ಬೀದಿ ನಾಯಿಗಳಿಗೆ ಟ್ರೈನಿಂಗ್ ಕೊಡಿಸಲಿದೆ ಬಿಬಿಎಂಪಿ! ಡಾಗ್ ಟ್ರೈನರ್​ಗಳ ಮೂಲಕ ತರಬೇತಿಗೆ ಚಿಂತನೆ

ಬೆಂಗಳೂರಿನ ಬೀದಿನಾಯಿಗಳಿಗೆ ಬಾಡೂಟ ಕೊಡಲು ಚಿಂತನೆ ನಡೆಸಿ ಪೇಚಿಗೆ ಸಿಲುಕಿದ್ದ ಬಿಬಿಎಂಪಿ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಹೊರಟಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಅವುಗಳಿಗೆ ತರಬೇತಿ ನೀಡಲು ಚಿಂತನೆ ನಡೆಸಿದೆ. ಬೀದಿ ನಾಯಿ ಕಾಟಕ್ಕೆ ಕಡಿವಾಣ ಹಾಕಿ ಎಂದರೆ, ದಿನಕ್ಕೊಂದು ಕೆಲಸಕ್ಕೆ ಬಾರದ ಯೋಜನೆಗಳನ್ನು ಜಾರಿಗೆ ತರಲು ಹೊರಟ ಪಾಲಿಕೆ ನಡೆಗೆ ನಗರವಾಸಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಬೀದಿ ನಾಯಿಗಳಿಗೆ ಟ್ರೈನಿಂಗ್ ಕೊಡಿಸಲಿದೆ ಬಿಬಿಎಂಪಿ! ಡಾಗ್ ಟ್ರೈನರ್​ಗಳ ಮೂಲಕ ತರಬೇತಿಗೆ ಚಿಂತನೆ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Aug 20, 2025 | 7:56 AM

ಬೆಂಗಳೂರು, ಆಗಸ್ಟ್ 20: ಬೆಂಗಳೂರಿನಲ್ಲಿ ಬೀದಿನಾಯಿಗಳ (Stray Dogs) ಅಟ್ಟಹಾಸ ಮಿತಿ ಮೀರುತ್ತಿದ್ದರೆ, ಇತ್ತ ಅದಕ್ಕೆ ಬ್ರೇಕ್ ಹಾಕಬೇಕಿದ್ದ ಬಿಬಿಎಂಪಿ (BBMP) ದಿನಕ್ಕೊಂದು ಹೊಸ ಪ್ರಯೋಗ ಮಾಡಲು ಹೊರಟಿರುವುದು ನಗರವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ (Bengaluru) ಬೀದಿನಾಯಿಗಳಿಗೆ ಬಾಡೂಟ ಹಾಕಲು ಚಿಂತನೆ ನಡೆಸಿದ್ದ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ತರಬೇತಿ ಕೊಡಿಸಲು ಸಜ್ಜಾಗುತ್ತಿದೆ. ಮನುಷ್ಯರ ಮೇಲೆ ದಾಳಿ ಮಾಡುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಟ್ರೈನರ್​​ಗಳನ್ನು ನೇಮಿಸಲು ಮುಂದಾಗಿದ್ದು, ಪೊಲೀಸ್ ಡಾಗ್ ಟ್ರೈನರ್​​ಗಳ ಮೂಲಕ ನಾಯಿಗಳ ಮೇಲೆ ನಿಗಾ ಇಡಲು ಉದ್ದೇಶಿಸಿದೆ.

ಬೀದಿನಾಯಿಗಳ ನಿಯಂತ್ರಣಕ್ಕೆ ಆಹಾರ ಕೊಡುತ್ತೇವೆ ಎಂದಿದ್ದ ಪಾಲಿಕೆ ನಡೆ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಎಲ್ಲೆಲ್ಲಿ ಬೀದಿನಾಯಿಗಳು ದಾಳಿ ಮಾಡುತ್ತವೆ ಎಂದು ಗಮನಿಸಿ ಅಂಥ ಜಾಗಗಳಲ್ಲಿ ನಿಗಾ ಇಡುವ ಕೆಲಸ ಮಾಡಲು ಉದ್ದೇಶಿಸಿದೆ. ಈ ಯೋಜನೆ ಜಾರಿಗೆ ಟ್ರೈನರ್​​ಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಪೊಲೀಸ್ ನಾಯಿಗಳಿಗೆ ತರಬೇತಿ ನೀಡುವ ಟ್ರೈನರ್​​ಗಳನ್ನು ನೇಮಿಸಲು ತಯಾರಿ ನಡೆಸಿದೆ.

ಬೀದಿ ನಾಯಿಗಳಿಗೆ ಟ್ರೈನಿಂಗ್: ಖರ್ಚೆಷ್ಟು?

ಪ್ರತಿಯೊಬ್ಬ ಟ್ರೈನರ್​​ಗೆ ದಿನಕ್ಕೆ 233 ರೂಪಾಯಿ ನಿಗದಿ ಮಾಡಲು ಪಾಲಿಕೆ ಯೋಜಿಸಿದೆ. ಮತ್ತೊಂದೆಡೆ, ಪ್ರಾಯೋಗಿಕವಾಗಿ ಪರಿಣಾಮಕಾರಿಯಾದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬಿಟ್ಟು ಇಲ್ಲಸಲ್ಲದ ಯೋಜನೆಗಳ ಪ್ರಯೋಗಕ್ಕೆ ಹೊರಟ ಪಾಲಿಕೆ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬದಲು ದಿನಕ್ಕೊಂದು ಕೆಲಸಕ್ಕೆ ಬಾರದ ಪ್ರಯೋಗ ಚಿಂತನೆ ಮಾಡುತ್ತಿದೆ ಪಾಲಿಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ದೆಹಲಿ ಆಯ್ತು ತಮಿಳುನಾಡಲ್ಲೂ ಬೀದಿ ನಾಯಿ ಹಾವಳಿಗೆ ಕಡಿವಾಣ ಸಾಧ್ಯತೆ
ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ

ಇದನ್ನೂ ಓದಿ: ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ: ತಕ್ಷಣದ ಕ್ರಮಕ್ಕೆ ವಿಪಕ್ಷಗಳ ಒತ್ತಾಯ

ಒಟ್ಟಿನಲ್ಲಿ ಒಂದೆಡೆ ಬೀದಿನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳು ಪದೇ ಪದೇ ಸದ್ದುಮಾಡುತ್ತಿವೆ. ಇತ್ತ ಸಂತಾನ ಶಕ್ತಿ ಹರಣ ಚಿಕಿತ್ಸೆ, ರೇಬಿಸ್ ಲಸಿಕೆ ಹೆಚ್ಚಳ ಸೇರಿ ಬೇರೆ ಬೇರೆ ಕ್ರಮಗಳನ್ನು ಹೆಚ್ಚಿಸಬೇಕಿದ್ದ ಪಾಲಿಕೆ ಇದೀಗ ದಿನಕ್ಕೊಂದು ಹೊಸ ಪ್ರಯೋಗದ ಬಗ್ಗೆ ಮಾತನಾಡುತ್ತಿದೆ. ಸದ್ಯ ಬೆಂಗಳೂರಿನಲ್ಲಿ ದಿನೇ ದಿನೇ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಪಾಲಿಕೆ ಅದೆಷ್ಟರ ಮಟ್ಟಿಗೆ ಬೀದಿನಾಯಿಗಳಿಗೆ ಪಾಠ ಹೇಳಿ ಕಂಟ್ರೋಲ್ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 am, Wed, 20 August 25