
ಬೆಂಗಳೂರು, ಜುಲೈ 14: ನಮ್ಮೆ ಮೆಟ್ರೋ (Namma Metro) ರೈಲು ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಆಟೋ (Auto) ಪ್ರಯಾಣ ದರ ಹೆಚ್ಚಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸದ್ಯ ಎರಡು ಕಿಮೀ ಪ್ರಯಾಣಕ್ಕೆ ಆಟೋ ಮೀಟರ್ ದರ ಕನಿಷ್ಠ 30 ರೂಪಾಯಿ ಇದೆ. ಇದೀಗ ಆ ದರವನ್ನು ಎರಡು ಕಿಮೀಗೆ 36 ರುಪಾಯಿಗೆ ಏರಿಕೆ (Auto Fare Hike) ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನೂತನ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇದನ್ನೂ ಓದಿ: ಆಟೋ ಪ್ರಯಾಣ ದರ ಏರಿಕೆಗೂ ಮುನ್ನವೇ ಪ್ರಯಾಣಿಕರಿಗೆ ಸಂಕಷ್ಟ: ಅಗ್ರಿಗೇಟರ್ ಕಂಪನಿಗಳ ದುಪ್ಪಟ್ಟು ದರ ವಸೂಲಿ
ಸರ್ಕಾರ ಸೂಚಿಸಿದ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಆದೇಶ ಇದೆ. ಅದನ್ನು ಮೀರಿ ಪ್ರಯಾಣಿಕರಿಂದ ಹೆಚ್ಚಿನ ದರವನ್ನು ಪಡೆದುಕೊಂಡರೆ ಅಂತಹ ಕಂಪನಿಗಳ ವಿರುದ್ಧ ಮೊದಲು ನೋಟಿಸ್ ನೀಡಲಾಗುತ್ತದೆ. ನಂತರ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆರ್ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.
Published On - 10:39 pm, Mon, 14 July 25