ಬಿಕ್ಲು ಶಿವ ಕೊಲೆ ಕೇಸ್​: ಇಂಟರ್ಪೋಲ್ ನೋಟಿಸ್​ಗೆ ಭಯಬಿದ್ದು ಭಾರತಕ್ಕೆ ಬಂದ ಜಗ್ಗ CID ಬಲೆಗೆ

ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈಗೆ ಪರಾರಿಯಾಗಿದ್ದ ಜಗ್ಗ ವಿವಿಧ ದೇಶಗಳಿಗೆ ತೆರಳಿದ್ದನು. ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ನೀಡಿ ಜಗ್ಗನನ್ನು ಹುಡುಕುತ್ತಿದ್ದ ಸಿಐಡಿ, ಆತ ಭಾರತಕ್ಕೆ ಮರಳುತ್ತಿದ್ದ ಮಾಹಿತಿ ಪಡೆದು ಬಂಧಿಸಿದೆ.

ಬಿಕ್ಲು ಶಿವ ಕೊಲೆ ಕೇಸ್​: ಇಂಟರ್ಪೋಲ್ ನೋಟಿಸ್​ಗೆ ಭಯಬಿದ್ದು ಭಾರತಕ್ಕೆ ಬಂದ ಜಗ್ಗ CID ಬಲೆಗೆ
ಆರೋಪಿ ಜಗ್ಗ

Updated on: Aug 26, 2025 | 10:06 AM

ಬೆಂಗಳೂರು, ಆಗಸ್ಟ್​ 26: ರೌಡಿಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲ ಶಿವ (Biklu Shiva) ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನನ್ನು (Jagga) ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಬಿಕ್ಲು ಶಿವನನ್ನು ಕೊಲೆ ಮಾಡಿದ ಬಳಿಕ ಎ1 ಜಗ್ಗ ದುಬೈಗೆ ಹಾರಿದ್ದನು. ಈತನಿಗಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಆರೋಪಿ ಜಗ್ಗ ಇಂದು (ಆ.26) ದುಬೈನಿಂದ ದೆಹಲಿಗೆ ಬರುತ್ತಿದ್ದಂತೆ ಸಿಐಡಿ ಅಧಿಕಾರಿಗಳು ಬಂಧಿಸಿ, ಕಚೇರಿಗೆ ಕರೆತಂದಿದ್ದಾರೆ.

ಬಿಕ್ಲು ಶಿವನ ಕೊಲೆ

ಜುಲೈ 15ರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಪುಟ್ ಪಾತ್ ಮೇಲೆ ನಿಂತಿದ್ದ. ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ8 ಆರೋಪಿಗಳು ಬಿಕ್ಲು ಶಿವನ ಮೇಲೆ ದಾಳಿ ಮಾಡಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಬಿಕ್ಲು ಶಿವನನ್ನು ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿಸಿ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

3-4 ದೇಶ ಸುತ್ತಾಡಿದ್ದ ಜಗ್ಗ

ಬಿಕ್ಲು ಶಿವ ಕೊಲೆ ಬಳಿಕ ಎ1 ಜಗ್ಗ ದುಬೈಗೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಪ್ರಕರಣದ ತನಿಖೆ ಸಿಐಡಿ ಹೆಗಲೇರಿದ ಮೇಲೆ ಜಗ್ಗನ ಪ್ರತಿಯೊಂದು ಚಲನವಲನ​ದ ಮಾಹಿತಿ ಸಿಐಡಿ ಅಧಿಕಾರಿಗಳಿಗೆ ಸಿಗಲು ಆರಂಭಿಸಿತು. ಬಿಕ್ಲು ಶಿವನ ಕೊಲೆಯಾದ ದಿನವೇ ಆರೋಪಿ ಜಗ್ಗ ಬೆಂಗಳೂರು ಬಿಟ್ಟು ಓಡಿದ್ದನು. ಬೆಂಗಳೂರಿನಿಂದ ಚೆನ್ನೈ, ಚೆನ್ನೈನಿಂದ ದುಬೈಗೆ ಹಾರಿದ್ದನು. ನಂತರ ದುಬೈನಿಂದ, ಥೈಲ್ಯಾಂಡ್, ಇಂಡೋನೇಷ್ಯಾ ಅಂತ ವಿವಿಧ ದೇಶಗಳನ್ನು ಸುತ್ತಾಡುತ್ತಿದ್ದನು.

ಜಗ್ಗನ ಪ್ರತಿ ಚಲನವಲನ​ದ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸಿಐಡಿ ಅಧಿಕಾರಿಗಳು ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದರು. ಆತ ಇರುವ ಸ್ಥಳಗಳ ಮಾಹಿತಿ ಪಡೆದು ಅಲ್ಲಿಗೆ ನೋಟಿಸ್ ಕಳುಹಿಸುತ್ತಿದ್ದರು. ಜಗ್ಗ ಥೈಲ್ಯಾಂಡ್​ನಲ್ಲಿದ್ದಾಗ ಸಿಐಡಿ ಇಂಟರ್ಪೋಲ್ ನೋಟಿಸ್ ಆತನಿಗೆ ತಲುಪಿತ್ತು. ಆಗ, ಜಗ್ಗನಿಗೆ ನಡುಕ ಶುರುವಾಗಿತ್ತು. ಯಾವ ದೇಶದಲ್ಲಿದ್ದರೂ ಇವರು ಬಿಡುವುದಿಲ್ಲ ಎಂದು ಭಯ ಬಿದ್ದಿದ್ದ ಜಗ್ಗ ಕೂಡಲೇ ವಿಮಾನ ಹತ್ತಿ ಥೈಲ್ಯಾಂಡ್​ನಿಂದ ಶ್ರೀಲಂಕಾಕ್ಕೆ ತೆರಳಿದ್ದಾನೆ.

ಇತ್ತ, ಜಗ್ಗನ ಚಲನವಲನ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸಿಐಡಿ ತನಿಖಾ ತಂಡ ಆತ ಭಾರತಕ್ಕೆ ಬರುತ್ತಿರುವ ವಿಚಾರ ತಿಳಿದು ದೆಹಲಿಗೆ ತೆರಳಿದ್ದಾರೆ. ಶ್ರೀಲಂಕಾಕ್ಕೆ ತೆರಳಿದ್ದ ಜಗ್ಗ ಅಲ್ಲಿಂದ ದೆಹಲಿ ವಿಮಾನ ಹತ್ತಿ, ಭಾರತಕ್ಕೆ ಬಂದಿದ್ದಾನೆ. ಆರೋಪಿ ಜಗ್ಗ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುತ್ತಿದ್ದಂತೆ, ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಟ್ರಾನ್ಸಿಟ್ ವಾರಂಟ್ ಪಡೆದು ಸಿಐಡಿ ಅಧಿಕಾರಿಗಳು ಜಗ್ಗನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಎಸ್.ಪಿ ವೆಂಕಟೇಶ್, ಡಿವೈಎಸ್ಪಿಗಳಾದ ನಂದಕುಮಾರ್, ಗೋಪಾಲ್ ನಾಯ್ಕ್, ಹೇಮಂತ್, ಇನ್ಸಪೆಕ್ಟರ್​ಗಳಾದ ಮಂಜುನಾಥ್ ಹಾಗೂ ಪ್ರಶಾಂತ್​ ಅವರ ತಂಡ ಜಗ್ಗನನ್ನು ಬಂಧಿಸಿದೆ.

ವರದಿ: ವಿಕಾಸ್​ ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 am, Tue, 26 August 25