ಬೆಂಗಳೂರು: ನಗರದ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. 74 ವರ್ಷದ ಅಂಬುಸ್ವಾಮಿ ಎಂಬುವರ ಸ್ಥಿತಿ ಗಂಭೀರವಾಗಿದೆ. ಶೇಕಡಾ 60ರಷ್ಟು ಸುಟ್ಟಗಾಯಗಳಿಂದ ಅಂಬುಸ್ವಾಮಿ ಬಳಲುತ್ತಿದ್ದಾರೆ. ಜೇಮ್ಸ್ ರಾಜಕುಮಾರ್, ಗಣೇಶ್ಗೆ ಶೇಕಡಾ 45 ರಷ್ಟು ಸುಟ್ಟಗಾಯ ಆಗಿದೆ. ಜೇಮ್ಸ್ ರಾಜಕುಮಾರ್, ಗಣೇಶ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಟ್ಟಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಬಂಧ ಸ್ಫೋಟ ಸಂಭವಿಸಿದ ಗೋದಾಮು ಮಾಲೀಕ ಬಾಬು ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ವಿ.ವಿ.ಪುರಂ ಪೊಲೀಸರು ಬಾಬುನನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟವಾದ ಘಟನಾ ಸ್ಥಳದ ಪಕ್ಕದ ಕಚೇರಿ ಬಾಗಿಲು, ಕಿಟಕಿಗಳು ಛಿದ್ರವಾಗಿದೆ. ಪಕ್ಕದ ಕಟ್ಟಡದ ಮೊದಲ ಮಹಡಿಯಲ್ಲಿದ್ದ ಪ್ರಿಂಟಿಂಗ್ ಪ್ರೆಸ್ ಬಾಗಿಲು, ಕಿಟಕಿ ಛಿದ್ರವಾಗಿದೆ. ಘಟನೆ ನಡೆದಾಗ ಪ್ರಿಂಟಿಂಗ್ ಪ್ರೆಸ್ನಲ್ಲಿ ಯಾರೂ ಇರಲಿಲ್ಲ. ಅದೃಷ್ಟವಶಾತ್ ಅಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಎನ್.ಟಿ. ಪೇಟೆ ಪಟಾಕಿ ಗೋಡೌನ್ನಲ್ಲಿ ಎರೆಡು ಭಾಗ ಮಾಡಲಾಗಿತ್ತು. ಗೋಡೌನ್ ಹಿಂಭಾಗ ಪಟಾಕಿ ಶೇಖರಿಸಿಟ್ಟುಕೊಂಡಿದ್ರು. ಮುಂಭಾಗದಲ್ಲಿ ಪಂಕ್ಚರ್ ಗ್ಯಾರೆಜ್ ಇತ್ತು. 11.55 ರಿಂದ 12 ಗಂಟೆ ಸಮಯದಲ್ಲಿ ಸ್ಫೋಟ ಆಗಿದೆ. ಸ್ಫೋಟದ ತೀವ್ರತೆಗೆ ಗೋಡೌನ್ ಮೇಲ್ಛಾವಣಿ ಹಾರಿಹೋಗಿದೆ. ಅಕ್ಕ ಪಕ್ಕದ ಮನೆಯ ಕಿಟಕಿ ಗಾಜು,ಬಾಹಿಲು ಎಲ್ಲವೂ ಪೀಸ್ ಪೀಸ್ ಆಗಿದೆ ಎಂದು ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಫೋಟ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಫೋಟದ ಬಗ್ಗೆ ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆ ಹೇಗೆ ಆಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ. ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಅನಾಹುತ ಆಗಿದೆ. ಸ್ಫೋಟದಲ್ಲಿ ಹಲವು ವಾಹನಗಳೂ ಜಖಂಗೊಂಡಿವೆ. ಅದು ಪಟಾಕಿ ಸ್ಫೋಟಿಸಿರಬಹುದು. ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ಸಂಗ್ರಹ ಮಾಡಲಾಗಿದೆ. ಆದರೆ, ಇದೇ ಕಾರಣಕ್ಕಾಗಿ ಸ್ಫೋಟ ಆಗಿದೆಯಾ ಎಂಬ ಮಾಹಿತಿ ಇಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ನ್ಯೂತರಗುಪೇಟೆ ಸ್ಫೋಟ: ಮೃತರ ಕುಟುಂಬಕ್ಕೆ 2ಲಕ್ಷ ರೂ. ಪರಿಹಾರ ಘೋಷಿಸಿದ ಜಮೀರ್ ಅಹ್ಮದ್; ಪ್ರತ್ಯಕ್ಷದರ್ಶಿಗಳ ಮಾಹಿತಿ ಲಭ್ಯ
ಇದನ್ನೂ ಓದಿ: Gas Cylinder Blast: ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ! ಸಿಲಿಂಡರ್ ಸ್ಫೋಟ, ಮೂವರ ದೇಹಗಳು ಛಿದ್ರ ಛಿದ್ರ
Published On - 3:58 pm, Thu, 23 September 21