ಬೆಂಗಳೂರು: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ತೆರವಿಗೆ ಬಿಬಿಎಂಪಿ ಆದೇಶ

| Updated By: Rakesh Nayak Manchi

Updated on: Aug 14, 2023 | 5:38 PM

ಬೆಂಗಳೂರು ನಗರದಲ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್​, ಫ್ಲೆಕ್ಸ್​ಗಳನ್ನು ತೆರವುಗೊಳಿಸ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಇದರ ಬೆನ್ನಲ್ಲೇ, ಬ್ಯಾನರ್​ಗಳ ತೆರವಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದರು. ಅದರಂತೆ ಬಿಬಿಎಂಪಿಯಿಂದ ಆದೇಶವೂ ಹೊರಬಿದ್ದಿದೆ.

ಬೆಂಗಳೂರು: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ತೆರವಿಗೆ ಬಿಬಿಎಂಪಿ ಆದೇಶ
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)
Follow us on

ಬೆಂಗಳೂರು, ಆಗಸ್ಟ್ 14: ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತು ಧ್ವಜಗಳನ್ನು ತೆರವುಗೊಳಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ (BBMP) ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್‌ (High Court) ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತ ಡಿಸಿಎಂ, ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ (DK Shivakumar), ಫ್ಲೆಕ್ಸ್ ಬ್ಯಾನರ್​ಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ಸಾರ್ವಜನಿಕ ಪ್ರದೇಶಗಳಲ್ಲಿನ ಅಕ್ರಮ ಫ್ಲೆಕ್ಸ್‌ಗಳು, ಬಂಟಿಂಗ್ಸ್, ಧ್ವಜಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಿ ಬಿಬಿಎಂಪಿ ಆದೇಶಿಸಿದೆ.

ಅನಧಿಕೃತ ಫ್ಲೆಕ್ಸ್, ಬ್ಯಾನರ್​, ಧ್ವಜಗಳಿಂದ ನಗರದ ಸೌಂದರ್ಯ ಹಾಳಾಗುತ್ತಿರುವ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಆಗಸ್ಟ್ 2 ರಂದು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಅವುಗಳ ತೆರವಿಗೆ ಆದೇಶಿಸಿತ್ತು. ತಪ್ಪಿತಸ್ಥರಿಗೆ ಪ್ರತಿ ಬ್ಯಾನರ್‌ಗೆ 50,000 ರೂ. ದಂಡ ವಿಧಿಸುವಂತೆ ಹೇಳಿತ್ತು. ನಗರದಲ್ಲಿ ಅಳವಡಿಸಿದ್ದ ಅನಧಿಕೃತ 59,000 ಫ್ಲೆಕ್ಸ್, ಬ್ಯಾನರ್​ಗಳನ್ನು ಬಿಬಿಎಂಪಿ ತೆಗೆದುಹಾಕಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಬಿಬಿಎಂಪಿ ಬೆಂಕಿ ದುರಂತ ರಹಸ್ಯ ಬಯಲು ಆಯುಕ್ತ ತುಷಾರ್​ ಗಿರಿನಾಥ್​​ , ಕೇಂದ್ರ ವಿಭಾಗದ ಡಿಸಿಪಿ ಹೇಳಿದ್ದಿಷ್ಟು

ಆದಾಗ್ಯೂ, ಇಂತಹ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಗರ ನಾಗರಿಕ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದೆ ಎಂದು ಹೇಳಲಾಗುತ್ತಿರುವ ಕಾರಣ ಬೆಂಗಳೂರು ನಿವಾಸಿಗಳು ಬಿಬಿಎಂಪಿಯ ಆದೇಶದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

“ಆದೇಶಗಳು ಅನುಷ್ಠಾನಕ್ಕಿಂತ ಭಿನ್ನವಾಗಿವೆ” ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ನವೀನ್ ರಾಜಶೇಖರ್ ಎಂಬವರು ಟ್ವೀಟ್ ಮಾಡಿ, “ಈ ಅಧಿಸೂಚನೆಯನ್ನು ನಿಮ್ಮ ಎಲ್ಲಾ ಬಿಬಿಎಂಪಿ ವಾರ್ಡ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಅನುಮತಿಯಿಲ್ಲದೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳಿಗೆ ಏನನ್ನೂ ಕಟ್ಟಲು ಅವಕಾಶ ನೀಡಬಾರದು” ಎಂದಿದ್ದಾರೆ.

ಇನ್ನು ಕೆಲವರು ಬಿಬಿಎಂಪಿಯು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. “ಕ್ರಮವನ್ನು ಸರಿಯಾಗಿ ಜಾರಿಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಕಿರಣ್ ಗೌಡ ಪ್ರತಿಕ್ರಿಯೆ ಮಾಡಿದ್ದಾರೆ. ನಗರದಾದ್ಯಂತ ಹುಟ್ಟುಹಬ್ಬದ ಪೋಸ್ಟರ್‌ಗಳು ಮತ್ತು ಫ್ಲೆಕ್ಸ್‌ಗಳಲ್ಲಿ ಮಂತ್ರಿಗಳು, ರಾಜಕೀಯ ವ್ಯಕ್ತಿಗಳು ಇತ್ಯಾದಿಗಳ ಕೊಳಕು ಮುಖಗಳನ್ನು ನೋಡಿ ನನಗೆ ಬೇಸರವಾಗಿದೆ. ಈ ಪೋಸ್ಟರ್‌ಗಳು ಮತ್ತು ಫ್ಲೆಕ್ಸ್‌ಗಳು ಕಣ್ಣಿಗೆ ರಾಚುತ್ತವೆ ಮತ್ತು ಅವು ನಮ್ಮ ನಗರದ ಸೌಂದರ್ಯವನ್ನು ಹಾಳುಮಾಡುತ್ತವೆ” ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ