ಶಬ್ದ ಮಾಲಿನ್ಯ, ವಾಯುಮಾಲಿನ್ಯ ಬೇಡ: ಪರಿಸ್ನೇಹಿ ದೀಪಾವಳಿ ಆಚರಿಸಲು ಬಿಬಿಎಂಪಿ ಮನವಿ

| Updated By: ಗಣಪತಿ ಶರ್ಮ

Updated on: Nov 09, 2023 | 4:31 PM

ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ದೀಪಾವಳಿಯನ್ನು ಆಚರಿಸಿ. ಘನ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ, ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು ಎಂದು ಬಿಬಿಎಂಪಿ ಹೇಳಿದೆ.

ಶಬ್ದ ಮಾಲಿನ್ಯ, ವಾಯುಮಾಲಿನ್ಯ ಬೇಡ: ಪರಿಸ್ನೇಹಿ ದೀಪಾವಳಿ ಆಚರಿಸಲು ಬಿಬಿಎಂಪಿ ಮನವಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ನವೆಂಬರ್ 9: ದೀಪಾವಳಿ ಹಬ್ಬದ (Deepavali Festival) ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಪರಿಸರಸ್ನೇಹಿ ಹಬ್ಬ ಆಚರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಬಿಎಂಪಿ, ಹಬ್ಬದ ನೆಪದಲ್ಲಿ ವಾಯುಮಾಲಿನ್ಯಕ್ಕೆ ಹಾಗೂ ಶಬ್ದಮಾಲಿನ್ಯಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ನಗರದಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿ ಆಗುತ್ತದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರಾಣಿ-ಪಕ್ಷಿಗಳ ಕಲರವಕ್ಕೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಆಚರಿಸಿ ಎಂದು ಬಿಬಿಎಂಪಿ ಮನವಿ ಮಾಡಿದೆ.

ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ದೀಪಾವಳಿಯನ್ನು ಆಚರಿಸಿ. ಘನ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ, ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು. ಪಟಾಕಿಗಳನ್ನು ಕೊಳ್ಳುವ ಸಮಯದಲ್ಲಿ ಪಟಾಕಿಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಚಿಹ್ನೆಯನ್ನು ಖಚಿತಪಡಿಕೊಳ್ಳಿ. ಕ್ಯೂಆರ್ ಕೋಡ್ ಮೂಲಕ ಪಟಾಕಿಯ ಬಗ್ಗೆತಿಳಿದುಕೊಂಡು ಖರೀದಿಸಿ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರವೇ ಪಟಾಕಿಗಳನ್ನು ಸಿಡಿಸಲು ಅವಕಾಶವಿದೆ. ಪಟಾಕಿಯ ಬಳಕೆಯ ಸಮಯದಲ್ಲಿ ಪ್ರಾಣಿಗಳು, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಿ ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಇದನ್ನೂ ಓದಿ: ದೀಪಾವಳಿ: ಖಾಸಗಿ ಬಸ್​​​ಗಳ ಟಿಕೆಟ್ ದರ ಭಾರಿ ದುಬಾರಿ, ಬೆಂಗಳೂರಿನಿಂದ ಊರಿಗೆ ತೆರಳುವವರಿಗೆ ಸಂಕಷ್ಟ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು. ಈ ಮೂಲಕ ಪರಿಸರಸ್ನೇಹಿ ಹಬ್ಬವನ್ನು ಆಚರಿಸಬೇಕು ಎಂದು ಘನತ್ಯಾಜ್ಯ ವಿಭಾಗದಿಂದ ಆಟೋ ಟಿಪ್ಪರ್​​​ಗಳಲ್ಲಿ ಧ್ವನಿವರ್ಧಕಗಳ ಮೂಲಕ ನಾಗರಿಕರಿಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ