ಆಟೋ ಬಾಡಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದವ ದುರಂತ ಸಾವು
ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಆಡೋ ಚಾಲಕ ಇಬ್ಬರು ಪ್ರಯಾಣಿಕರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.
ಬೆಂಗಳೂರು: ಆಟೋ ಬಾಡಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಬೆಂಗಳೂರಿನ(Bengaluru) ಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ಭಾನುವಾರ ರಾತ್ರಿ ನಡೆದಿದೆ. ಬಾಡಿಗೆ ವಿಚಾರಕ್ಕೆ ಆಟೋ ಚಾಲಕ(auto driver) ಅಶ್ವಥ್ ಎನ್ನುವಾತ ಇಬ್ಬರು ಪ್ರಯಾಣಿಕರ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿವೆ. ಅಸ್ಸಾಂ ಮೂಲದ ಅಹ್ಮದ್ (28) ಕೊಲೆಯಾದ ಯುವಕ. ಮತ್ತೊಬ್ಬ ಯುವಕ ಅಯೂಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ಅಹ್ಮದ್ ಮತ್ತು ಗಾಯಗೊಂಡಿರುವ ಅಯೂಬ್ ಇಬ್ಬರು ಸಹೋದರರು. ಇವರಿಬ್ಬರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಯಶವಂತಪುರದಲ್ಲಿ ವಾಸವಿದ್ದರು. ಎಂದಿನಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿ ಆಟೋ ಹಿಡಿದು ಮನೆಗೆ ಹೊರಟ್ಟಿದ್ದಾರೆ. ಆಟೋ ಹತ್ತಿಸಿಕೊಂಡು ಚಾಲಕ, ಡಬಲ್ ಬಾಡಿಗೆ ಕೇಳಿದ್ದಾನೆ. ಈ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಆಟೋ ಚಾಲಕ ಮಾರಾಕಾಸ್ತ್ರಗಳಿಂದ ಸಹೋದರರ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅಹ್ಮದ್ ಮೃತಪಟ್ಟಿದ್ದು, ಅಯೂಬ್ ಗಂಭೀರ ಗಾಯಗಳಾಗಿವೆ. ಈ ಬಗ್ಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ನಿವೇಶನ ವಿಚಾರಕ್ಕೆ ಗಲಾಟೆ, ಮೂವರಿಗೆ ಗಾಯ
ಬೆಂಗಳೂರು: ನಿವೇಶನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮೂವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ. ಪತಿ ಮಹಮ್ಮದ್ ಜಾವಿದ್(47), ಪತ್ನಿ ನಸೀಮ್ ತಾಜ್(43), ಸೋದರ ಮಹಮ್ಮದ್ ಆಬಿದ್(43) ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಜಮೀರ್ ಎನ್ನುವಾತ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಗಾಯಾಳುಗಳಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Published On - 2:33 pm, Mon, 12 June 23