
ಬೆಂಗಳೂರು, ಮೇ 27: ಬೆಂಗಳೂರಿನಲ್ಲಿ (Bengaluru) ಸದ್ಯ ಎರಡು ಕಿಮೀ ಪ್ರಯಾಣಕ್ಕೆ ಆಟೋ ಮೀಟರ್ ದರ ಕನಿಷ್ಠ 30 ರುಪಾಯಿ ಇದೆ. ಇದೀಗ ಆ ದರವನ್ನು ಎರಡು ಕಿಮೀ ಗೆ 40 ರುಪಾಯಿಗೆ ಏರಿಕೆ (Auto Fare Hike) ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಸಮ್ಮತಿಸಲಾಗಿದೆ. ಈ ತಿಂಗಳು ಅಥವಾ ಜೂನ್ನಲ್ಲಿ ಆದೇಶ ಹೊರ ಬೀಳಬಹುದು ಎಂಬ ನಿರೀಕ್ಷೆ ಇದೆ. ಆದರೆ ಆ್ಯಪ್ ಆಧಾರಿತ ಕಂಪನಿಗಳು ಪ್ರಯಾಣಿಕರಿಂದ ಈಗಾಗಲೇ ದುಪ್ಪಟ್ಟು ದರವನ್ನು ವಸೂಲಿ ಮಾಡಲು ಮುಂದಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಆ್ಯಪ್ ಆಧಾರಿತ ಕಂಪನಿಗಳು 30 ರುಪಾಯಿ ಇರುವ ಆಟೋ ಕನಿಷ್ಠ ದರವನ್ನು 50 ರುಪಾಯಿ ಪಡೆದುಕೊಳ್ಳುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎರಡು ಕಿಮೀ ಪ್ರಯಾಣದ ನಂತರದ ಪ್ರತಿ ಕಿಮೀಗೆ ಸದ್ಯ 15 ರುಪಾಯಿ ದರ ಇದೆ. ಆ್ಯಪ್ ಆಧಾರಿತ ಕಂಪನಿಗಳು ಇದನ್ನು 30 ರುಪಾಯಿಗೆ ಏರಿಕೆ ಮಾಡಿವೆ ಎಂಬ ದೂರುಗಳು ಕೇಳಿಬಂದಿವೆ. ಸದ್ಯ ನಗರದಲ್ಲಿ ಹಳೆಯ ಮೀಟರ್ ದರವೇ ಜಾರಿಯಲ್ಲಿದೆ. ಆದರೂ ಅಗ್ರಿಗೇಟರ್ ಕಂಪನಿಗಳಾದ ಓಲಾ, ಉಬರ್, ನಮ್ಮಯಾತ್ರಿ, ರ್ಯಾಪಿಡೋ ತಮಗೆ ತಾವೇ ದರವನ್ನು ಏರಿಕೆ ಮಾಡಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿವೆ.
ಸರ್ಕಾರ ಸೂಚಿಸಿದ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಆದೇಶ ಇದೆ. ಅದನ್ನು ಮೀರಿ ಪ್ರಯಾಣಿಕರಿಂದ ಹೆಚ್ಚಿನ ದರವನ್ನು ಪಡೆದುಕೊಂಡರೆ ಅಂತಹ ಕಂಪನಿಗಳ ವಿರುದ್ಧ ಮೊದಲು ನೋಟಿಸ್ ನೀಡಲಾಗುತ್ತದೆ. ನಂತರ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆರ್ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ಮೇ ತಿಂಗಳ ಆರಂಭದಲ್ಲಿ ದರ ಏರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ದರ ಏರಿಕೆ ಸಂಬಂಧ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಗ್ರೀನ್ ಸಿಗ್ನಲ್, ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ವಿವರ
ಒಟ್ಟಿನಲ್ಲಿ, ಆಟೋ ಮೀಟರ್ ದರ ಏರಿಕೆಗೆ ಜಿಲ್ಲಾಧಿಕಾರಿಗಳು ಇನ್ನೂ ಗ್ರೀನ್ ಸಿಗ್ನಲ್ ನೀಡಿಯೇ ಇಲ್ಲ. ಅಷ್ಟರಲ್ಲೇ ಅಗ್ರಿಗೇಟರ್ ಕಂಪನಿಗಳು ಆಗಲೇ ಹೆಚ್ಚಿನ ದರವನ್ನು ವಸೂಲಿ ಮಾಡಲು ಮುಂದಾಗಿರುವುದು ದುರಂತವೇ ಸರಿ.