Mantri Square Mall: ತೆರಿಗೆ ಪಾವತಿಸದ ಮಂತ್ರಿ ಮಾಲ್​ಗೆ ಶಾಕ್; ಕಚೇರಿ ವಸ್ತುಗಳನ್ನು ಮುಟ್ಟುಗೋಲು ಹಾಕಿ ಬೀಗ ಹಾಕಲಿದೆ ಬಿಬಿಎಂಪಿ

ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. 2020ರ ಆಗಸ್ಟ್​​​ನಲ್ಲಿ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಲಾಗಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು.

Follow us
Ganapathi Sharma
|

Updated on:Feb 18, 2023 | 12:51 PM

ಬೆಂಗಳೂರು: ಭಾರೀ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ಮಂತ್ರಿ ಸ್ಕ್ವೇರ್ ಮಾಲ್​ಗೆ (Mantri Square Mall) ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (BBMP) ಅಧಿಕಾರಿಗಳು ಬೀಗ ಜಡಿಯಲು ಮುಂದಾಗಿದ್ದಾರೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳು 20ಕ್ಕೂ ಮಾರ್ಷಲ್​​ಗಳು, ಪೊಲೀಸ್ ಅಧಿಕಾರಿಗಳ ಜತೆ ಮಾಲ್ ಪ್ರವೇಶಿಸಿದ್ದಾರೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಯೋಗೀಶ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮಾಲ್​​ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆಯುತ್ತಿದ್ದಾರೆ. ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. 2020ರ ಆಗಸ್ಟ್​​​ನಲ್ಲಿ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಲಾಗಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ.

ಈ ಮಧ್ಯೆ, ಬಿಬಿಎಂಪಿಯ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಮಂತ್ರಿ ಮಾಲ್ ಮಾಲೀಕತ್ವದ ಅಭಿಶೇಕ್ ಡೆವಲಪರ್ಸ್. ಆದರೆ, ಇಂದು ಬಿಬಿಎಂಪಿ ವಸ್ತುಗಳನ್ನು ಮುಟ್ಟುಗೋಲು ಹಾಕಿರುವುದು ಪ್ರೊಪ್‌ಕೇರ್ ಮಾಲ್ ಮ್ಯಾನೇಜ್​ಮೆಂಟ್​ಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ನಾವು ಕೋರ್ಟ್​ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ಪ್ರೊಪ್‌ಕೇರ್ ಮಾಲ್ ಮ್ಯಾನೇಜ್​ಮೆಂಟ್ ಮ್ಯಾನೇಜರ್ ಸಬೀರ್ ತಿಳಿಸಿದ್ದಾರೆ.

ಮಂತ್ರಿ ಮಾಲ್​​ಗೆ ಬೀಗ; ಇದೇ ಮೊದಲಲ್ಲ

ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಮಾಲ್​​ಗೆ ಬಿಬಿಎಂಪಿ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೂರ್ನಾಲ್ಕು ಬಾರಿ ಬೀಗ ಹಾಕಲಾಗಿತ್ತು. ಈ ಹಿಂದೆ 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್​ಗೆ ಬೀಗ ಹಾಕಿದ್ದರು. ನಂತರ ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು. ಮಂತ್ರಿ ಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೈಕೋರ್ಟ್ ಹೇಳಿತ್ತು.

ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸುವಂತೆ ಹೈಕೋರ್ಟ್​ನ ಏಕಸದಸ್ಯ ಪೀಠ 2021ರ ಡಿಸೆಂಬರ್​​​ನಲ್ಲಿ ಸೂಚನೆ ನೀಡಿತ್ತು. ತಕ್ಷಣ 4 ಕೋಟಿ ರೂ. ಮೊತ್ತದ ಚೆಕ್ ನೀಡಲು ಸೂಚನೆ ನೀಡಿತ್ತು. ಡಿಸೆಂಬರ್ 13ರ ಮಧ್ಯಾಹ್ನದೊಳಗೆ 2 ಕೋಟಿ ರೂ. ಡಿಡಿ ಪಾವತಿಗೆ ಸೂಚನೆ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Sat, 18 February 23