
ಬೆಂಗಳೂರು, ನವೆಂಬರ್ 28: ಬೆಂಗಳೂರು (Bengaluru) ನಗರದಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಸುಗಳಿಂದ ಆಕ್ಸಿಡೆಂಟ್, ಬ್ರೇಕ್ ಡೌನ್ ಮುಂತಾದ ಸಮಸ್ಯೆಗಳು ಉಂಟಾಗುತ್ತಿದ್ದು, ಪ್ರಯಾಣಿಕರಿಂದ ಹಲವು ಆರೋಪಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ಬಿಎಂಟಿಸಿ ನಿಗಮ ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ ಬರೋಬ್ಬರಿ 25 ಕೋಟಿ ರುಪಾಯಿ ದಂಡ ಹಾಕಲು ಮುಂದಾಗಿದೆ.
ನಗರದಲ್ಲಿ ಎಲೆಕ್ಟ್ರಿಕ್ ಬಸ್ಗಳಿಂದ ಆಕ್ಸಿಡೆಂಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ರೇಕ್ ಡೌನ್, ಬ್ಯಾಟರಿ ಡೌನ್ ಸಮಸ್ಯೆಗಳಿಂದ ನಡುರೋಡಲ್ಲಿ ಬಸ್ಗಳು ಕೆಟ್ಟು ನಿಲ್ಲುತ್ತಿದ್ದು, ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಪ್ಪಂದದಂತೆ ಕಾರ್ಯನಿರ್ವಹಿಸದ ನಾಲ್ಕು ಖಾಸಗಿ ಸಂಸ್ಥೆಗಳಿಗೆ 25 ಕೋಟಿಗೂ ಹೆಚ್ಚು ದಂಡ ಹಾಕಲಾಗಿದೆ ಎಂದು ತಿಳಿದು ಬಂದಿದೆ.ಇದೀಗ ಇವಿ ಬಸ್ ಚಾಲಕರಿಗೆ ಬಿಎಂಟಿಸಿಯೇ ತರಬೇತಿ ನೀಡುತ್ತಿದ್ದು, ವೇತನ ಪಾವತಿಗೆ ನಿರ್ದಿಷ್ಟ ದಿನಾಂಕವನ್ನೂ ನಿಗದಿಮಾಡಿದೆ.
ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ ಗೆ 9.80 ಕೋಟಿ ರೂ. ದಂಡ, ಸ್ವಿಚ್ ಮೊಬಿಲಿಟಿ ಸಂಸ್ಥೆಗೆ 3 ಕೋಟಿ ರೂ. ದಂಡ ವಿಧಿಸಿದ ಬಿಎಂಟಿಸಿ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ಗೆ 11.99 ಕೋಟಿ ರೂ. ಓಎಚ್‌ಎಂ ಗ್ಲೋಬಲ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್‌ಗೆ 67 ಲಕ್ಷ ರೂ. ದಂಡ ಹಾಕಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ಈ ಎಲೆಕ್ಟ್ರಿಕ್ ಬಸ್ಗಳು ಜಿಸಿಸಿ (Gross Cost Contracting) ಮಾಡೆಲ್ ಅಡಿಯಲ್ಲಿ ಸಂಚಾರ ಮಾಡುತ್ತಿವೆ. 12 ವರ್ಷಗಳ ಅವಧಿಗೆ ಜಿಸಿಸಿಗೆ ಗುತ್ತಿಗೆ ನೀಡಲಾಗಿದ್ದು, ಒಂದು ಕಿ.ಮೀ ನಾನ್ ಎಸಿ ಗೆ 41 ರೂ., ಎಸಿ ಬಸ್ ಗೆ 65 ರೂ.ವರೆಗೆ ಬಿಎಂಟಿಸಿ ನಿಗಮ ಎಲೆಕ್ಟ್ರಿಕ್ ಬಸ್ ಕಂಪನಿಗೆ ಹಣ ನೀಡುತ್ತಿದ್ದು, ಬಿಎಂಟಿಸಿ ನಿಗಮದಿಂದ ಕಂಡಕ್ಟರ್ ಮತ್ತು ಎಲೆಕ್ಟ್ರಿಕ್ ಬಸ್ ಕಂಪನಿಗಳಿಂದಲೇ ಡ್ರೈವರ್ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ ಬೆಂಗಳೂರು: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?
ಈ ಬಗ್ಗೆ ಮಾತನಾಡಿದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಪ್ರಯಾಣಿಕರೊಬ್ಬರು, ಹೆಣ್ಣೂರಿನಿಂದ ಹೆಬ್ಬಾಳಕ್ಕೆ ಎಲೆಕ್ಟ್ರಿಕ್ ಬಸ್ನಲ್ಲಿ ಪ್ರಯಾಣ ಮಾಡುವಾಗ ಬೆಂಕಿ ಕಾಣಿಸಿಕೊಂಡಿತ್ತು. ಅದೃಷವಶಾತ್ ಮಳೆ ಬರುತ್ತಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಬಿಎಂಟಿಸಿ ನಿಗಮ ಎಲೆಕ್ಟ್ರಿಕ್ ಬಸ್ಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ತುಂಬಾ ವೇಗವಾಗಿ ಮತ್ತು ರ್ಯಾಷ್ ಡ್ರೈವಿಂಗ್ ಮಾಡ್ತಾರೆ. ಹಾಗಾಗಿ ಎಲೆಕ್ಟ್ರಿಕ್ ಬಸ್ನಲ್ಲಿ ಸಂಚಾರ ಮಾಡಲು ಭಯ ಆಗುತ್ತದೆ. ಯಾವಾಗ ಬ್ಲ್ಯಾಸ್ಟ್ ಆಗತ್ತದೋ ಎನ್ನಿಸುತ್ತದೆ ಎಂದು ಹಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.