ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್: ಸಿದ್ದರಾಮಯ್ಯ, ಖರ್ಗೆ ಇದನ್ನು ಒಪ್ಪುತ್ತಾರೆಯೇ? ಬಿಜೆಪಿ ಪ್ರಶ್ನೆ

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ನಡೆದ ಸಾಮೂಹಿಕ ನಮಾಜ್ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಭದ್ರತಾ ಲೋಪ ಮತ್ತು ಓಲೈಕೆ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡಿದೆ. ಅನುಮತಿ ಪಡೆದ ಮೇಲೂ ಆರ್​ಎಸ್​ಎಸ್ ನಡೆಸುವ ಪಥಸಂಚಲನದ ಬಗ್ಗೆ ಪ್ರಶ್ನೆ ಮಾಡುವ ಸಿಎಂ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ನಮಾಜ್ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ಆಗ್ರಹಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್: ಸಿದ್ದರಾಮಯ್ಯ, ಖರ್ಗೆ ಇದನ್ನು ಒಪ್ಪುತ್ತಾರೆಯೇ? ಬಿಜೆಪಿ ಪ್ರಶ್ನೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ (ಚಿತ್ರ ಕೃಪೆ: x.com/vijayrpbjp)
Image Credit source: X

Updated on: Nov 10, 2025 | 12:00 PM

ಬೆಂಗಳೂರು, ನವೆಂಬರ್ 10: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (Kempegowda Airport) ನಿಲ್ದಾಣದ ಟರ್ಮಿನಲ್-2ರಲ್ಲಿ ಸಾಮೂಹಿಕ ನಮಾಜ್ (Namaz) ಮಾಡಿರುವ ವಿಡಿಯೋ ವೈರಲ್ (Video Viral) ಆದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಇದನ್ನು ಒಪ್ಪುತ್ತಾರೆಯೇ ಎಂದು ಕರ್ನಾಟಕ ಬಿಜೆಪಿ (BJP) ವಕ್ತಾರ ವಿಜಯ್ ಪ್ರಸಾದ್ ಪ್ರಶ್ನಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ವ್ಯಕ್ತಿಗಳು ಅತಿ ಹೆಚ್ಚಿನ ಭದ್ರತೆ ಇರುವ ವಿಮಾನ ನಿಲ್ದಾಣ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ? ಸಂಬಂಧಿತ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್‌ಎಸ್‌ಎಸ್ ಪಥ ಸಂಚಲನೆ ನಡೆಸಿದಾಗಲೂ ಆಕ್ಷೇಪಿಸುವ ಸರ್ಕಾರ, ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್​ ಮಾಡಿದಂಥ ಚಟುವಟಿಕೆಗಳನ್ನು ಏಕೆ ನಿರ್ಲಕ್ಷಿಸುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಇದು ಅಂತಹ ಸೂಕ್ಷ್ಮ ವಲಯದಲ್ಲಿ ಗಂಭೀರ ಭದ್ರತಾ ಕಳವಳ ಉಂಟುಮಾಡುವುದಿಲ್ಲವೇ ಎಂದು ವಿಜಯ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಕರ್ನಾಟಕ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಎಕ್ಸ್ ಸಂದೇಶ


ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು ವಿಮಾನ ನಿಲ್ದಾಣದ ಟರ್ಮಿನಲ್-2ರ ಒಳಭಾಗದಲ್ಲೇ ಸಾಮೂಹಿಕವಾಗಿ ನಮಾಜ್ ಮಾಡಿದ್ದರು. ಇಷ್ಟಾದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಸುಮ್ಮನೆ ನೋಡುತ್ತಾ ನಿಂತಿದ್ದರು.

ಸರ್ಕಾರಿ ಪ್ರಾಯೋಜಿತ ನಮಾಜ್: ಅಶೋಕ್

ರಾಜ್ಯ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಓಲೈಕೆ ಮಾಡುತ್ತಿದೆ . ಹಾಗಾಗಿ ಹೇಳುವವರು ಕೇಳುವವರು ಯಾರೂ ಇಲ್ಲ. ಕಾಂಗ್ರೆಸ್ ಸರ್ಕಾರ ಇರುವ ಕಡೆ ಏರ್​ಪೋರ್ಟ್​ಗಳಲ್ಲಿ ಮಾತ್ರ ಈ ರೀತಿ ಆಗುತ್ತಿದೆ. ಇದು ಕೂಡಾ ಸರ್ಕಾರಿ ಪ್ರಾಯೋಜಿತ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಆರ್​ಎಸ್​ಎಸ್ ನೋಡಿದರೆ ದುರುಗುಟ್ಟುವುದು. ಮುಸ್ಲಿಮರನ್ನು ನೋಡಿದರೆ ತಬ್ಬಿಕೊಳ್ಳುವುದು, ಟೋಪಿ ಹಾಕಿಕೊಳ್ಳುವುದು ಎಂದು ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್ ಆರೋಪ, ವೈರಲ್ ಆಗ್ತಿದೆ ವಿಡಿಯೋ

ಏತನ್ಮಧ್ಯೆ ವಿಮಾನ ನಿಲ್ದಾಣದಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ತಿಳಿದುಕೊಂಡು ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ವಿಮಾನ ನಿಲ್ದಾಣ ಆಡಳಿತ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ