ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರು, ದಂಡ ಪಾವತಿಸಲು ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ಫೆ. 11ರ ವರೆಗೆ ಶೇ. 50 ರಷ್ಟು ರಿಯಾಯಿತಿ ನೀಡಿದೆ. ಇದಕ್ಕೆ ವಾಹನ ಸವಾರರಿಂದ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ನಾಲ್ಕನೇ ದಿನವಾದ ಇಂದು (ಫೆವ್ರವರಿ 06) 2.59 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದ ವಾಹನ ಸವಾರರು ದಂಡ ಕಟ್ಟಿದ್ದು, ಒಂದೇ ದಿನ 7.45 ಕೋಟಿ ದಂಡದ ಹಣ ಸಂಗ್ರಹವಾಗಿದೆ. ಇಂದು ಬೆಳಗ್ಗೆ 8 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿಲೇವಾರಿಯಾಗಿದ್ದವು. ಇದೀಗ ಆ ಸಂಖ್ಯೆ 10.62 ಲಕ್ಷಕ್ಕೆ ಏರಿಕೆಯಾಗಿದೆ. ಸದ್ಯ ರಿಯಾಯಿತಿ ಘೋಷಣೆ ಮಾಡಿ ಇಂದಿಗೆ ನಾಲ್ಕು ದಿನಗಳು ಆಗಿದ್ದು, ಈವರೆಗೆ ಒಟ್ಟು 30.96 ಕೋಟಿ ರೂಪಾಯಿ ದಂಡದ ಹಣ ಸಂಗ್ರಹ ಮಾಡಲಾಗಿದೆ.
ಜನವರಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ರಾಜ್ಯ ಸಾರಿಗೆ ಇಲಾಖೆ ನಿಯಮ ಉಲ್ಲಂಘಿಸುವವರಿಗೆ 50% ರಿಯಾಯಿತಿಯನ್ನು ನೀಡಿತು. ಬೆಂಗಳೂರು ಸಂಚಾರ ಆಯುಕ್ತ ಸಲೀಂ ಮಾತನಾಡಿ, ನಗರದಲ್ಲಿ ಎರಡು ಕೋಟಿಗೂ ಹೆಚ್ಚು ಇ-ಚಲನ್ ಪ್ರಕರಣಗಳಿದ್ದು, ಒಟ್ಟು 500 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು ಎಂದಿದ್ದರು.
ಇದನ್ನೂ ಓದಿ: Traffic Violation: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ದಂಡ ಪಾವತಿಸುವುದು ಹೇಗೆ? ಇಲ್ಲಿದೆ ವಿವರ
2022 ರಲ್ಲಿ ಹೈದರಾಬಾದ್ ಟ್ರಾಫಿಕ್ ಪೊಲೀಸರು ಇದೇ ರೀತಿಯ ರಿಯಾಯಿತಿ ಕೊಡುಗೆಯನ್ನು ನೀಡಿದ್ದರು ಮತ್ತು ಇದು ಸಂಚಾರ ನಿಯಮ ಉಲ್ಲಂಘಿಸುವವರಿಂದ ಬಾಕಿ ಉಳಿದಿರುವ ದಂಡವನ್ನು ಸಂಗ್ರಹಿಸುವಲ್ಲಿ ಭಾರಿ ಯಶಸ್ಸನ್ನು ಕಂಡಿತ್ತು. ಇದೀಗ ಬೆಂಗಳೂರಿನಲ್ಲೂ ಈ ಅಸ್ತ್ರವನ್ನು ಪ್ರಯೋಗಿಸಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ರಿಯಾಯಿತಿ ಮೇಲೆ ದಂಡ ಪಾವತಿಸಲು ಫೆ.11ರವರೆಗೆ ಕಾಲವಕಾಶ ಇದ್ದು, ಒಟ್ಟು ಎಷ್ಟು ಸಂಗ್ರಹವಾಗಲಿದೆ ಎಂಬುದನ್ನು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 pm, Mon, 6 February 23