BBMP ward delimitation: ಬಿಬಿಎಂಪಿ 243 ವಾರ್ಡುಗಳ ವಿಂಗಡಣೆಯಾಯ್ತು: ಆಕ್ಷೇಪಣೆ-ಸಲಹೆಗಳನ್ನು ಸಾರ್ವಜನಿಕರು ಅಂತರ್ಜಾಲ ತಾಣದಲ್ಲಿ ಸಲ್ಲಿಸಬಹುದು

ಪ್ರಕಟಿತ ಅನುಬಂಧದಲ್ಲಿ ಪ್ರತೀ ವಾರ್ಡಿನ ಗಡಿಗಳನ್ನು ದಿಕ್ಕುಗಳಿಗೆ ಅನುಸಾರವಾಗಿ ನಮೂದಿಸಲಾಗಿದೆ. ಕೇವಲ ಮುಖ್ಯ ಸ್ಥಳಗಳು, ಬಡಾಣೆಗಳು ಹಾಗೂ ಕೆಲವೇ ಪ್ರದೇಶಗಳನ್ನು ಅನುಬಂಧದಲ್ಲಿ ತೋರಿಸಲಾಗಿದೆ.

BBMP ward delimitation: ಬಿಬಿಎಂಪಿ 243 ವಾರ್ಡುಗಳ ವಿಂಗಡಣೆಯಾಯ್ತು: ಆಕ್ಷೇಪಣೆ-ಸಲಹೆಗಳನ್ನು ಸಾರ್ವಜನಿಕರು ಅಂತರ್ಜಾಲ ತಾಣದಲ್ಲಿ ಸಲ್ಲಿಸಬಹುದು
ಬಿಬಿಎಂಪಿ 243 ವಾರ್ಡುಗಳ ವಿಂಗಡಣೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 23, 2022 | 9:13 PM

ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಸೂಚನೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕರಡು ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆ ಪ್ರಕಟಿಸಿದೆ. ವಿಶೇಷ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಿದ್ದು, ಸಾರ್ವಜನಿಕ ಸಲಹೆ, ಆಕ್ಷೇಪಣೆಗೆ ಆಹ್ವಾನ ನೀಡಿದೆ. ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬೆಂಗಳೂರು ನಗರವು ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು 2001-2011ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳವು ಶೇ. 44ಕ್ಕಿಂತಲೂ ಮೀರಿ ದಾಖಲೆಯಾಗಿದೆ. 2011ರ ಜನಗಣತಿಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರದೇಶದಲ್ಲಿನ ಜನಸಂಖ್ಯೆ 84,43,675 ಇತ್ತೆಂದು ನಿಗದಿತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡುಗಳ ಜನಸಂಖ್ಯೆಯಲ್ಲಿ ಅಸಮಾನತೆ ಸೃಷ್ಟಿಯಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಬಿಬಿಎಂಪಿಯ ವಾರ್ಡುಗಳನ್ನು 198 ರಿಂದ 243ಕ್ಕೆ ಹೆಚ್ಚಿಸಿದೆ.

ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡುಗಳ ಸೀಮಾರೇಖೆಯನ್ನು ಗುರುತಿಸುವ (delimiting the ward boundary) ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 (KARNATAKA ACT NO. 53 OF 2020 THE BRUHAT BENGALURU MAHANAGARA PALIKE ACT, 2020 FT PAR: G.O. No UDD 4 MLR 2014 dt.215.02.2014) ರಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡುಗಳ ವಿಂಗಡಣೆ ಮಾಡಿ ಪ್ರತೀ ವಾರ್ಡಿನ ಗಡಿಗಳನ್ನು ಗುರುತಿಸಿದೆ.

ವಾರ್ಡಿನ ಜನಸಂಖ್ಯೆ ಸ್ಪಷ್ಟವಾದ ಗಡಿ, ವಿಧಾನಸಭಾ ಕ್ಷೇತ್ರ ಮತ್ತು ವಾರ್ಡಿನ ವಿಸ್ತೀರ್ಣ, ವಸತಿ ಪ್ರದೇಶಗಳ ಸಾಮೀಪ್ಯತೆ(Contiguity), ಸೇವೆ-ಸೌಲಭ್ಯಗಳ ನಿರ್ವಹಣೆ ಹಾಗೂ ಸರಳ ಆಡಳಿತಾತ್ಮಕ ಅನುಕೂಲತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 243 ವಾರ್ಡುಗಳ ವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೀಮಿತವಾಗಿರುವಂತೆ ವಾರ್ಡುಗಳನ್ನು ಗುರುತಿಸಲಾಗಿದ್ದು, ಈ ಪ್ರಕ್ರಿಯೆಯಿಂದಾಗಿ ವಾರ್ಡುಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬಂದರೂ ವಿಂಗಡಣೆಯಾದ ಎಲ್ಲ ವಾರ್ಡುಗಳು ಪಾಲಿಕೆಯ ವ್ಯಾಪ್ತಿಗೆ ಸೇರಿವೆ. ವಾರ್ಡುಗಳ ವಿಂಗಡಣೆಯ ಸಂಕ್ಷಿಪ್ತ ಮಾಹಿತಿ ಈ ಕೆಳಗಿನ ಟೇಬಲ್​ ನಲ್ಲಿದೆ:

BBMP ward boundary delimitation announced

ಬಿಬಿಎಂಪಿ 243 ವಾರ್ಡುಗಳ ವಿಂಗಡಣೆಯಾಯ್ತು

ಕರ್ನಾಟಕ ಸರ್ಕಾರವು ಬಿಬಿಎಂಪಿಯ 243 ವಾರ್ಡುಗಳ ಕರಡು ಪ್ರಸ್ತಾವನೆಯನ್ನು ರಾಜ್ಯಪತ್ರದಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಿದ (ಅಧಿಸೂಚನೆ ಸಂಖ್ಯೆ: ನ ಅ ಇ 66 ಬಿಬಿಎಸ್ 2022 DO:23.06.2022). ವಾರ್ಡುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಬದಲಾದ ಗಡಿಗಳ ಮನವರಿಕೆಗಾಗಿ, ವಿಂಗಡಣೆಯಾದ ಎಲ್ಲ 243 ವಾರ್ಡುಗಳ ಸಮಗ್ರ ಮಾಹಿತಿಯನ್ನು (bbmpdelimitation2022) ಅಂತರ್ಜಾಲ ತಾಣದಲ್ಲಿ ಅಳವಡಿಸಲಾಗಿದೆ. ಹಾಲೀ ಇರುವ ಮತ್ತು ಪುನರ್ವಿಂಗಡಿತ ವಾರ್ಡುಗಳ ಸೀಮೆಯನ್ನು ಮತ್ತು ಅದರೊಳಗೊಂಡಂತೆ ಇರುವ ಪುದೇಶಗಳನ್ನು ಒಟ್ಟಿಗೇ ನೋಡಿ, ಹೋಲಿಕೆ ಮಾಡಲು ಅನುಕೂಲಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆ ಅಥವಾ ಸಲಹೆಗಳನ್ನು ಈ ಅಂತರ್ಜಾಲ ತಾಣದ ಮೂಲಕವೂ ಸಲ್ಲಿಸಬಹುದಾಗಿದೆ.

ಪ್ರಕಟಿತ ಅನುಬಂಧದಲ್ಲಿ ಪ್ರತೀ ವಾರ್ಡಿನ ಗಡಿಗಳನ್ನು ದಿಕ್ಕುಗಳಿಗೆ ಅನುಸಾರವಾಗಿ ನಮೂದಿಸಲಾಗಿದೆ. ಕೇವಲ ಮುಖ್ಯ ಸ್ಥಳಗಳು, ಬಡಾಣೆಗಳು ಹಾಗೂ ಕೆಲವೇ ಪ್ರದೇಶಗಳನ್ನು ಅನುಬಂಧದಲ್ಲಿ ತೋರಿಸಲಾಗಿದೆ. ಕಾರಣ ವಾರ್ಡಿನ ಗಡಿರೇಖೆಯನ್ನು ಆಯಾ ವಾರ್ಡಿನ ನಕಾಶೆಯಲ್ಲಿ ಗಮನಿಸಿಕೊಂಡು ಮತ್ತು ಅದರ ವ್ಯಾಪ್ತಿಯಲ್ಲಿರುವ ಎಲ್ಲ ಸ್ಥಳಗಳು, ಬಡಾವಣೆಗಳು ಮತ್ತು ಪುದೇಶಗಳು ವಿಂಗಡಣೆಗೊಂಡ ವಾರ್ಡಿಗೇ ಸೇರಿವೆಯೆಂದು ತಿಳಿಯತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Published On - 8:19 pm, Thu, 23 June 22