Ganesha festival – ಗಣೇಶ ಚತುರ್ಥಿ: ಬೆಂಗಳೂರಿನಲ್ಲಿ ಬುಧವಾರ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ (ಆಗಸ್ಟ್ 27) ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಹೂವುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.

ಬೆಂಗಳೂರು, ಆಗಸ್ಟ್ 27: ಗಣೇಶ ಚತುರ್ಥಿಯ (Ganesh Chaturthi) ಸಂದರ್ಭದಲ್ಲಿ ಬುಧವಾರ ಬೆಂಗಳೂರಿನಾದ್ಯಂತ ಪ್ರಾಣಿ ವಧೆ, ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಈ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳು ಎರಡೂ ಮುಚ್ಚಲ್ಪಟ್ಟಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಗೌರಿ ಗಣೇಶ ಹಬ್ಬದ ಸಂಬ್ರಮ ಬೆಂಗಳೂರಿನಲ್ಲಿ ಕಳೆಗಟ್ಟಿದೆ. ಕೆಆರ್ ಮಾರುಕಟ್ಟೆಯಲ್ಲಿ ಹೂವು-ಹಣ್ಣು ಖರೀದಿ ಭರಾಟೆ ಜೋರಾಗಿದೆ.
ಗಣೇಶ ಚತುರ್ಥಿ ಆಚರಣೆಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಇತ್ತ ಬಿಬಿಎಂಪಿ ಕೂಡ ಪರಿಸರಸ್ನೇಹಿ ಗಣಪನ ಮೂರ್ತಿ ಖರೀದಿಸಿ ಹಬ್ಬ ಆಚರಿಸುವಂತೆ ಕರೆ ನೀಡಿದ್ದು, ಆ ನಿಟ್ಟಿನಲ್ಲಿ ನಟ-ನಟಿಯರ ಮೂಲಕ ಜಾಗೃತಿಯನ್ನೂ ಮೂಡಿಸುತ್ತಿದೆ.
ಗಣೇಶ ಹಬ್ಬದಂದು ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳನ್ನು ಬಳಸದೆ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಿಸಲು ಹಾಸ್ಯ ನಟರಾದ ಪುಷ್ಪ ರಾಜ್ ಬೊಳ್ಳರ್ ರವರು ಹಾಗೂ ಖ್ಯಾತ ನಟಿ ಸಿಂಧು ಲೋಕನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ ಎಂದು ಎಕ್ಸ್ ಸಂದೇಶದಲ್ಲಿ ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಎಕ್ಸ್ ಸಂದೇಶ
ಗಣೇಶ ಹಬ್ಬದಂದು ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳನ್ನು ಬಳಸದೆ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಿಸಲು ಹಾಸ್ಯ ನಟರಾದ ಪುಷ್ಪ ರಾಜ್ ಬೊಳ್ಳರ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.#BBMP #GaneshChaturthi2025 #ganeshfestival #SuFromSo pic.twitter.com/fnHlpUJk4N
— Bruhat Bengaluru Mahanagara Palike (@BBMPofficial) August 25, 2025
ಗೌರಿ ಗಣೇಶ ಹಬ್ಬ ಹಿನ್ನೆಲೆ ಹೂವಿನ ಬೆಲೆ ಏರಿಕೆ
ಬೆಂಗಳೂರಿನ ಹೃದಯ ಭಾಗದ ಕೆ.ಆರ್. ಮಾರ್ಕೆಟ್‌ನಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಖರೀದಿ ನಡೆಯುತ್ತಿದೆ. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಜನರು ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಆಗಮಿಸುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಹೂವುಗಳ ಬೆಲೆಯಲ್ಲಿ ಏರಿಕೆಯಾಗುವುದು ಸಾಮಾನ್ಯವಾಗಿದ್ದರೂ, ಈ ಬಾರಿಯ ಏರಿಕೆ ಗಮನಾರ್ಹವಾಗಿದೆ.
ಇದನ್ನೂ ಓದಿ: ಗಣೇಶ ವಿಸರ್ಜನೆ ಸ್ಥಳ ನಿಗದಿ ಮಾಡಿದ ಬಿಬಿಎಂಪಿ: ಕಲ್ಯಾಣಿ, ಸಂಚಾರಿ ಟ್ಯಾಂಕ್‌ಗಳ ವಿವರ ಇಲ್ಲಿದೆ
ಮಲ್ಲಿಗೆ ಹೂವು ಕೆಜಿಗೆ 1200 ರೂಪಾಯಿಗಳು, ಸೇವಂತಿ 500-600 ರೂಪಾಯಿಗಳು, ಚೆಂಡು ಹೂವು 100 ರೂಪಾಯಿಗಳು, ಸುಗಂಧರಾಜ 400 ರೂಪಾಯಿಗಳು ಮತ್ತು ಕನಕಾಂಬರ 2500 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಬಾಳೆಕಂದು ಒಂದಕ್ಕೆ 20 ರೂಪಾಯಿಗಳು ಮತ್ತು ಮಾವಿನ ಸೊಪ್ಪಿನ ಚಿಕ್ಕ ಕಂಟೆಗೂ 20 ರೂಪಾಯಿ ಇದೆ. ವ್ಯಾಪಾರಿಗಳ ಪ್ರಕಾರ, ಬೆಲೆ ಏರಿಕೆಗೆ ಹೂವುಗಳ ಸಾಗಾಟ ಮತ್ತು ಬೇಡಿಕೆಯ ಹೆಚ್ಚಳ ಕಾರಣವಾಗಿದೆ.




