರು ಮೀಸಲು ನಿಗದಿಯಲ್ಲಿ ತಾರತಮ್ಯ ಎಸಗಲಾಗಿದೆ” ಎಂದು ಆಕ್ಷೇಪಿಸಿ ಎಂಟು ಜನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ರಿಟ್ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿ ಸರ್ಕಾರ ಒಬಿಸಿ (ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ) ಆಯೋಗಕ್ಕೆ ಅಂಕಿ ಅಂಶ ಒದಗಿಸಬೇಕು. 2022ರ ನವೆಂಬರ್ 30ರೊಳಗೆ ಮೀಸಲಾತಿ ಪ್ರಕಟಿಸಬೇಕು ಮತ್ತು ಡಿಸೆಂಬರ್ 31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು” ಎಂದು ನ್ಯಾಯಪೀಠ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Fri, 30 September 22