ಬೆಂಗಳೂರು: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?
ಬಿಎಂಟಿಸಿ ಚಾಲಕರು ಮತ್ತು ಕಂಡಕ್ಟರ್ಗಳಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಇದಕ್ಕೆ ಮೇಲಾಧಿಕಾರಿಗಳ ಅತಿಯಾದ ಒತ್ತಡವೇ ಕಾರಣ ಎಂದು ಸಾರಿಗೆ ನೌಕರರು ಆರೋಪಿಸಿದ್ದಾರೆ. ಈ ವರ್ಷ 30 ನೌಕರರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅಧಿಕಾರಿಗಳ ಒತ್ತಡ ಸಾರಿಗೆ ಸಿಬ್ಬಂದಿಯ ಹೃದಯ ಹಿಂಡುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಬೆಂಗಳೂರು, ನವೆಂಬರ್ 26: ಬಿಎಂಟಿಸಿಯಲ್ಲಿ (BMTC) ಪ್ರತಿವರ್ಷ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪುತ್ತಿರುವ ಡ್ರೈವರ್ ಮತ್ತು ಕಂಡಕ್ಟರ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಅಧಿಕಾರಿಗಳ ಒತ್ತಡವೇ ಕಾರಣ ಎಂದು ಸಾರಿಗೆ ನೌಕರರ ಮುಖಂಡರು ಆರೋಪಿಸುತ್ತಿದ್ದಾರೆ. ನಗರದ ವಿಪರೀತ ಟ್ರಾಫಿಕ್,ಧೂಳು ಸಮಸ್ಯೆಗಳ ನಡುವೆ ಮೇಲಾಧಿಕಾರಿಗಳು ಹೆಚ್ಚಿನ ಒತ್ತಡ ಹೇರುತ್ತಿರುವುದರಿಂದ ಸಿಬ್ಬಂದಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಈ ವರ್ಷ ಹೃದಯಘಾತದಿಂದ 30 ಸಿಬ್ಬಂದಿ ಸಾವು
ಬಿಎಂಟಿಸಿಯಲ್ಲಿ 6500ಕ್ಕೂ ಬಸ್ ಗಳಿದ್ದು, 20 ಸಾವಿರಕ್ಕೂ ಹೆಚ್ಚು ಡ್ರೈವರ್, ಕಂಡಕ್ಟರ್ಗಳಿದ್ದಾರೆ. ಇದರಲ್ಲಿ ವರ್ಷದಿಂದ ವರ್ಷಕ್ಕೆ ಹಾರ್ಟ್ ಅಟ್ಯಾಕ್ನಿಂದ ಪ್ರಾಣ ಕಳೆದಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಸ್ ಚಲಾಯಿಸುವ ಸಮಯದಲ್ಲಿಯೇ ಹೃದಯಾಘಾತಕ್ಕೊಳಗಾದ ಹಲವು ಚಾಲಕರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಉದಾಹರಣೆಗಳಿವೆ. ಡ್ರೈವರ್ ಮತ್ತು ಕಂಡಕ್ಟರ್ ಸೇರಿ ಈ ವರ್ಷ 30 ಸಿಬ್ಬಂದಿ ಹೃದಯಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಹೃದಯಾಘಾತಕ್ಕೊಳಗಾದ 16ಕ್ಕೂ ಹೆಚ್ಚು ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಜಗದೀಶ್, ನೌಕರರು ಹಾರ್ಟ್ ಅಟ್ಯಾಕ್ನಿಂದ ಪ್ರಾಣ ಕಳೆದುಕೊಳ್ಳಲು ಅಧಿಕಾರಿಗಳ ಒತ್ತಡವೇ ಕಾರಣ. ಕಡಿಮೆ ಅವಧಿಯಲ್ಲಿ ರೂಟ್ ಕ್ಲಿಯರ್ ಮಾಡಲು ಹೇಳುತ್ತಾರೆ. ಇದರಿಂದ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ BMTC ಬಸ್ ಚಾಲನೆಯಲ್ಲಿ ಇರುವಾಗಲೇ ಡ್ರೈವರ್ಗೆ ಹೃದಯಾಘಾತ
ಶೇ.30 ರಷ್ಟು ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ಗಳಿಗೆ ಬಿಪಿ, ಶುಗರ್ ಸಮಸ್ಯೆ
ಕಳೆದ ವರ್ಷ 24 ಕಂಡಕ್ಟರ್ ಹಾಗೂ ಡ್ರೈವರ್ಗಳು ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದು, ಶೇ.30 ರಷ್ಟು ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ಗಳಿಗೆ ಬಿಪಿ, ಶುಗರ್ ಸಮಸ್ಯೆ ಕಾಡುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತಾನಾಡಿದ ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ, ಬಿಎಂಟಿಸಿಯಲ್ಲಿ ಒಟ್ಟು 28 ಸಾವಿರ ನೌಕರರು ಕೆಲಸ ಮಾಡುತಿದ್ದಾರೆ. 40 ವರ್ಷ ಮೇಲ್ಪಟ್ಟ 13,668 ನೌಕರರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಉಚಿತವಾಗಿ ಹೃದಯ ತಪಾಸಣೆ ಮಾಡಿಸಲಾಗಿದ್ದು, ಉಳಿದ 5,968 ನೌಕರರಿಗೆ ತಪಾಸಣೆ ಜಾರಿಯಲ್ಲಿದೆ. ಈ ವರ್ಷ ಎಲ್ಲರಿಗೂ ತಪಾಸಣೆ ಮಾಡಲಾಗುತ್ತದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



