ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ತಡರಾತ್ರಿ ವಕೀಲನ ಕೊಲೆ! ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ಹತ್ಯೆ
ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ತಡರಾತ್ರಿ ವಕೀಲ ಮಂಜುನಾಥ್ ಅವರನ್ನು ಮನೆ ಬಾಗಿಲಲ್ಲೇ ಹಣೆಗೆ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶೆಡ್ ಬಾಡಿಗೆ ಹಾಗೂ ಆಸ್ತಿ ಜಮೀನು ವಿವಾದವೇ ಈ ಕೊಲೆಗೆ ಕಾರಣವೆಂದು ಶಂಕಿಸಲಾಗಿದೆ. ಹಂತಕರಿಗಾಗಿ ವೈಟ್‌ಫೀಲ್ಡ್ ಪೊಲೀಸರಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಮುಖ್ಯಾಂಶಗಳು
- ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತಡರಾತ್ರಿ ಮನೆಗೆ ನುಗ್ಗಿ ವಕೀಲರ ಬರ್ಬರ ಹತ್ಯೆ.
- ಬಾಗಿಲು ತೆರೆಯುತ್ತಿದ್ದಂತೆ ವಕೀಲ ಮಂಜುನಾಥ್ ಹಣೆಗೆ ಗುಂಡಿಟ್ಟು ಹಂತಕರ ಪರಾರಿ.
- ಬಾಡಿಗೆ ಹಾಗೂ ಆಸ್ತಿ ಜಮೀನು ವಿವಾದವೇ ಕೊಲೆಗೆ ಕಾರಣವೆಂದು ಶಂಕೆ.
ಬೆಂಗಳೂರು, ಅಕ್ಟೋಬರ್ 19: ನಗರದಲ್ಲಿ ತಡರಾತ್ರಿ ವಕೀಲರೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಿನ್ನೆ (ಅ. 18) ರಾತ್ರಿ ಸುಮಾರು 11:30 ರ ವೇಳೆಗೆ ಈ ಕೃತ್ಯ ನಡೆದಿದೆ. ಕೊಲೆಯಾದವರನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ.
ಆ ರಾತ್ರಿ ನಡೆದಿದ್ದೇನು?
ವೃತ್ತಿಯಲ್ಲಿ ವಕೀಲರಾಗಿದ್ದ ಮಂಜುನಾಥ್, ಕೋಟಿಗಟ್ಟಲೆ ಮೌಲ್ಯದ ಆಸ್ತಿ ಹಾಗೂ ವೈಟ್‌ಫೀಲ್ಡ್ ಭಾಗದಲ್ಲಿ ಹತ್ತಾರು ಎಕರೆ ಜಮೀನು ಹೊಂದಿದ್ದರು. ತಮ್ಮ ಜಮೀನಿನಲ್ಲಿದ್ದ ಶೆಡ್‌ಗಳನ್ನು ಅವರು ಬಾಡಿಗೆಗೆ ನೀಡಿದ್ದರು ಎಂದು ಹೇಳಲಾಗಿದೆ.
ಕೊಲೆಗೂ ಒಂದು ಗಂಟೆ ಮುಂಚೆ ಶೆಡ್‌ಗಳ ಬಾಡಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಹಾಗೂ ಬಾಡಿಗೆದಾರರ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ಗಲಾಟೆಯ ಬೆನ್ನಲ್ಲೇ ತಡರಾತ್ರಿ 11:30 ರ ಸುಮಾರಿಗೆ ಇಬ್ಬರು ಯುವಕರು ಮಂಜುನಾಥ್ ಅವರ ಮನೆ ಬಳಿ ಬಂದಿದ್ದಾರೆ. ಮನೆ ಬಾಗಿಲು ಬಡಿದು ಮಂಜುನಾಥ್ ಅವರನ್ನು ಹೊರಗೆ ಕರೆದಿದ್ದಾರೆ. ಮಂಜುನಾಥ್ ಬಾಗಿಲು ತೆರೆಯುತ್ತಿದ್ದಂತೆ, ದುಷ್ಕರ್ಮಿಗಳು ಏಕಾಏಕಿ ಅವರ ಹಣೆಗೆ ನೇರವಾಗಿ ಒಂದು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಾಡಿಗೆ ಜಗಳವೇ ಹತ್ಯೆಗೆ ಕಾರಣ?
ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಜಮೀನು ವ್ಯಾಜ್ಯ ಹಾಗೂ ಬಾಡಿಗೆದಾರರೊಂದಿಗಿನ ವೈಷಮ್ಯವೇ ಈ ಭೀಕರ ಕೊಲೆಗೆ ಮುಖ್ಯ ಕಾರಣವೆಂದು ಶಂಕಿಸಲಾಗಿದೆ. ಸದ್ಯ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಿಹಾರ ಮೂಲದ ಇಬ್ಬರಿಂದ ಹತ್ಯೆ ಶಂಕೆ
ಬಿಹಾರ ಮೂಲದ ಇಬ್ಬರು ಸ್ವಿಗ್ಗಿ ಡೆಲಿವರಿ ಬೈಕ್‌ನಲ್ಲಿ ಬಂದು ಕೃತ್ಯವೆಸಗಿದ್ದಾರೆ. ನೂರಕ್ಕೂ ಹೆಚ್ಚು ಶೆಡ್‌ಗಳನ್ನು ಬಾಡಿಗೆಗೆ ನೀಡಿದ್ದ ಮಂಜುನಾಥ್ ಬಳಿ ಮಧ್ಯರಾತ್ರಿ ಹಣ ಎಣಿಕೆ ಮಾಡುತ್ತಿದ್ದ ವೇಳೆ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆಸ್ತಿ ವಿಚಾರವಾಗಿ ಸುಪಾರಿ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ವೈಟ್‌ಫೀಲ್ಡ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 am, Mon, 19 October 26




