BBMP Elections: ಬಿಬಿಎಂಪಿ ವಾರ್ಡ್ ವಿಂಗಡನೆ ಕುರಿತ ಅಂತಿಮ​​ ವರದಿ ಸಿದ್ಧ, ಲೋಕಸಭೆಗೂ ಮುನ್ನ ಬಿಬಿಎಂಪಿ ಎಲೆಕ್ಷನ್​ಗೆ ಪ್ಲ್ಯಾನ್

|

Updated on: Jun 12, 2023 | 3:36 PM

BBMP ವಾರ್ಡ್ ವಿಂಗಡನೆ ಎಡವಟ್ಟು ಸರಿಪಡಿಸಲು ರಚಿಸಿರುವ ಸಮಿತಿಯಿಂದ ಅಂತಿಮ ವರದಿ ಸಿದ್ಧವಾಗಿದ್ದು, ವರದಿ ಕೈ ಸೇರಿದ ನಂತರ ವಾರ್ಡ್ ವಿಂಗಡಣೆ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲದೆ, ಲೋಕಸಭೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.

BBMP Elections: ಬಿಬಿಎಂಪಿ ವಾರ್ಡ್ ವಿಂಗಡನೆ ಕುರಿತ ಅಂತಿಮ​​ ವರದಿ ಸಿದ್ಧ, ಲೋಕಸಭೆಗೂ ಮುನ್ನ ಬಿಬಿಎಂಪಿ ಎಲೆಕ್ಷನ್​ಗೆ ಪ್ಲ್ಯಾನ್
: ಬಿಬಿಎಂಪಿ ವಾರ್ಡ್ ವಿಂಗಡನೆ ಕುರಿತ ಅಂತಿಮ​​ ವರದಿ ಸಿದ್ಧಪಡಿಸಿದ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ
Follow us on

ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡನೆ (BBMP ward delimitation) ಎಡವಟ್ಟು ಸರಿಪಡಿಸಲು ರಚಿಸಿರುವ ಸಮಿತಿಯಿಂದ ಅಂತಿಮ ವರದಿ ಸಿದ್ಧವಾಗಿದ್ದು, ಇಂದು ಸಂಜೆಯೇ ಬೆಂಗಳೂರು ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಮಂದಾಗಿದೆ. ನಂತರ ವಾರ್ಡ್ ವಿಂಗಡಣೆ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲದೆ, ಲೋಕಸಭೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ.

ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಸದಸ್ಯರಾಗಿರುವ ಬೆಂಗಳೂರಿನ ಶಾಸಕರು, ಮಾಜಿ ಮೇಯರ್​ಗಳು ವಾರ್ಡ್ ವಿಂಗಡಣೆ ಬಗ್ಗೆ ಸಭೆ ನಡೆಸಿ ಸಲಹೆ, ಮಾಹಿತಿ ಪಡೆದು ವರದಿ ಸಿದ್ಧಪಡಿಸಿದ್ದಾರೆ. ಬಿಬಿಎಂಪಿ ವಾರ್ಡ್ ವಿಂಗಡನೆ ಅವಶ್ಯವೇ? ವಾರ್ಡ್​​ ವಿಂಗಡನೆ ಮಾಡದೆ ಸಮಸ್ಯೆ ಸರಿಪಡಿಸಬಹುದಾ? ಇದಕ್ಕೆ ಉಪಾಯವಿದೆಯೇ? ಎಂಬಿತ್ಯಾದಿ ಮಾಹಿತಿಯನ್ನೊಳಗೊಂಡ ಸಂಪೂರ್ಣ ವರದಿಯನ್ನು ಸಮತಿ ಸಿದ್ಧಪಡಿಸಿದೆ.

ಈ ವರದಿ ಕೈಸೇರುತ್ತಿದ್ದಂತೆ ಮೀಸಲು ಪಟ್ಟಿ ಫೈನಲ್ ಮಾಡಿ ಪಾಲಿಕೆಯ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಸರ್ಕಾರ ಪ್ಲ್ಯಾನ್​​ ಮಾಡಿಕೊಂಡಿದೆ. ಸರ್ಕಾರದ ಉಚಿತ ಯೋಜನೆಗಳ ಲಾಭ ಪಡೆಯುವ ಉದ್ದೇಶದಿಂದ ಲೋಕಸಭೆ ಚುನಾವಣೆಗೂ ಮುನ್ನ ಅಂದರೆ ನವೆಂಬರ್ ಒಳಗಾಗಿ ಚುನಾವಣೆ ನಡೆಸಲು ಮುಂದಾಗಿದೆ. ಹೀಗಾಗಿ 243 ವಾರ್ಡ್​ಗಳಿಗೆ ಹೊಸ ಮೀಸಲಾತಿಯನ್ನು ಪ್ರಕಟಿಸಲು ನಿರ್ಧಾರ ಮಾಡಲಾಗಿದ್ದು, ವರದಿಯ ಸಲಹೆ ಪಡೆದು ಪೈನಲ್ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ಮುಂದಾಗಿದೆ.

ಇದನ್ನೂ ಓದಿ: ಬಿಜೆಪಿಯಿಂದ ಸರ್ಕಾರಿ ಜಮೀನು ಆರ್​ಎಸ್​ಎಸ್​ಗೆ ಹಂಚಿಕೆ: ವಿವಾದಿತ ಭೂಮಿ ಪಟ್ಟಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಲು ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ನಾವು ವರದಿಯನ್ನು ಸಿದ್ಧಪಡಿಸಿದ್ದೇವೆ ಮತ್ತು ಅದನ್ನು ಇಂದು ಅಥವಾ ನಾಳೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗಿರುವ 243 ವಾರ್ಡ್‌ಗಳಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಹೈಕೋರ್ಟ್‌ನಲ್ಲಿ ಹಲವಾರು ಪ್ರಕರಣಗಳಿದ್ದು, ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಕ್ಲಿಯರ್ ಆಗಿದೆ. ನ್ಯಾಯಾಲಯದಿಂದ ಯಾವ ನಿರ್ದೇಶನ ಬರುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.

ವಾರ್ಡ್‌ಗಳನ್ನು 250 ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಬಗ್ಗೆ ಪ್ರಶ್ನಿಸಿದಾಗ, ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ವಾರ್ಡ್‌ಗಳನ್ನು 250 ಕ್ಕೆ ಹೆಚ್ಚಿಸಲು ಹೋದರೆ ಸಮಯ ತೆಗೆದುಕೊಳ್ಳುತ್ತದೆ. ನಾವೇ ಚುನಾವಣೆ ನಡೆಸುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಸಿಎಂ ಕೂಡ ಚುನಾವಣೆ ನಡೆಸಲು ಬಯಸಿದ್ದಾರೆ. ಹಾಗಾಗಿ ನಾವು ಬಿಜೆಪಿಯಂತೆ ಚುನಾವಣೆಯನ್ನು ಮುಂದೂಡುವುದಿಲ್ಲ ಮತ್ತು ಚುನಾಯಿತ ಪ್ರತಿನಿಧಿಗಳು ಬಿಬಿಎಂಪಿ ಪ್ರವೇಶಿಸಬೇಕೆಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ವಾರ್ಡ್ ವಿಂಗಡಣೆಯನ್ನು ಅವೈಜ್ಞಾನಿಕ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ವಾರ್ಡ್ ವಿಂಗಡಣೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಸದ್ಯ ವಾರ್ಡ್ ವಿಂಗಡಣೆಯನ್ನು ಪುನರ್ ಮಾಡಬೇಕೆ ಅಥವಾ ಈಗಿರುವ ವಾರ್ಡ್‌ಗಳನ್ನೇ ಮುಂದುವರಿಸಬೇಕೆ ಎಂಬ ಪ್ರಸ್ತಾವನೆಗಳನ್ನು ಪರಿಗಣಿಸಲು ಸಮಿತಿಯನ್ನು ರಚಿಸಲಾಗಿದೆ. ಸರಕಾರಕ್ಕೆ ವರದಿ ಬಂದ ನಂತರ ವಾರ್ಡ್‌ಗಳ ಮೀಸಲಾತಿ ಪ್ರಕಟಿಸುವ ಸಾಧ್ಯತೆ ಇದೆ.

ಈ ಹಿಂದೆ ನಗರಾಭಿವೃದ್ಧಿ ಇಲಾಖೆಯು ವಾರ್ಡ್ ಮೀಸಲಾತಿ ಕುರಿತು ಹೊರಡಿಸಿದ್ದ ಸರ್ಕಾರಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು ಮತ್ತು ಅದನ್ನು ಮರುಮಾಡುವಂತೆ ಕೇಳಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣವೂ ಬಾಕಿ ಉಳಿದಿದ್ದು, ಜುಲೈ 4 ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ. ಚುನಾವಣೆ ನಡೆಸದ ಪರಿಣಾಮ ಪಾಲಿಕೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಚುನಾಯಿತ ಜನಪ್ರತಿನಿಧಿಗಳು ಇಲ್ಲದಂತಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ