ವೈಟ್​ಫೀಲ್ಡ್​ನಲ್ಲಿ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಅರೆಸ್ಟ್, ಆದ್ರೆ ಈತ ಶೂಟರ್ ಅಲ್ಲ!

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಕೀಲ ಮಂಜುನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅಮಿತ್ ಕುಮಾರ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತ ಆರೋಪಿ ಶೂಟರ್ ಅಲ್ಲ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಗುಂಡು ಹಾರಿಸಿದ ಪವನ್ ಕುಮಾರ್ ದುಬೆಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಕೊಲೆಗೆ ಬಳಸಿದ ನಾಡ ಪಿಸ್ತೂಲ್ ಕೂಡ ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ಹಿಂದಿನ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವೈಟ್​ಫೀಲ್ಡ್​ನಲ್ಲಿ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಅರೆಸ್ಟ್, ಆದ್ರೆ ಈತ ಶೂಟರ್ ಅಲ್ಲ!
ಕೊಲೆಯಾದ ವಕೀಲ ಮತ್ತು ಆರೋಪಿ
Edited By:

Updated on: Nov 14, 2026 | 8:01 AM

ಮುಖ್ಯಾಂಶಗಳು

  • ವಕೀಲ ಮಂಜುನಾಥ್ ಕೊಲೆ ಪ್ರಕರಣದಲ್ಲಿ ಬಿಹಾರದಲ್ಲಿ ಅಮಿತ್ ಕುಮಾರ್ ದುಬೆ ಅರೆಸ್ಟ್.
  • ಬಂಧಿತ ಅಮಿತ್ ಶೂಟರ್ ಅಲ್ಲ, ಪವನ್ ಕುಮಾರ್ ದುಬೆಗಾಗಿ ಪೊಲೀಸರ ಹುಡುಕಾಟ.
  • ಕೊಲೆಗೆ ಬಳಸಿದ ನಾಡ ಪಿಸ್ತೂಲ್ ಪತ್ತೆಯಾಗಿಲ್ಲ, ತನಿಖೆ ಮುಂದುವರಿಕೆ.

ಬೆಂಗಳೂರು, ನವೆಂಬರ್ 14: ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಡೆದ ವಕೀಲ ಮಂಜುನಾಥ್ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಬೆಳವಣಿಗೆ ದಾಖಲಿಸಿದ್ದಾರೆ. ಕೊಲೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು, ಸುಮಾರು 20 ದಿನಗಳ ಕಾರ್ಯಾಚರಣೆ ಬಳಿಕ ಬಿಹಾರದಲ್ಲಿ ಅಮಿತ್ ಕುಮಾರ್ ದುಬೆ ಎಂಬಾತನನ್ನು ಬಂಧಿಸಿದ್ದಾರೆ. ಆದರೆ ಪೊಲೀಸರ ಕೈಗೆ ಸಿಕ್ಕಿರುವ ಆರೋಪಿ ಮಂಜುನಾಥ್‌ಗೆ ಗುಂಡು ಹಾರಿಸಿದ ಶೂಟರ್ ಅಲ್ಲ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಹಾಗಾದರೆ ಬಂಧಿತ ಆರೋಪಿ ಯಾರು? ಅಸಲಿ ಶೂಟರ್ ಎಲ್ಲಿದ್ದಾನೆ?

ಬಾಡಿಗೆ ಹಣ ನೀಡುವ ನೆಪದಲ್ಲಿ ಬಂದು ವಕೀಲನ ಹತ್ಯೆ!

ಅದು ಅಕ್ಟೋಬರ್ 18ರ ರಾತ್ರಿ. ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ತಮ್ಮ ಮನೆಯಲ್ಲಿದ್ದರು. ಈ ವೇಳೆ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದ ಇಬ್ಬರು ಯುವಕರು ಮನೆಗೆ ಬಂದಿದ್ದರು. ಕಳೆದ ಮೂರು ತಿಂಗಳಿನಿಂದ ಬಾಕಿ ಉಳಿದಿದ್ದ ಬಾಡಿಗೆ ಹಣ ನೀಡಲು ಬಂದಿರುವುದಾಗಿ ಹೇಳಿದ್ದರು. ಅವರಲ್ಲಿ ಒಬ್ಬ ಹಣ ನೀಡಿದ್ದ. ಮಂಜುನಾಥ್ ಹಣವನ್ನು ಲೆಕ್ಕ ಮಾಡುತ್ತಿದ್ದಂತೆ ಹಿಂದಿನಿಂದ ಬಂದ ಮತ್ತೊಬ್ಬ ಆರೋಪಿ ಅವರ ತಲೆಗೆ ಗುಂಡು ಹಾರಿಸಿದ್ದ. ಒಂದೇ ಗುಂಡಿಗೆ ಮಂಜುನಾಥ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

Loading...

ಗುಂಡಿನ ಸದ್ದು ಕೇಳುತ್ತಿದ್ದಂತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ವೇಳೆ ಶೂಟರ್ ತನ್ನ ಜೊತೆಗಿದ್ದವನಿಗೆ ಬಾಗುವಂತೆ ಸೂಚಿಸಿದ್ದ ಎನ್ನಲಾಗಿದೆ. ಬಳಿಕ ಇಬ್ಬರೂ ಒಂದೇ ಬೈಕ್‌ನಲ್ಲಿ ಕೆಲ ದೂರ ಪ್ರಯಾಣಿಸಿ ಬೇರೆ ಬೇರೆಯಾಗಿದ್ದರು. ಶೂಟರ್ ಚನ್ನೈ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಮಾರ್ಗವಾಗಿ ಬಿಹಾರಕ್ಕೆ ತೆರಳಿದ್ದರೆ, ಮತ್ತೊಬ್ಬ ಆರೋಪಿ ರೈಲಿನ ಮೂಲಕ ಉತ್ತರ ಭಾರತದ ಕಡೆಗೆ ಪ್ರಯಾಣಿಸಿದ್ದ.

20 ದಿನಗಳ ಕಾರ್ಯಾಚರಣೆ ಬಳಿಕ ಅಮಿತ್ ದುಬೆ ಅರೆಸ್ಟ್!

ಆರೋಪಿಗಳ ಪತ್ತೆಗಾಗಿ ವೈಟ್‌ಫೀಲ್ಡ್ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು. ಸುಮಾರು 20 ದಿನಗಳ ಕಾರ್ಯಾಚರಣೆ ಬಳಿಕ ನವೆಂಬರ್ 12ರಂದು ಬಿಹಾರದ ಬಕ್ಸಾ ಗ್ರಾಮದ ಬಳಿ ಅಮಿತ್ ಕುಮಾರ್ ದುಬೆಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ಪ್ರಾಥಮಿಕ ವಿಚಾರಣೆಯಲ್ಲಿ ಅಮಿತ್ ಶೂಟರ್ ಅಲ್ಲ ಎಂಬುದು ತಿಳಿದುಬಂದಿದೆ. ಹಣ ನೀಡಲು ಮಾತ್ರ ತನ್ನನ್ನು ಕರೆದುಕೊಂಡು ಬಂದಿದ್ದರು. ಮತ್ತೊಬ್ಬ ಆರೋಪಿ ಗುಂಡು ಹಾರಿಸುವ ವಿಚಾರವೇ ತನಗೆ ತಿಳಿದಿರಲಿಲ್ಲ ಎಂದು ಅಮಿತ್ ಹೇಳಿರುವುದಾಗಿ ತಿಳಿದುಬಂದಿದೆ.

ಇದೀಗ ಪೊಲೀಸರು ಬಂಧಿತ ಅಮಿತ್‌ನನ್ನು ವಿಚಾರಣೆ ನಡೆಸುತ್ತಿದ್ದು, ಗುಂಡು ಹಾರಿಸಿದ ಪವನ್ ಕುಮಾರ್ ದುಬೆಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಕೊಲೆಗೆ ಬಳಸಿದ ನಾಡ ಪಿಸ್ತೂಲ್ ಕೂಡ ಇನ್ನೂ ಪತ್ತೆಯಾಗಿಲ್ಲ. ಬಾಡಿಗೆ ಹಣದ ವಿವಾದವೇ ಕೊಲೆಗೆ ಕಾರಣವೇ? ಇದರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಶೂಟರ್ ಎಲ್ಲಿದ್ದಾನೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವೈಟ್‌ಫೀಲ್ಡ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us