ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿ ಘಟಿಸಿದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ವೇಳೆ ಬಯಲಾಗಿರುವ ಅಂಶಗಳು ಮೈ ನಡುಗಿಸುವಂತಿವೆ. ಐಷಾರಾಮಿ ಆಡಿ ಕ್ಯೂ3 ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಯುವಕರ ಗುಂಪು ಅಪಘಾತಕ್ಕೂ ಕೆಲವೇ ಸಮಯದ ಮುನ್ನ ಅಮಾಯಕ ಜೀವಗಳ ಜತೆ ಚೆಲ್ಲಾಟವಾಡಿದ್ದರು ಎಂಬ ಸಂಗತಿ ಹೊರಬಿದ್ದಿದೆ. ಭಾರೀ ವೇಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಕೆಲವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಸೋನಿ ವರ್ಲ್ಡ್ ಸಿಗ್ನಲ್ ಬಳಿ ಜೊಮಾಟೋ ಹುಡುಗ ಹಾಗೂ ಎನ್ ಜಿ ವಿ ಸಿಗ್ನಲ್ ಬಳಿ ಕಾರನ್ನು ತಡೆಯಲು ಹೋದ ಪೊಲೀಸರು ಅದೃಷ್ಟವಶಾತ್ ಬಚಾವಾಗಿದ್ದಾರೆ ಎಂದು ತಿಳಿದುಬಂದಿದೆ.
ಜಿಗ್ಜ್ಯಾಗ್ ರೀತಿಯಲ್ಲಿ ಕಾರು ಚಲಾಯಿಸಿದ್ದ ಯುವಕರ ಗುಂಪು ಕೋರಮಂಗಲದಲ್ಲೇ ಸುಮಾರು ಒಂದು ಗಂಟೆ ಕಾಲ ಸುತ್ತಾಡಿದೆ. ಕೋರಮಂಗಲ 60 ಅಡಿ ರಸ್ತೆಯಲ್ಲಿ ಪೊಲೀಸರು ಒಮ್ಮೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ, ಅಲ್ಲಿಂದ ಸುಮ್ಮನೆ ತೆರಳಿದ್ದ ಯುವಕರು ಎನ್ ಜಿ ವಿ ಸಿಗ್ನಲ್ ಬಳಿ ಪೊಲೀಸರ ಮೇಲೆ ಕಾರು ಹಾರಿಸಲು ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ವೇಗವಾಗಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಲು ಹೋದ ಪೊಲೀಸರ ಮೇಲೆ ಇನ್ನೇನು ಕಾರು ಹತ್ತಬೇಕು ಎನ್ನುವಷ್ಟರಲ್ಲಿ ಅದರ ವೇಗ ನೋಡಿ ಆರಕ್ಷಕರು ರಸ್ತೆಯ ಪಕ್ಕಕ್ಕೆ ಸರಿದು ಜೀವ ಉಳಿಸಿಕೊಂಡಿದ್ದಾರೆ ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ.
ಅಪಘಾತದ ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕುವ ವೇಳೆ ಅಪಘಾತಕ್ಕೂ ಮುನ್ನ ಮತ್ತೆರಡು ಬಹುದೊಡ್ಡ ದುರಂತಗಳು ತಪ್ಪಿಹೋಗಿದ್ದ ವಿಚಾರ ಮುನ್ನೆಲೆಗೆ ಬಂದಿದೆ. ಟ್ರಾಫಿಕ್ ಪೊಲೀಸರ ಜೊತೆಗೆ ಲಾ ಅಂಡ್ ಆರ್ಡರ್ ಪೊಲೀಸರಿಂದಲೂ ಮಾಹಿತಿ ಸಂಗ್ರಹವಾಗುತ್ತಿದ್ದು, ಬಹುತೇಕ ಕುಡಿದು ವಾಹನ ಚಲಾಯಿಸಿರುವ ಸಾಧ್ಯತೆ ಜಾಸ್ತಿ ಎಂದು ಪೊಲೀಸರು ಅನುಮಾನಿಸಿದ್ದಾರೆ. ಈಗಾಗಲೇ ಮೃತರ ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹ ಮಾಡಿದ್ದು, ಆ ಕುರಿತು ನಿಖರ ಮಾಹಿತಿ ಶೀಘ್ರದಲ್ಲಿ ಕೈ ಸೇರಲಿದೆ.
ಎಂಎಲ್ಎ ಪುತ್ರ ಪಾರ್ಟಿ ಮಾಡಿದ್ದರಾ? ಪಬ್, ಬಾರ್ ರೆಸ್ಟೋರೆಂಟ್ಗಳನ್ನು ಜಾಲಾಡುತ್ತಿರುವ ಪೊಲೀಸರು
ಅಪಘಾತ ಆಗಿರುವ ಕಾರಿನಲ್ಲಿ ಬರೀ 3 ಮೊಬೈಲ್ ಪೋನ್ ಗಳು ಸಿಕ್ಕಿವೆ. ಆದರೆ, ಆ ಮೂರೂ ಮೊಬೈಲ್ ಪೋನ್ಗಳ ಡಿಸ್ಪ್ಲೇ ಒಡೆದು ಹೋಗಿದೆ. ಇದರಿಂದ ಮೊಬೈಲ್ ಕಾಲ್ ಲಿಸ್ಟ್ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ಸ್ಥಳ ಪತ್ತೆಗೆ ಯತ್ನಿಸಲಾಗುತ್ತಿದ್ದು, ಸುಮಾರು 30 ಪೊಲೀಸರಿಗೆ ಪಾರ್ಟಿ ಜಾಗ ಪತ್ತೆ ಮಾಡುವ ಕೆಲಸವನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ.
ಕೋರಮಂಗಲದ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಪರಿಶೀಲನೆ ಮಾಡಲಾಗುತ್ತಿದ್ದು, ಈವರೆಗೆ ಕೋರಮಂಗಲದಲ್ಲಿ ಎಲ್ಲಿಯೂ ಪಾರ್ಟಿ ಮಾಡಿರುವ ವಿಚಾರ ಪತ್ತೆಯಾಗಿಲ್ಲ. ಹೀಗಾಗಿ ಎಂಜಿ ರೋಡ್ ಸುತ್ತಮುತ್ತ ಪಾರ್ಟಿ ಮಾಡಿರುವ ಅನುಮಾನವೂ ಇದ್ದು, ಸದ್ಯ ಎಂಜಿ ರಸ್ತೆಯ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಬಳಿಯ ಸಿಸಿ ಕ್ಯಾಮರಾ ಪರಿಶೀಲನೆ ಮಾಡಲಾಗುತ್ತಿದೆ.
ಜಿಗ್ಜ್ಯಾಗ್ ರೀತಿ ಚಲಿಸುತ್ತಿದ್ದ ಕಾರಿನಿಂದ ಸ್ವಲ್ಪದರಲ್ಲೇ ಪಾರಾದ ಜೊಮ್ಯಾಟೋ ಹುಡುಗ ಹಾಗೂ ಪೊಲೀಸರ ಅದೃಷ್ಟ ಚೆನ್ನಾಗಿತ್ತು ಎನ್ನುವ ಮಾತು ಈಗ ಕೇಳಿಬರುತ್ತಿದ್ದು, ಬಹುಮುಖ್ಯವಾಗಿ ಅಪಘಾತಕ್ಕೆ ಅತಿವೇಗ ಹಾಗೂ ಅಜಾಗರೂಕತೆಯೇ ಮೂಲ ಕಾರಣ ಎನ್ನುವ ಅಂಶ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಇದನ್ನೂ ಓದಿ:
ಅಪಘಾತಕ್ಕೆ 2 ಗಂಟೆ ಮುನ್ನ ಆಡುಗೋಡಿ ಪೊಲೀಸರು ವಾರ್ನ್ ಮಾಡಿದಾಗ, ತಾನು ಶಾಸಕನ ಪುತ್ರ ಎಂದಿದ್ದ ಕರುಣಾಸಾಗರ
ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ, ಎಸಿಪಿಯಿಂದ ತನಿಖೆ: ಸಂಚಾರಿ ಆಯುಕ್ತ ರವಿಕಾಂತೇಗೌಡ ಹೇಳಿದ್ದೇನು?
(Bengaluru Accident Update a Zomato delivery guy and Police just escaped before accident)
Published On - 7:09 am, Wed, 1 September 21