ಆಸ್ತಿ ತೆರಿಗೆ ವಸೂಲಿಗೆ ಹೊಸ ಪ್ಲಾನ್: ಕಾರು, ಬೈಕ್​ ಜಪ್ತಿಗೆ ಮುಂದಾದ ಬಿಬಿಎಂಪಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 18, 2023 | 4:12 PM

ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ. ತೆರಿಗೆ ಕಟ್ಟದ ಮಾಲೀಕರ ಚರಾಸ್ತಿ ಅಂದರೆ, ಕಾರು, ಬೈಕ್​ಗಳನ್ನು ಜಪ್ತಿ ಮಾಡಿ ಹರಾಜು ಹಾಕಿ ಹಣ ಪಡೆಯಲು ಬಿಬಿಎಂಪಿ ಮುಂದಾಗಿದೆ. ಇನ್ನು ಎರಡು ವಾರಗಳಲ್ಲಿ ಬಾಕಿ ತೆರಿಗೆ ಕಟ್ಟದಿದರೆ ಜಪ್ತಿ ಮಾಡಿ ವಸ್ತುಗಳನ್ನು ಹರಾಜು ಹಾಕುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆಸ್ತಿ ತೆರಿಗೆ ವಸೂಲಿಗೆ ಹೊಸ ಪ್ಲಾನ್: ಕಾರು, ಬೈಕ್​ ಜಪ್ತಿಗೆ ಮುಂದಾದ ಬಿಬಿಎಂಪಿ
ಬಿಬಿಎಂಪಿ
Follow us on

ಬೆಂಗಳೂರು, ಡಿ.18: ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ (BBMP) ಶಾಕ್ ಕೊಟ್ಟಿದೆ. ತೆರಿಗೆ ವಂಚಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಳ್ಳುವವರಿಗೆ ಆಸ್ತಿ ಹರಾಜು ಅಸ್ತ್ರ ಪ್ರಯೋಗ ಮಾಡುವ ಮೂಲಕ ಬಿಸಿ ಮುಟ್ಟಿಸಲು ಬಿಬಿಎಂಪಿ ಮುಂದಾಗಿದೆ. ಕಳೆದ ನವೆಂಬರ್‌ನಲ್ಲೇ ಬಿಬಿಎಂಪಿ ಆಸ್ತಿ ತೆರಿಗೆ (Property Tax) ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಸದ್ಯ ಈಗ ಜಾರಿಗೆ ತಂದಿದ್ದು ಬಾರಿ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಕಾರು, ಬೈಕ್​ ಜಪ್ತಿ ಮಾಡುತ್ತಿದೆ.

ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಬಾಕಿ ವಸೂಲಿಗೆ ಹೊಸ ಪ್ಲಾನ್ ಮಾಡಿದ್ದು ಇಂದಿನಿಂದ ಆಸ್ತಿ ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಆಸ್ತಿ ತೆರಿಗೆ ಕಟ್ಟದವರಿಗೆ ಮೊದಲು ನೋಟಿಸ್ ನೀಡಲಾಗುತ್ತೆ, ನಂತರ ಕಟ್ಟಡ ಮಾಲೀಕರ ಕಾರ್, ಬೈಕ್​ಗಳನ್ನು​ ಸೀಜ್ ಮಾಡಿ ಹರಾಜು ಹಾಕಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ತೆರಿಗೆ ಬಾಕಿ ಉಳಿಸಿಕೊಂಡವರ ಕಾರ್​ ಮತ್ತು ಬೈಕ್​ ಸೀಜ್ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಹನುಮಂತಪ್ಪ ಕೊಪ್ಪದ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದ ಬಸ್​ ನಿಲ್ದಾಣ ತೆರವು: ಬಿಬಿಎಂಪಿ ವಿರುದ್ಧ ಆಕ್ರೋಶ

ಪಾಲಿಕೆಗೆ ಸುಮಾರು 500 ಕೋಟಿ ರೂ. ತೆರಿಗೆ ಬಾಕಿ ಇದೆ. ನಗರದಲ್ಲಿ ಸುಮಾರು 6 ಲಕ್ಷ ಕಟ್ಟಡ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಮೊದಲು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳ ಮುಂದೆ ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಕಾನೂನಿನ ಅಡಿಯಲ್ಲಿ ಚರಾಸ್ತಿ ಜಪ್ತಿಗೆ ಬಿಬಿಎಂಪಿ ಮುಂದಾಗಿದೆ. ಎರಡು ವಾರಗಳಲ್ಲಿ ಬಾಕಿ ತೆರಿಗೆ ಕಟ್ಟದಿದ್ದರೆ ಕಾರು, ಬೈಕ್​, ವಸ್ತುಗಳನ್ನು ಜಪ್ತಿ ಮಾಡಿ ಹರಾಜು ಹಾಕುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೆಲವು ಮಾಲೀಕರು ತಮ್ಮ ಆಸ್ತಿಯ ಮಾಹಿತಿಯನ್ನು ಮರೆ ಮಾಚಿ ಕಡಿಮೆ ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ. ಬಿಬಿಎಂಪಿಯ ಎಲ್ಲ ವಲಯಗಳಲ್ಲೂ ಈ ಅಕ್ರಮ ಪತ್ತೆಯಾಗಿದೆ. ಕೆಲವೆಡೆ ಗೃಹ ಬಳಕೆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ. ಇನ್ನು ಕೆಲವರು ಎಷ್ಟೋ ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟೋದನ್ನೇ ಮರೆತಿದ್ದಾರೆ. ಇವರೆಲ್ಲರ ವಿರುದ್ಧ 2020 ರ ಬಿಬಿಎಂಪಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳೋದಾಗಿ ಬಿಬಿಎಂಪಿ ಆಯುಕ್ತರು ಕಠಿಣ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:53 am, Mon, 18 December 23